ಜಿಲ್ಲೆಯಲ್ಲಿ ಮೂವತ್ತು ಕೋಟಿ ರೂ. ವೆಚ್ಚದಲ್ಲಿ ಅಟೋಮೊಬೈಲ್ ಟೌನ್ ಶಿಪ್ ನಿರ್ಮಾಣ ವಾಹನ ಪುನರ್ ನಿರ್ಮಾಣ ಸಹಿತ ಬಿಡಿಭಾಗಗಳು ಅಗ್ಗವಾಗಲಿವೆ
0
ಡಿಸೆಂಬರ್ 19, 2018
ಕುಂಬಳೆ: ಜಿಲ್ಲೆಯಲ್ಲಿ ಬಸ್ಸು ಸಹಿತ ಘನವಾಹನಗಳ ಮೇಲ್ಭಾಗ ನಿರ್ಮಾಣದ ಘಟಕ ಅಟೋಮೊಬೈಲ್ ಟೌನ್‍ಶಿಪ್ ಶೀಘ್ರದಲ್ಲಿ ಆರಂಭವಾಗಲಿದೆ. 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಹೊಂದಲಿರುವ ಅತ್ಯಾಧುನಿಕ ಟೌನ್‍ಶಿಪ್ ಉದ್ಯಮವನ್ನು ಆರಂಭಿಸುವ ಯೋಜನೆಗೆ ರೂಪುರೇಶೆ ಸಿದ್ಧವಾಗಿದೆ ಎಂದು ಅಟೋಮೊಬೈಲ್ ವರ್ಕ್‍ಶಾಪ್ ಅಸೋಸಿಯೇಶನ್ ಹೇಳಿದೆ. ಉದ್ಯಮದ ಮೂಲಕ ವರ್ಷಕ್ಕೆ 120 ಕೋಟಿ.ರೂ ವರಮಾನ ಬರಲಿದೆ ಎಂದು ಅಂದಾಜಿಸಲಾಗಿದೆ. ಕಾಸರಗೋಡು ಅನಂತಪುರ ವಾಣಿಜ್ಯ ಕೇಂದ್ರ ಅಥವಾ ಕಾಞಂಗಾಡು ಗುರುವನ ಎಂಬೆಡೆಯಲ್ಲಿರುವ 20 ಎಕರೆ ಸ್ಥಳದಲ್ಲಿ ಉದ್ಯಮ ಆರಂಭಗೊಳ್ಳಲಿದೆ. ಮೂಲಭೂತ ಸೌಕರ್ಯಗಳನ್ನು ಕೊಡಮಾಡುವ ಮೂಲಕ ಕೇಂದ್ರ ಸಣ್ಣ ಕೈಗಾರಿಕಾ ಮಂತ್ರಾಲಯವು 25 ಕೋಟಿ.ರೂ. ಆರ್ಥಿಕ ನೆರವು ನೀಡಲಿದೆ. 5 ಕೋಟಿ ರೂ. ಗಳನ್ನು ಅಸೋಸಿಯೇಶನ್ ಸದಸ್ಯರು ಹೂಡಿಕೆಯಾಗಿ ನೀಡಲಿದ್ದಾರೆ. ಜಿಲ್ಲೆಯ ಹೊರಗಿನ ಉದ್ಯಮಿಗಳು ಟೌನ್‍ಶಿಪ್ ನಿರ್ಮಾಣದಲ್ಲಿ ಸಹಭಾಗಿಗಳಾಗಬಹುದು. ಯೋಜನೆಯ ಪ್ರಾಥಮಿಕ ಹಂತದ ರೂಪುರೇಖೆ ಸಿದ್ಧಗೊಂಡಿದೆ. ಜಿಲ್ಲೆಯ ಅಟೋಮೊಬೈಲ್ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಲಿರುವ ಟೌನ್‍ಶಿಪ್ ಅನ್ನು ಕಾಸರಗೋಡು ಅಟೋಮೊಬೈಲ್ ಕ್ಲಸ್ಟರ್ ಎಂದು ಹೆಸರಿಸಲಾಗಿದೆ. ಯೋಜನೆ ಪೂರ್ಣಗೊಂಡ ನಂತರದ ಮೊದಲ ಹತ್ತು ವರ್ಷ ರಾಜ್ಯ ಸರಕಾರದ ಅಧೀನದಲ್ಲಿ ಟೌನ್ ಶಿಪ್ ಕಾರ್ಯಾಚರಿಸಲಿದೆ. ಕಾಞಂಗಾಡು ಬ್ಲಾಕ್ ಉದ್ಯಮ ಅಭಿವೃದ್ಧಿ ಅಧಿಕಾರಿಯನ್ನು ಘಟಕದ ಅಭಿವೃದ್ಧಿ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಯೋಜನೆಯ ಸಂಪೂರ್ಣ ವರದಿಯನ್ನು ರಾಜ್ಯ ಸರಕಾರ ಮತ್ತು ಕೇಂದ್ರ ಉದ್ಯಮ ಅಭಿವೃದ್ಧಿ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಅಧಿಕೃತರು ತಿಳಿಸಿದ್ದಾರೆ. ದ್ವಿಚಕ್ರ ವಾಹನಗಳು ಸಹಿತ ಘನ ವಾಹನಗಳ ಸಮಸ್ಯೆಗಳನ್ನು ಪರಿಹರಿಸುವ, ಮಲ್ಟಿ ಏಕ್ಸಿಲ್ ವಾಹನಗಳ ತೊಂದರೆಗಳನ್ನು ಪರಿಶೋಧಿಸುವ ಸ್ಕಾನಿಂಗ್ ವ್ಯವಸ್ಥೆ ಮತ್ತು ದುರಸ್ತಿ ಕಾರ್ಯ ನಡೆಯಲಿದೆ.
ಬಸ್ ಬಾಡಿ ನಿರ್ಮಾಣ-2000 ಮಂದಿಗೆ ಉದ್ಯೋಗ:
ಬಸ್ಸು, ಲಾರಿಗಳು ಸೇರಿದಂತೆ ಘನ ವಾಹನಗಳ ದುರಸ್ತಿ ಸಹಿತ ಮೇಲ್ಭಾಗ ನಿರ್ಮಾಣವು ಅಟೋಮೊಬೈಲ್ ಟೌನ್‍ಶಿಪ್‍ನ ಪ್ರಧಾನ ಲಕ್ಷ್ಯವಾಗಿದೆ. 10 ಸಾವಿರ ಚದರಡಿಯಲ್ಲಿ ಟೌನ್‍ಶಿಪ್ ಘಟಕ ಆರಂಭಗೊಳ್ಳಲಿದೆ. ಇದಕ್ಕಾಗಿ ಎರಡೂವರೆ ಎಕರೆ ಸ್ಥಳದ ಅವಶ್ಯಕತೆಯಿದೆ. 2 ಕೋಟಿ ರೂ. ಘಟಕ ನಿರ್ಮಾಣಕ್ಕೆ ಅಗತ್ಯವಾಗಿದೆ. ಉಳಿದಂತೆ ಆಡಳಿತ ಕಚೇರಿ, ಡಿಸೈನ್ ಕೇಂದ್ರ, ಪರಿಶೋಧನಾ ಬ್ಲಾಕ್, ಪರೀಕ್ಷಾ ಕೇಂದ್ರ, ಸಂಶೋಧನಾ ಕೇಂದ್ರ, ಸಂಸ್ಕರಣಾ ಘಟಕ, ಸೇರಿದಂತೆ ಮಾರುಕಟ್ಟೆ ಕೇಂದ್ರ ಸಹಿತ ಹಲವು ಬಿಡಿ ಉಪಕರಣಗಳನ್ನು ಮಾರಾಟ ಮಾಡಲು ಸಹಾಯಕವಾಗಬಹುದಾದ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ. ಒಟ್ಟು ಜಿಲ್ಲೆಯ 2000 ಮಂದಿಗೆ ಉದ್ಯೋಗ ಸೃಷ್ಠಿ ಮಾಡುವುದು ಟೌನ್‍ಶಿಪ್ಪಿನ ಮಗದೊಂದು ಲಕ್ಷ್ಯವಾಗಿದೆ.
ಅಟೋಮೊಬೈಲ್ ಕ್ಷೇತ್ರದಲ್ಲಿ ಪರಿಣತರಿಗೆ ಟೌನ್‍ಶಿಪ್ ಸುವರ್ಣಾವಕಾಶವನ್ನು ಕಲ್ಪಿಸಲಿದೆ, ಮಾತ್ರವಲ್ಲದೆ ಅವರಿಗೆ ಹೆಚ್ಚಿನ ಆದ್ಯತೆ ನೀಡಿ ಉದ್ಯೋಗ ನೀಡಲಾಗುವುದು ಎಂದು ಅಸೋಸಿಯೇಶನ್ ರಾಜ್ಯ ಸಹ ಸಂಚಾಲಕ ರವೀಂದ್ರನ್ ಕಣ್ಣಂಗೈ ಹೇಳಿದ್ದಾರೆ.
ಸಾಧಾರಣವಾಗಿ ಸಣ್ಣ ಅಟೋಮೊಬೈಲ್ ವರ್ಕ್‍ಶಾಪ್‍ಗಳಲ್ಲಿ ಹೊಸ ವಾಹನಗಳ ಬಿಡಿ ಭಾಗಗಳ ಕೊರತೆ ಕಾಡುತ್ತದೆ, ಮಾತ್ರವಲ್ಲ ಬಿಡಿಭಾಗಗಳು ದುಬಾರಿಯಾಗಿರುತ್ತದೆ, ಇಂತಹ ಬಿಡಿಭಾಗಗಳ ಕ್ಷಾಮವನ್ನು ತಪ್ಪಿಸಲು ಟೌನ್‍ಶಿಪ್ ಸಹಾಯಕವಾಗಲಿದೆ. ಈಗಾಗಲೇ ನಿರ್ಮಾಣ ಕಂಪೆನಿಗಳೊಂದಿಗೆ ಬಿಡಿಭಾಗಗಳನ್ನು ಪೂರೈಸುವಂತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅಪಘಾತಗಳಲ್ಲಿ ನಜ್ಜುಗುಜ್ಜಾದ ವಾಹನಗಳು ಸಹಿತ ಎಂಜಿನ್ ದಕ್ಷತೆ ಹೆಚ್ಚಿಸುವ ಮತ್ತು ವಾಹನಗಳ ಪುನರ್ ನಿರ್ಮಾಣ ಕಾರ್ಯ ಟೌನ್‍ಶಿಪ್ ಮೂಲಕ ಕಡಿಮೆ ಖರ್ಚಿನಲ್ಲಿ ನೆರವೇರಲಿದೆ ಎನ್ನಲಾಗಿದೆ.
20 ರಂದು ವಿಚಾರಗೋಷ್ಠಿ:
ಅಟೋಮೊಬೈಲ್ ಟೌನ್‍ಶಿಪ್ ಆರಂಭಿಸುವ ಪೂರ್ವಭಾವಿಯಾಗಿ ಡಿ.20 ರಂದು ವಿಚಾರಗೋಷ್ಠಿ ನಡೆಯಲಿದೆ. ಕಾಞಂಗಾಡು ಸಮೀಪದ ಮಾಣಿಕ್ಕೋತ್ತ್ ಎಂ.ವಿ.ಎಸ್ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ವಿಚಾರಗೋಷ್ಠಿ ಆರಂಭವಾಗಲಿದೆ. ಕಾಞಂಗಾಡು ನ ಗರಸಭಾ ಅಧ್ಯಕ್ಷ ವಿ.ವಿ.ರಮೇಶನ್ ಗೋಷ್ಠಿ ಉದ್ಘಾಟಿಸಲಿದ್ದಾರೆ. ಉದ್ಯಮ ಅಭಿವೃದ್ಧಿ ಅಧಿಕಾರಿ ಎನ್.ಅಶೋಕ್, ಸಿ.ಜೆ. ಜೈನ್ ಎಂಬವರು ವಿಚಾರಗೋಷ್ಠಿಯಲ್ಲಿ ಮಾತನಾಡಲಿದ್ದಾರೆ.




