HEALTH TIPS

ಸಾಹಿತ್ಯ ಸಮ್ಮೇಳನ- ಒಳಗು-ಹೊರಗು, ಬೆರಗು-ಬೇಡಿಕೆ

              

    ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಮೊನ್ನೆಯಷ್ಟೇ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನಗೊಂಡಿದೆ. ಪ್ರತಿವರ್ಷ ಲಕ್ಷಾಂತರ ರೂ.ವೆಚ್ಚದಲ್ಲಿ ನಡೆಯುವ ಇಂತಹ ಸಮ್ಮೇಳನ ವಿವಿಧ ಆಯಾಮಗಳಲ್ಲಿ, ಅದರಲ್ಲೂ ಗಡಿನಾಡಿನ ಕನ್ನಡ ಭಾಷೆಯ ಉಳಿವು-ಬೆಳವಣಿಗೆಗೆ ಪೂರಕವೆ. ಆದರೆ ಕಾಲಧರ್ಮಕ್ಕನುಸರಿಸಿ ಬದಲಾವಣೆ, ಹೊಸತನಗಳ ಅಗತ್ಯ ಎಲ್ಲಾ ಕ್ಷೇತ್ರಗಳಂತೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಅಗತ್ಯ. 
    ಈ ನಿಟ್ಟಿನಲ್ಲಿ ಸಮರಸ ಸುದ್ದಿ ಕನ್ನಡ ಸಾಹಿತ್ಯ ಸಮ್ಮೇಳನದ ಒಳಗು-ಹೊರಗು, ಬೆರಗು-ಬೇಡಿಕೆ ಎಂಬ ಭಾವನೆಯಡಿ ಸಮ್ಮೇಳನವನ್ನು ಕಂಡು, ಅನುಭವಿಸಿದವರಿಂದ ಮುಕ್ತ ಬರಹಗಳನ್ನು ಆಹ್ವಾನಿಸಿದೆ.ಇದು ಸ್ವ ವಿಮರ್ಶೆಗೇ ಹೊರತು ದೂಷಣೆ, ಕಿಡಿ ಕಾರುವಿಕೆಯಲ್ಲ.
   ಇಂದಿನ ಮೊದಲ ಭಾಗದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಅವರದು.....ಓದಿ ಪ್ರತಿಕ್ರಿಯಿಸಿ.. samarasasudhi@gmail.com
  ............................................................................................. 
         *ಕಸಾಪ ಹನ್ನೆರಡನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನ ನನ್ನ ಅನಿಸಿಕೆ*
     ೨೦೧೯ ಜನವರಿ  ೧೯ ಮತ್ತು ೨೦ ರಂದು ನೀರ್ಚಾಲು ಮಹಾಜನ  ಸಂಸ್ಕೃತ   ಕಾಲೇಜು ಹೈಸ್ಕೂಲಿನಲ್ಲಿ ನಡೆದ ಕನ್ನಡ  ಸಾಹಿತ್ಯ ಪರಿಷತ್ತು  ಗಡಿನಾಡ ಘಟಕದ ಜಿಲ್ಲಾ ಮಟ್ಟದ  ಹನ್ನೆರಡನೆಯ ಸಾಹಿತ್ಯ ಸಮ್ಮೇಳನ ದಲ್ಲಿ ಕೆಲವು ಹಿರಿಯರ ಆತ್ಮೀಯರ ಜತೆ ಕೆಲವು  ಕ್ಷಣಗಳನ್ನು ಕಳೆದದ್ದು ನನ್ನ ಪಾಲಿಗೆ ಸಂತೋಷದ ಗಳಿಗೆ. ಎರಡು ದಿನ ಪೂರ್ತಿಯಾಗಿ ಕನ್ನಡ ಹಬ್ಬಕ್ಕೆ ಮೀಸಲಿಟ್ಟಿದ್ದೆ. ಬೇಯುತ್ತಿರುವ ಒತ್ತಡಗಳಿದ್ದರೂ ಕೂಡಾ ಕಡೆಗಣಿಸಿ ಸಭೆಯಲ್ಲಿದ್ದೆ. ಸಭೆಯ ಮಧ್ಯೆ ಸಹೃದಯನಾಗಿದ್ದೆ. ಈ ಮೊದಲು ನಡೆದ ಎಲ್ಲಾ ಸಮ್ಮೇಳನಗಳಿಗೂ   ಹಾಜರಾಗುವ ಅದೇ ರೀತಿಯಲ್ಲೇ ಪಾಲ್ಗೊಂಡಿದ್ದೆ .   ಯಾಕೆಂದರೆ ಇದರಲ್ಲಿ ಅಧ್ಯಾಪಕರಾದ ನಾವು ಪಾಲ್ಗೊಳ್ಳದೇ ಇನ್ನಾರು ಪಾಲ್ಗೊಳ್ಳಬೇಕು? ನಾವು ಅದರ ಭಾಗವಾಗದೆ ಅದರ ಬಗ್ಗೆ ಬರೆದೇನು ಫಲ?  ಅಥವಾ ಕಣ್ಣಾರೆ ಕಾಣದೆ ತಪ್ಪು ಒಪ್ಪು ಖುಷಿ ದುಖ ಪಡೋದೇಗೆ?  ಆದ ಕಾರಣ ಅನಿಸಿದ್ದನ್ನು  ಬರೆಯುತ್ತಿರುವೆ. 
        ಶ್ರೀಕೃಷ್ಣ ಭಟ್ ಸರ್ ಅವರ ಅಧ್ಯಕ್ಷತೆ ಖುಷಿಕೊಟ್ಟಿತು.  ಆ ಸ್ಥಾನಕ್ಕೆ ನಿಜವಾಗಿ ನ್ಯಾಯಕೊಟ್ಟರು.
ಸಮ್ಮೇಳನ ದ ಆಯೋಜನೆಯಲ್ಲಿ ಪೂರ್ವತಯಾರಿಯ ಸಾಕಷ್ಟು ಕೊರತೆ ಇತ್ತು.  ಭಾಗವಹಿಸಿದವರ ಸಂಖ್ಯೆ ಏನೇನೂ ಸಾಲದು. ಕಸಾಪ ಬಹಳ ಗಂಭೀರವಾಗಿ ಮತ್ತು ಪ್ರಜಾಸತ್ತಾತ್ಮಕ ನೆಲೆಯಲ್ಲಿ , ಕ್ರಿಯಾತ್ಮಕ ವಾಗಿ ಯೋಚಿಸದಿದ್ದರೆ ಮುಂದೆ  ಕಷ್ಟ ಇದೆ. ಯಾಕೆಂದರೆ ವರುಷಗಳ ಮೊದಲು ಸಮ್ಮೇಳನಕ್ಕೆ ಸರಕಾರದಅನುದಾನ  ಬರುತ್ತಿರಲಿಲ್ಲ. ಆದರೆ ಈಗ ಹಾಗಲ್ಲ.
ನನ್ನಂತವರಿಗೆ ಖುಷಿ ಇಷ್ಟೆ. ಎರಡೂ ದಿನ ಸಾಮಾನ್ಯ ಸಹೃದಯನಾಗಿ ಕೆಲವು ಮಂದಿ ಸಹೃದಯರನ್ನು ಕಾಣಲು ಮಾತನಾಡಲು ಅವಕಾಶ ಆಯಿತು.
      ಸಮ್ಮೇಳನ ಮಾಡುವ ಮೊದಲು  ಸಂಘಟಕರು ವಹಿಸಬೇಕಾದ ಎಚ್ಚರವನ್ನು ಪೂರ್ವಭಾವಿ ಸಭೆಯಲ್ಲಿ ಹೇಳಿದ್ದೆ. ಉದ್ದ ಪತ್ರ ಬರೆದೂ ಸಂಬಂಧಪಟ್ಟವರಿಗೆ ತಿಳಿಸಿದ್ದೆ
     ಇದರಲ್ಲಿ ಕವಿಗೋಷ್ಟಿಯ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಅದನ್ನು ಪಾಲಿಸಲಾಯಿತು.  ಆದರೆ ಪೂರ್ಣಪ್ರಮಾಣವಾಗಿ ಪಾಲಿಸಲಿಲ್ಲವೆಂಬ ಆರೋಪವೂ ಕೇಳಿ ಬಂತು.  ಆದರೂ ಹತ್ತು ವರುಷದ ಮೊದಲಿನ ಕವಿತೆ  ಮತ್ತೆ ಮತ್ತೆ ಹಲವು ಕವಿಗೋಷ್ಡಿಗಳಲ್ಲಿ ಓದುವ ಕೆಲವು ಹುಟ್ಟುಕವಿಗಳಿಗೆ  ಮತ್ತೆ ಮತ್ತೆ ಜಾತಿ ನೀತಿ ಜನಪ್ರಿಯತೆ ಇತ್ಯಾದಿಗಳ ಮಾನದಂಡಗಳಲ್ಲಿ ಆಯ್ಕೆ ಮಾಡಿ ಸಿದ್ಧ ಪಾನೆಲ್ ಪಟ್ಟಿಯಿಂದ ಅಳವಡಿಸುವ ಕ್ರಮಕ್ಕೆ ಕಡಿವಾಣ ಈ ವ್ಯವಸ್ಥೆಯಿಂದ ಆಗಿತ್ತು .
ಉಳಿದಂತೆ  ಕಾರ್ಯಕ್ರಮಗಳು ಉತ್ತಮವಾಗಿ ಮೂಡಿಬಂದರೂ ಹೆಚ್ಚಿನವುಗಳಲ್ಲಿ ಔಚಿತ್ಯದ ಪ್ರಶ್ನೆ ಎದ್ದು ಕಾಣುತ್ತಿತ್ತು. ಮಕ್ಕಳ ನಾಟಕ ಮತ್ತು ಯಕ್ಷಗಾನಕ್ಕೆ ಅವಕಾಶ ಒದಗಿಸಿದುದು ಔಚಿತ್ಯಪೂರ್ಣವೂ ಹೌದು. ಆದರೆ ಉಳಿದೆಲ್ಲ ವಿಷಯಗಳಲ್ಲಿ ಅದೇ ಏಕವ್ಯಕ್ತಿ, ಪೂರ್ವಾಗ್ರಹ ಪೀಡಿತ ತೀರ್ಮಾನಗಳಿಂದಾಗಿ ಹತ್ತರಲ್ಲಿ ಹನ್ನೊಂದನೆಯ ಸಮ್ಮೇಳನವಾಯಿತು. ಆದರೆ ಪ್ರಾಮಾಣಿಕವಾಗಿ ದುಡಿದ ಮನಸ್ಸುಗಳು ಇತ್ತು. ಅವರಿಗೆಲ್ಲ ವಂದನೆ. ಎರಡು ದಿನದ ಸಭೆ ಸೊರಗಿಹೋದದ್ದು ತುಂಬಾ ಬೇಸರವೂ ಆಯಿತು.
     ಸಮ್ಮೇಳನ ಸಮರ್ಪಕವಾಗಿಲ್ಲ ಎಂಬುದನ್ನು ಕಸಾಪ ಜಿಲ್ಲಾ ಅಧ್ಯಕ್ಷರು ಕೊನೆಯ ಭಾಷಣದಲ್ಲಿ ಹೇಳಿದರು. ಆದರೆ ಅವರು ಕೊಟ್ಟ ಕಾರಣಗಳು ನಾಯಕತ್ವ ಗುಣದ ಕೊರತೆಯನ್ನು ಎದ್ದು ತೋರಿಸುತ್ತಿತ್ತು. ಯಾವುದೇ ಕಾರ್ಯಕ್ರಮಗಳು ಪ್ರಜಾಪ್ರಭುತ್ವ ನೆಲೆಯಲ್ಲಿ ನಡೆದಾಗ ಮಾತ್ರ ಅದು ಗೆಲ್ಲುತ್ತದೆ. ಕಸಾಪದ ಹಲವು ತೀರ್ಮಾನಗಳು ಮತ್ತೆ ಮತ್ತೆ ಏಕಮುಖಿಯಾಗಿ ಹೋದರೆ ಕನ್ನಡ ಕಟ್ಟುವುದು ಹೇಗೆ? ಯುವಪ್ರಾತಿನಿಧ್ಯ ವಿದ್ಯಾರ್ಥಿ ಪ್ರಾತಿನಿಧ್ಯ ಮತ್ತು ಕನ್ನಡಕ್ಕಾಗಿ ಪ್ರಾಮಾಣಿಕವಾಗಿ ದುಡಿಯುವ ಮನಸ್ಸುಗಳನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿ ಅವರ ಪ್ರತಿಭೆ ಮತ್ತು ಶಕ್ತಿಗೆ, ಕನ್ನಡದ  ಭವಿಷ್ಯ ನಿರ್ಮಾಣಕ್ಕೆ ಸೂಕ್ತವಾದ ನೆಲೆಬೆಲೆಗಳನ್ನು ಕಲ್ಪಿಸದೆ  ಹೋದರೆ ಎಲ್ಲವೂ ಕಷ್ಟವೇ. ಅಧಿಕಾರಕ್ಕೆ ಶೋಭೆ ಬರುವುದು ವಹಿಸಿದ ಹೊಣೆಗಾರಿಕೆ ಸಮಾಜಮುಖಿಯಾದಾಗ ಮಾತ್ರ. ಅರ್ಥಪೂರ್ಣವಾದಾಗ ಮಾತ್ರ. ಮುಖ್ಯವಾಗಿ ತೀರ್ಮಾನಗಳು ಪ್ರಜಾಸತ್ತಾತ್ಮಕ ನೆಲೆಯಲ್ಲಿ ರೂಪುಗೊಂಡಾಗ ಮಾತ್ರ.
     ಕಸಾಪ ಇತರ ಕನ್ನಡ ಸಂಘಟನೆಯ ಹಾಗಲ್ಲ. ಅದರ ನೆಲೆಬೆಲೆ ಹೊಣೆ ಮಹತ್ವಪೂರ್ಣವಾದುದು. ಆದರೆ ಕಾಸರಗೋಡಿನ ಕಸಾಪ ಇಂದು ತೃಪ್ತಿದಾಯಕ ರೀತಿಯಲ್ಲಿ ಆರೋಗ್ಯಪೂರ್ಣವಾಗಿ ಇಲ್ಲ. ಇದರಲ್ಲಿ ನಾನು ತುಂಬಾ ದುಃಖಪಡ್ತೇನೆ.  ಕಳೆದ ಹತ್ತು ವರುಷಗಳ ಕಾರ್ಯಕ್ರಮಗಳ ಆಮಂತ್ರಣ ತೆಗೆದು ನೋಡಿದ್ರೆ ಸಾಕು. ಕಳೆದ ಹತ್ತು ವರ್ಷಗಳ ಕಸಾಪ ಹೊಸ ಸದಸ್ಯತನ ಪಟ್ಟಿ ನೋಡಿದ್ರೆ ಸಾಕು. ಬೇರೆ ನಾನೇನೂ ಹೇಳಬೇಕಾಗಿಲ್ಲ.  ಕಳೆದ ಹತ್ತು ವರುಷಗಳಿಂದ ಇರುವ ಅಧ್ಯಕ್ಷರ ಬಗ್ಗೆ ನನಗೆ ಗೌರವ ಇದೆ ಪ್ರೀತಿಯೂ ಇದೆ.  ಕನ್ನಡ ಭಾಷೆ ಕಾಸರಗೋಡಿನಲ್ಲಿ ಉಳಿಯಬೇಕಿದ್ರೆ ಮೊದಲು ನಮ್ಮ ಮಗು ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿಯಬೇಕು. ಅದಿಲ್ಲ ಎಂದಾದರೆ ಕನ್ನಡದ ಯಾವ ವೇದಿಕೆಗೆಗೂ ಏರುವ ನೈತಿಕ ಹಕ್ಕು ನಮಗಿಲ್ಲ ಎಂದು ತಮ್ಮೆರಡೂ ಮಕ್ಕಳನ್ನೂ ಕನ್ನಡ ಶಾಲೆಗೆ ಸೇರಿಸಿದವರು ಅವರು. ಪ್ರತಿಭಾವಂತರಾದ ಅವರಿಬ್ಬರೂ ಇಂದು ಉನ್ನತ ಸ್ಥಿತಿಯಲ್ಲಿದ್ದಾರೆ. ಸಮಯಪರಿಪಾಲನೆ, ಸರಳತೆಗೆ ಅವರು ಮಾದರಿಯಾಗಬಲ್ಲ ವ್ಯಕ್ತಿತ್ವ. ಆದರೆ ಅವರ  ಸಮರ್ಥ ನಾಯಕತ್ವದ ಗುಣದ ಕೊರತೆ ಕಸಾಪದ ದಿಕ್ಕುದೆಸೆಗಳನ್ನೇ ಬದಲಾಯಿಸಿದೆ.      ಇದನ್ನು ಇಷ್ಟು ಮುಕ್ತವಾಗಿ ಕಾಸರಗೋಡಿನ ಲ್ಲಿ ಹೇಳುವವನು ನಾನೊಬ್ಬನೇ. ಆದರೆ ಹಿಂದಿನಿಂದ ಹಲವರು ನನ್ನನ್ನು ಬೆಂಬಲಿಸುವುದು, ಸಭೆಯಲ್ಲಿ ನಾನು ಮಾತನಾಡಿ ಬಂದ ಮೇಲೆ ಕರೆ ಮಾಡಿ ಅಭಿನಂದಿಸುವುದು ಮಾತ್ರವಲ್ಲ  ಅಧ್ಯಕ್ಷರು ಇಲ್ಲದ ಕಡೆಗಳಲ್ಲಿ ಅವರ ಕಾರಗಯವೈಖರಿಯನ್ನು ಕಟುವಾಗಿ ಟೀಕಿಸುವುದನ್ನು ನಾನು ಹಲವು ವರುಷಗಳಿಂದ ಕಂಡವ.
ಆದರೆ ಬಹುತೇಕ ಜನರು ವ್ಯವಸ್ಥೆ ಸರಿಯಾಗಬೇಕೆಂದು ಎದುರು ಮುಕ್ತವಾಗಿ ಹೇಳುವವರಲ್ಲ.   ಬಹುತೇಕರಿಗೆ ಆತಂಕ. ತಾವು ಏನಾದರೂ ಹೇಳಿದರೆ ಕಸಾಪ ನಮ್ಮನ್ನು ಕರೆಯದೆ ಇದ್ದರೆ? ನಮ್ಮ ಮಕ್ಕಳಿಗೆ ಸೂಕ್ತ ವೇದಿಕೆ ಕೊಡದೆ ಇದ್ದರೆ?  ಕರ್ನಾಟಕ ಮಟ್ಟದಲ್ಲಿ ನಡೆಯುವ ಗೋಷ್ಟಿ, ಸನ್ಮಾನ ಇತ್ಯಾದಿಗಳಿಗೆ ನಮ್ಮ ಹೆದರನ್ನು ಶಿಫಾರಸು ಮಾಡದೆ ಇದ್ದರೆ? ಇತ್ಯಾದಿ.....  (ಕೆಲವರು ಇದನ್ನು ನನ್ನಲ್ಲಿ ಬಾಯಿಬಿಟ್ಟು ಹೇಳಿದ್ದಾರೆ ಕೂಡಾ)
ಆದ ಕಾರಣ ವೇದಿಕೆಯೇರಿದಾಗ ತಮ್ಮ ಅಂತರಂಗ ಒಪ್ಪದಿದ್ದರೂ ಈ ವ್ಯವಸ್ಥೆಯ ಭಾಗವಾಗಿಯೇ ಬಿಡುತ್ತಾರೆ.  ಕಾಸರಗೋಡಿನಲ್ಲಿ ಇತ್ತೀಚೆಗೆ ಎತ್ತ ಹೋದರೂ ಓಲೈಕೆಯೇ ಮೇಳೈಸಿ ಹೋಗಿದೆಯೋ ಎಂದು ದುಃಖವಾಗುತ್ತದೆ. ಕವನಗಳಲ್ಲಿ ಕತೆಗಳಲ್ಲಿ ಲೇಖನಗಳಲ್ಲಿ ಭಾಷಣಗಳಲ್ಲಿ ಅತ್ಯಂತ ಸಮರ್ಪಕವಾಗಿ ಜಾತೀಯತೆ,  ಪ್ರಭುತ್ವ, ಅಸಮಾನತೆ, ಅಸ್ಪೃಶ್ಯತೆ, ಭಟ್ಟಂಗಿತನ, ಕೃತಘ್ಣತೆ, ಷಂಡತನ ಇತ್ಯಾದಿಗಳ ಬಗ್ಗೆ ಚೆಂದವಾಗಿ ಬರೆವವರೂ ಕ್ರಿಯಾತ್ಮಕವಾಗಿ ಸಮಯ ಸಂದರ್ಭಗಳಲ್ಲಿ ಮೌನವಾಗಿ ಇರುತ್ತಾರೆ. ಪ್ರತಿಭಟನೆ ಬೊಬ್ಬೆ ಬೇಡ. ನಯವಾಗಿ ಹೇಳುವ ದೊಡ್ಡ ಮನಸ್ಸು ಮಾಡುವುದಿಲ್ಲ.  ಇದರಿಂದ ವ್ಯವಸ್ಥೆ ಹಾಳಾಗುವುದು ಮಾತ್ರವಲ್ಲ. ಅದೆಷ್ಟೋ ಕನ್ನಡದ  ನೈಜಪ್ರತಿಭೆಗಳಿಗೆ ಸೂಕ್ತ ಅವಕಾಶ ದೊರಕದೆ ಮುದುಡಿ ಬಾಡಿ ಹೋಗುತ್ತಿವೆ. ಇದು ಹಲವು ಸಲ ಅವಕಾಶ ಲಭ್ಯವಾದರಿಗೂ ಗೊತ್ತಿಲ್ಲದೆ ಅಲ್ಲ. ಆದರೆ ಅವರು "ನಾವು ಯಾಕೆ ಬಿಟ್ಟುಕೊಡಬೇಕು? ನಮ್ಮನ್ನು ಕರೆದ ಕಾರಣವಲ್ಲವೇ ಹೋದದ್ದು?" ಎಂದು ಯೋಚಿಸಿಬಿಡುತ್ತಾರೆ.
ವಿದ್ಯಾರ್ಥಿ ಬದುಕಿನಿಂದ ಅಂದರೆ ಸುಮಾರು 20 ವರುಷಗಳಿಂದ ಕಾಸರಗೋಡಿನ ಪ್ರತಿಯೊಂದು ಕನ್ನಡದ ಆಗುಹೋಗುಗಳಲ್ಲಿ ನೇರಭಾಗಿಯಾಗುತ್ತಾ ಬಂದವ ನಾನು. ನನಗೆ ಇದನ್ನು ಕಂಡು ಸಿಟ್ಟು ಬೇಸರ ದುಃಖ ಎಲ್ಲವೂ ಆಗುತ್ತಿದೆ. ಖಾರವಾಗಿ ಹೇಳಿದರೆ ಎಲ್ಲರೂ ಶತ್ರುಗಳಾಗುತ್ತಾರೆ. ಹೇಳದಿದ್ದರೆ ಮನಸ್ಸು ಒಪ್ಪುವುದಿಲ್ಲ. ಇದು ನನ್ನ ದೌರ್ಬಲ್ಯ.

ಯಾವುದೇ ಸಂಘಟನೆ ವ್ಯಕ್ತಿಯ ಪ್ರತಿಭೆಗೆ ಅವಕಾಶ ಕಲ್ಪಿಸಬೇಕು. ಇದರಲ್ಲಿ ಜಾತಿ, ಮತ, ಪಂಥ, ವ್ಯಕ್ತಿಯ ಸ್ಥಾನಮಾನ, ಜನಪ್ರಿಯತೆ , ಹೊಗಳುವ ರೀತಿ ಇತ್ಯಾದಿಗಳು ಮಾನದಂಡವಾಗಬಾರದು.
ಪ್ರತಿಭೆಯಿದ್ದೂ ಶಕ್ತಿಯಿದ್ದೂ ಅವಕಾಶಗಳಿಲ್ಲದೆ ಸೊರಗುತ್ತಿರುವ ಪ್ರತಿಭೆಗಳು ಇವೆ. ಆದರೆ ಅವರೆಲ್ಲ ಮೇಲೆ ಬರಲೇಬೇಕಾದ ಅನಿವಾರ್ಯತೆ ಇದೆ. ಕಸಾಪ ಅದಕ್ಕೆ ಅವಕಾಶ ಕಲ್ಪಿಸದಿದ್ದರೆ ಇನ್ಯಾರು ಕಲ್ಪಿಸಲು ಸಾಧ್ಯ.
ಕಸಾಪ ಸಮ್ಮೇಳನ ಮಾತ್ರವಲ್ಲ ಯಾವುದೇ ಕಾರ್ಯಕ್ರಮ ಮಾಡುವುದಿದ್ದರೂ ಎಲ್ಲರಿಗೂ ಸೂಕ್ತ ರೀತಿಯಲ್ಲಿ ಸಾಕಷ್ಡು ಮುಂಚಿತವಾಗಿ ತಿಳಿಸಬೇಕು. ಅದೆಷ್ಟೊ ನಿವೃತ್ತ ಅಧ್ಯಾಪಕರು, ಪತ್ರಕರ್ತರು, ಸಾಹಿತಿಗಳು ಹೊರಗಿದ್ದಾರೆ, ಅವರನ್ನು ಸಹೃದಯರಾಗಿ ಕರೆಯಬೇಕು. ಮುಖ್ಯವಾಗಿ ಯುವಮನಸ್ಸುಗಳು ದುಡಿಯಲು ಬೇಕಾದ ವಾತಾವರಣ ಸೃಷ್ಟಿಸಬೇಕು. ಜತೆಸೇರುವ ಪರಿಸರವುಂಟುಮಾಡಬೇಕು. ಅಧ್ಯಾಪಕರು, ಕೃಷಿಕರು, ಬೇರೆಬೇರೆ ವೃತ್ತಿಯಲ್ಲಿದ್ದವರು, ಶ್ರೀಸಾಮಾನ್ಯರಿಗೆಲ್ಲ ಸಮಾನ ಅವಕಾಶ ಕಲ್ಪಿಸಿಕೊಡಬೇಕು. ಸದಸ್ಯತನ ಅಭಿಯಾನದಲ್ಲಿ ಉದ್ದೇಶಶುದ್ಧಿ ಬೇಕು. ಸಮ್ಮೇಳನಗಳಲ್ಲಿ ಮನರಂಜನೆಗೆ ಕಡಿವಾಣ ಇದ್ದು ಸಮಸ್ಯೆ ಸಾಹಿತ್ಯ ಚಿಂತನೆಗೆ ವೇದಿಕೆ ಒದಗಿಸಬೇಕು. ಅನುಭವಿಗಳು ಅದಕ್ಕೆ ಮಾರ್ಗದರ್ಶನ ನೀಡಬೇಕು. ಯುವತಲೆಮಾರಿಗೆ ಅವೆಲ್ಲ ಸರಿಯಾಗಿ ದಾಟಬೇಕು.
      ಈ ಸಲ ಕವಿಗೋಷ್ಟಿಯ ಅಯ್ಕೆಯಾದರೂ ಪ್ರಜಾಸತ್ತಾತ್ಮಕ ನೆಲೆಯಲ್ಲಿಯೇ ನಡೆಯಬೇಕೆಂದು ಪೂರ್ವಭಾವಿ ಸಭೆಗೆ ಹೋಗಿ ಹೇಳಿದ್ದೆ. ಮಿತ್ರರಾದ ಗೌರವಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೆ.  ಮೊದಲು ಅದು ಬಿದ್ದು ಹೋದರೂ ಕೊನೆಗೆ ಇಬ್ಬರು ಸ್ನೇಹಿತರು ಅದಕ್ಕೆ ಬಲಕೊಟ್ಟರು. ಬೆಲೆಕೊಟ್ಟರು. ಅದರಿಂದಾಗಿ ಒಮ್ಮೆಯೂ ಕಸಾಪದ ವೇದಿಕೆ ಏರದ  ಪ್ರತಿಭೆಗಳು ವೇದಿಕೆ ಏರುವಂತಾಯಿತು. ಇದು ಖುಷಿಯ ವಿಷಯ. ಆದರೆ ಅದು 100% ಪ್ರಜಾಸತ್ತಾತ್ಮಕ ನೆಲೆಯಲ್ಲಿ ಆಗಿಲ್ಲವೆಂದು ತಿಳಿದು ಬೇಸರವಾಯಿತು.
      ನಮ್ಮಂತವರ ಕಷ್ಟ ಹೇಳತೀರದು. ಕನ್ನಡದ ಋಣದ ಮನೋಭಾವಕ್ಕೆ ಕಟ್ಟುಬಿದ್ದು  ಅಲ್ಲಿಯೇ ಇರಬೇಕಾದುದು, ಕೆಲವೊಂದನ್ನು ಕಾಣಬೇಕಾದುದು, ಕೇಳಬೇಕಾದುದು ಕೊನೆಗೆ ಅದೆಲ್ಲವನ್ನು ಹೀಗೆ ಕೂತು ಬರೆಯಬೇಕಾದುದು.....  ಒಟ್ಟಿನಲ್ಲಿ ಸಮಯವೂ ಹಾಳು. ನಿದ್ದೆಯೂ ಹಾಳು. ವೈಯಕ್ತಿಕವಾದ ಸುಖಸಂತೋಷವೂ ಹಾಳು.
ಎರಡೂ ದಿನವೂ ಜನ ಕಡಿಮೆ ಇದ್ದರು. ಪುರುಷೋತ್ತಮ ಸರ್ ಅವರ ಅಭಿನಂದನೆಗೆ ಸೇರಿದ ಜನದಷ್ಟೂ ಸಾಹಿತ್ಯ ಸಮ್ಮೇಳನದಲ್ಲಿ ಇರದಿದ್ದರೆ ಅದರ ಉದ್ದೇಶ ಈಡೇರುವುದೆಂತು?
ಜನ ಬರದೆ ಇರದಿರುವುದಕ್ಕೆ ಸಂಘಟನೆಯೂ ಕಾರಣ ಜನರ ಪ್ರಜ್ಞಾವಂತಿಕೆಯ ಕೊರತೆ , ಕೃತಘ್ಣ ಮನೋಭಾವವೂ ಕಾರಣ.
     ವೇದಿಕೆ ಇಳಿದ ತಕ್ಷಣ ಹೊರಗಿನವರು ಹೋಗಬಹುದು. ಆದರೆ ಕಾಸರಗೋಡಿನ ವರೇ ಹೋಗುವುದು ಸರಿಯಲ್ಲ. ಅವರೂ ಕಿವಿಯಾಗಲೇಬೇಕು. ಎರಡೂ ದಿನ ಇರಬೇಕು. ವೇದಿಕೆ ಇಲ್ಲವೆಂದು ಬರದಿರುವುದೂ ಕಳೆದ ವರುಷ ಅವಕಾಶ ಸಿಕ್ಕವರೂ ಈ ವರುಷ ಕಾಣದಿರುವುದೂ ನನ್ನ ಪ್ರಕಾರ ತಪ್ಪೆ. ಬರದಿದ್ದರೆ ಯಾರಾದರೂ ಏನಾದರೂ ಅಂದಾರು ಎಂದು ಯಾರಿಗೋ ಬೇಕಾಗಿ ಒಂದು ಬಾಗಿಲಿನಿಂದ ಇನ್ನೊಂದು ಬಾಗಿಲಿನಿಂದ ಅರ್ಧಗಂಟೆಯೂ ಇರದೆ ಮುಖ ತೋರಿಸಿ ಹೋಗುವುದೂ ಸಮಂಜಸವಲ್ಲ. ಒಂದು ದಿನವಾದರೂ ಪೂರ್ತಿ ದಿನ ಇರಬೇಕು.

   *ಡಾ.ಮಲ್ಲಮೂಲೆ*

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries