ಉಪ್ಪಳ: ಮುಚ್ಚುಗಡೆಯ ಭೀತಿ ಎದುರಿಸುತ್ತಿರುವ ಉಪ್ಪಳ ರೈಲು ನಿಲ್ದಾಣದ ಸಂರಕ್ಷಣೆ ಅತ್ಯಗತ್ಯ. ಶತಮಾನದ ಇತಿಹಾಸ ಹೊಂದಿರುವ ರೈಲ್ವೇ ನಿಲ್ದಾಣವನ್ನು ಪಿತ್ರಾರ್ಜಿತ ಆಸ್ತಿಯಂತೆ ಕಾಪಿಡಬೇಕಿದೆ ಎಂದು ಕೇರಳ ಪ್ರದೇಶ್ ಕಾಂಗ್ರೆಸ್ಸ್ ಮಾಜಿ ಅಧ್ಯಕ್ಷ ವಿ.ಎಂ ಸುಧೀರನ್ ಹೇಳಿದರು.
ಅವರು ಉಪ್ಪಳ ರೈಲು ನಿಲ್ದಾಣ ಉಳಿಸುವ ನಿಟ್ಟಿನಲ್ಲಿ ಮಾನವ ಹಕ್ಕು ಸಂರಕ್ಷಣೆ ಮಿಶನ್ ಮಂಜೇಶ್ವರ ತಾಲೂಕು ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯ ಶನಿವಾರ ನಡೆದ 25 ನೇ ದಿನದ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಸ್ಥಳೀಯ ವಿದ್ಯಾರ್ಥಿಗಳು, ಜನಸಾಮಾನ್ಯರು ಸಹಿತ ಸರಕಾರಿ ನೌಕರರು ಆಶ್ರಯಿಸುತ್ತಿರುವ ರೈಲು ನಿಲ್ದಾಣಕ್ಕೆ ಹಲವು ವರ್ಷಗಳ ಬಳುವಳಿಯಿದೆ. ಇದರ ರಕ್ಷಣೆ ಮತ್ತು ಮೇಲ್ದರ್ಜೆಗೆ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು. ಧರಣಿ ಸತ್ಯಾಗ್ರಹವು ಶುಕ್ರವಾರದಂದು 25 ನೇ ದಿನಕ್ಕೆ ಕಾಲಿಟ್ಟಿದ್ದು, ಉಪ್ಪಳ ರೈಲ್ವೇ ನಿಲ್ದಾಣದ ಸಂರಕ್ಷಣೆ ಹಾಗೂ ಏಕ್ಸ್‍ಪ್ರೆಸ್ ರೈಲುಗಳ ನಿಲುಗಡೆ ಬಯಸಿ ನಡೆಯುತ್ತಿರುವ ಧರಣಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ವಿವಿಧ ಸಂಘಟನೆಗಳ ಕಾರ್ಯಕರ್ತರು ಸಾಥ್ ನೀಡಿದ್ದಾರೆ. ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು, ಕೆ.ಬಿ ಮುಹಮ್ಮದ್ ಕುಞ, ಹಮೀದ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಕೀಂ ಕುನ್ನಿಲ್, ಕೆ.ಎಫ್ ಇಕ್ಬಾಲ್, ಕಾಸರಗೋಡು ಜಿ.ಪಂ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಜಮೀಲಾ ಅಹಮ್ಮದ್, ಮೆಹಮೂದ್ ಕೈಕಂಬ, ಶರೀಫ್ ಮುಗು, ರಹ್ಮಾನ್, ಉಮ್ಮರ್ ಬೋರ್ಕಳ, ಕರೀಂ ಪೂನಾ, ಸಿ.ಸತ್ಯನ್, ಒ.ಎಂ ರಶೀದ್, ಬದರುದ್ದೀನ್, ಮೂಸಾಕುಞ, ಮೊದಲಾದವರು ಮಾತನಾಡಿದರು. ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸುದಕ್ಕೂ ಮೊದಲು ಉಪ್ಪಳ ರೈಲ್ವೇ ನಿಲ್ದಾಣ ಪರಿಸರವನ್ನು ಸಂದರ್ಶಿಸಿದರು.



