ಉಪ್ಪಳ: ಕುರುಡಪದವು ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢ ಶಾಲೆಯಲ್ಲಿ ಕಳೆದ 27 ವರ್ಷಗಳಿಂದ ಗಣಿತ ಅಧ್ಯಾಪಕರಾಗಿರುವ ಕಾಡೂರು ಶಾಮ ಭಟ್ ಮಾರ್ಚ್ 31 ರಂದು ನಿವೃತ್ತರಾಗಲಿದ್ದು, ಆ ಪ್ರಯುಕ್ತ ಅವರ ವಿದಾಯ ಸಮಾರಂಭವು ವಿದ್ಯಾರ್ಥಿಗಳ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಶಾಲಾ ಪ್ರಬಂಧಕ ಗೋಪಾಲಕೃಷ್ಣ ಭಟ್ ಧ್ವಜಾರೋಹಣಗೈದು ಸಮಾರಂಭಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿ ಶಾಲೆಯ ಹಿರಿಮೆಯನ್ನು ಪ್ರಶಂಸಿಸಿ ನಿವೃತ್ತರಾಗಲಿರುವ ಅಧ್ಯಾಪಕರಿಗೆ ಶುಭಹಾರೈಸಿದರು. ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಅವರು ಕನ್ನಡ ಮಾಧ್ಯಮ ಶಾಲೆಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿರುವ ಈ ಸಂದರ್ಭದಲ್ಲಿ ಕನ್ನಡಿಗರೆಲ್ಲಾ ಒಂದಾಗಿರಬೇಕೆಂದೂ, ತನ್ನ ಕೈಲಾದ ಸೇವೆಯನ್ನು ಸಲ್ಲಿಸುತ್ತೇನೆಂದರು.
ಸಭಾಸದರ ಸಮ್ಮುಖದಲ್ಲಿ ನಿವೃತ್ತಿ ಹೊಂದುವ ಅಧ್ಯಾಪಕ ಶಾಮ ಭಟ್ ದಂಪತಿಗಳನ್ನು ಶಾಲಾ ಪರವಾಗಿಯೂ, ಹಳೆ ವಿದ್ಯಾರ್ಥಿಗಳ ಪರವಾಗಿಯೂ ಸಮ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಶಾಲಾ ಸಂಚಾಲಕ ವೆಂಕಟ್ರಮಣ ಭಟ್ ಅವರ ಭಾವಚಿತ್ರ ಅನಾವರಣಗೊಳಿಸಲಾಯಿತು. ಸೇರಾಜೆ ಗೋಪಾಲಕೃಷ್ಣ ಭಟ್ ಸಂಸ್ಮರಣಾ ಭಾಷಣ ಮಾಡಿದರು. ಶಾಲಾ ಹಳೆ ವಿದ್ಯಾರ್ಥಿಗಳೂ, ಕಾಸರಗೋಡು ಹಿರಿಯ ಪ್ರಾಥಮಿಕ ಶಾಲೆ ಚಲನಚಿತ್ರದಲ್ಲಿ ಅಭಿನಯಿಸಿದ ಚಂದ್ರಶೇಖರ ಮತ್ತು ಯೋಗೀಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು, ಶ್ರೀಪತಿ ಭಟ್, ರವಿನಾರಾಯಣ ಭಟ್, ಸತೀಶ್ವರ ಭಟ್, ಗ್ರಾಮ ಪಂಚಾಯತಿ ಸದಸ್ಯೆ ತಾರಾ ವಿ.ಶೆಟ್ಟಿ, ಚನಿಯ ಶುಭಾಶಂಸನೆಗೈದರು. ಶಾಮ ಭಟ್ ತಮ್ಮ ವೃತ್ತಿ ಜೀವನದ ಅನಿಸಿಕೆಗಳನ್ನು ಸಭೆಯ ಮುಂದಿರಿಸಿದರು. ಮುಖ್ಯೋಪಾಧ್ಯಾಯಿನಿ ಗಾಯತ್ರಿ ಕೆ. ಶಾಲಾ ವರದಿ ವಾಚಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್, ಮಾತೃ ವಿಭಾಗದ ಅಧ್ಯಕ್ಷೆ ರೇವತಿ, ಹಳೆ ವಿದ್ಯಾರ್ಥಿ ಹಾಗು ಅಧ್ಯಾಪಕ ಗೋಪಾಲ ಮಾಸ್ತರ್ ಉಪಸ್ಥಿತರಿದ್ದರು. ಕಮಲಾಕ್ಷಿ ಸಮ್ಮಾನ ಪತ್ರ ವಾಚಿಸಿದರು.
ಇದೇ ಸಂದರ್ಭದಲ್ಲಿ ಸಾದಂಗಾಯ ಸರಸ್ವತಿ ಅಮ್ಮ ದತ್ತಿ ನಿಧಿ, ಕುರಿಯ ಸೋಮಪ್ಪ ಶೆಟ್ಟಿ ದತ್ತಿ ನಿಧಿ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕುರಿಯ ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ರಾಮಕೃಷ್ಣ ಪ್ರಸಾದ್ ವಂದಿಸಿದರು. ಲೋಹಿತ್ ಭಂಡಾರಿ, ಮುತ್ತ ಮೂಲ್ಯ ಹಾಗು ಮಕ್ಕಳು, ಅಧ್ಯಾಪಕರೂ, ಸಿಬಂದಿ ವರ್ಗದವರು ಸಹಕರಿಸಿದರು. ವಿದ್ಯಾರ್ಥಿಗಳಿಂದ ನೃತ್ಯ, ಮೂಕಾಭಿನಯ, ನಾಟಕ ಪ್ರದರ್ಶನ ನಡೆಯಿತು.


