HEALTH TIPS

ಇಡಿಯಡ್ಕ ಧ್ವಜ ಪ್ರತಿಷ್ಠೆ, ಬ್ರಹ್ಮ ಕಲಶೋತ್ಸವ, ವಾರ್ಷಿಕ ಜಾತ್ರೆ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ

 
         ಪೆರ್ಲ:  ಪ್ರಾಚೀನ ಕಾಲದಲ್ಲಿ ಸಾಮಾಜಿಕ ಹಾಗೂ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪಠ್ಯ, ನಾಟ್ಯಾದಿ ಕಲೆ, ಸರ್ವ ರೀತಿಯ ಶಿಕ್ಷಣ ದೇವಾಲಯಗಳಲ್ಲಿ ದೊರಕುತ್ತಿತ್ತು.ಐತಿಹಾಸಿಕ, ರಾಜಕೀಯ ಕಾರಣಗಳಿಂದ ಎಲ್ಲಾ ವ್ಯವಸ್ಥೆ, ಸಂಪ್ರದಾಯಗಳು ಬದಲಾದರೂ ಕಾಸರಗೋಡು, ದ.ಕ., ಉಡುಪಿ ಜಿಲ್ಲೆಗಳಲ್ಲಿ ಮೂಲಭೂತ ತತ್ವಗಳನ್ನಾಧರಿಸಿ ದೈವ, ದೇವಾಲಯಗಳ ಜೀರ್ಣೋದ್ಧಾರ, ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ, ಜಾತ್ರೋತ್ಸವಗಳು ಜನರ ಮುಂದಾಳತ್ವ ಹಾಗೂ ಸಂಪೂರ್ಣ ಸಹಕಾರದೊಂದಿಗೆ ಇಂದಿಗೂ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ ಎಂದು ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಹೇಳಿದರು.
       ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರದ ನೂತನ ಧ್ವಜ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಮತ್ತು ವಾರ್ಷಿಕ ಜಾತ್ರೋತ್ಸವದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಭಾನುವಾರ ಸಂಜೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಧಾರ್ಮಿಕ ಭಾಷಣದಲ್ಲಿ ಮಾತನಾಡಿದರು.
         ಕಾಸರಗೋಡು ಸಾಂಸ್ಕೃತಿಕವಾಗಿ ಕರ್ನಾಟಕ ಭಾಗವಾಗಿದ್ದರೂ ತಾಂತ್ರಿಕವಾಗಿ ದೈವ ದೇವಾಲಯಗಳ ಆಚಾರ, ಅನುಷ್ಠಾನ, ಸಂಪ್ರದಾಯ ಕೇರಳದ ತಂತ್ರ ಸಮುಚ್ಛಯದ ಪ್ರಕಾರ ನಡೆಯುತ್ತಿದೆ.ಹಿಂದೆ ಈ ಸಂಪ್ರದಾಯ ವ್ಯವಸ್ಥೆ ಕನ್ಯಾಕುಮಾರಿಯಿಂದ ಚೀನಾದವರೆಗೆ ಹರಡಿತ್ತು.ಇಂದಿಗೂ ದೈವ ದೇವಾಲಯ ಕ್ಷೇತ್ರಗಳಲ್ಲಿ ಜನಪದ ಮೂಲ ಪ್ರದೇಶಕ್ಕೆ ಸಂಬಂಧಿಸಿದಂತೆ ಆಚಾರ ವಿಚಾರ ವಿಷಯಾಧಾರಿತ ಕ್ರಿಯಾ ಕಲಾಪಗಳನ್ನು ಪಾಲಿಸಿ ಬರಲಾಗುತ್ತಿದೆ.
   ಇತಿಹಾಸ ಪುಟ ತಿರುವಿದಲ್ಲಿ ದೇವ, ದೈವ, ಮಹಾರಾಜ ಹಾಗೂ ದೇಶಗಳಿಗೆ ಅವರದ್ದೇ ಆದ ಧ್ವಜಗಳಿವೆ.ಆರಾಧನಾ ಸಂದರ್ಭದಲ್ಲಿ ಧ್ವಜಸ್ಥಂಭ ಸ್ಥಾಪನೆಯಿಂದ ತೊಡಗಿ ಧ್ವಜಾರೋಹಣದಿಂದ ಉತ್ಸವ ಆರಂಭಿಸಿ, ಧ್ವಜಾವರೋಹಣದೊಂದಿಗೆ ಉತ್ಸವ ಸಂಪನ್ನಗೊಳ್ಳುವುದು ಅತ್ಯಂತ ಶ್ರೇಷ್ಠ  ಹಾಗೂ ಪ್ರಥಮ ಪ್ರಾಶಸ್ತ್ಯವಿರುವ ಸಂಪ್ರದಾಯ ವಿಧಾನವಾಗಿದೆ.ಆಗಮೋಕ್ತ ಸಂಪ್ರದಾಯಗಳ ಪ್ರಕಾರ ಪ್ರಾಚೀನ ಕಾಲದಿಂದಲೂ ದೈವ ದೇವರ ಸಾನಿಧ್ಯಾಭಿವೃದ್ಧಿಗೆ ಪ್ರತಿ 12 ವರ್ಷಗಳಿಗೊಮ್ಮೆ ಬ್ರಹ್ಮಕಲಶೋತ್ಸವ ನಡೆಸಲಾಗುತ್ತಿದೆ ಎಂದು ಅವರು ಶಾಸ್ತ್ರ-ಪುರಾಣ-ಆಗಮಗಳ ವಿವರಗಳೊಂದಿಗೆ ಸಮಗ್ರ ಮಾಹಿತಿ ನೀಡಿದರು.
     ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಅವರು ಧಾರ್ಮಿಕ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿ, ಭಜಕನ ಸರ್ವ ಸಂಕಷ್ಟವನ್ನೂ ನಿವಾರಿಸುವ ದೈವೀಶಕ್ತಿಗೆಪುನಶ್ಚೇತನ ನಿಡುವ ಬ್ರಹ್ಮಕಲಶ ಪ್ರತಿಯೊಬ್ಬರ ಆಂತರ್ಯದ ಕಲ್ಮಶಗಳನ್ನು ನೀಗಿ ಧನಾತ್ಮಕ ಶಕ್ತಿ ಸಂಚಯನದೊಂದಿಗೆ ಭಗವಂತನೆಡೆಗೆ ಸಾಗುವ ಮಾರ್ಗವನ್ನು ಸುಗಮಗೊಳಿಸಲಿ ಎಂದು ತಿಳಿಸಿದರು.

    ಉದ್ಯಮಿ ರಾಮಪ್ರಸಾದ್ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಟಯೋಟ ಸಂಸ್ಥೆ ಪ್ರಧಾನ ಪ್ರಬಂಧಕ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ನರಸಿಂಹ ಭಟ್ ದಂಬೆಮೂಲೆ, ಮಂಗಳೂರು ಬಂಟ್ಸ್ ಹಾಸ್ಟೆಲ್ ರಾಮಕೃಷ್ಣ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ.ಕಿಶೋರ್ ಕುಮಾರ್ ರೈ ಶೇಣಿ, ಕ್ಷೇತ್ರದ ಶಿಲ್ಪಿ ಮಹೇಶ್ ಮುನಿಯಂಗಳ, ಮುಂಬೈ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ  ಡಾ.ಅರುಣೋದಯ ರೈ ಬೆಳಿಯೂರುಗುತ್ತು  ಮತ್ತಿತರ ಗಣ್ಯರು ಉಪಸ್ಥಿತರಿದ್ದರು.ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸದಾನಂದ ಶೆಟ್ಟಿ ಕುದ್ವ ಸ್ವಾಗತಿಸಿ, ಪ್ರಶಾಂತ್ ಕುಮಾರ್ ವಂದಿಸಿದರು.ರಾಧಾಕೃಷ್ಣ ಭಟ್ ನಿರೂಪಿಸಿದರು.
     ರಾತ್ರಿ ನಾಟ್ಯ ನಿಲಯಂ ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯೆ ಕೀರ್ತಿ ಮತ್ತು ಬಳಗದವರಿಂದ 'ನೃತ್ಯಸಮನ್ವಿತಂ' ಕಾರ್ಯಕ್ರಮ ನಡೆಯಿತು.
  ಸೋಮವಾರ ಬೆಳಿಗ್ಗೆ  ಗಣಪತಿ ಹವನ, ಪ್ರೋಕ್ತ ಹೋಮ, ಪ್ರಾಯಶ್ಚಿತ ಹೋಮ, ಬಿಂಬ ಶುದ್ಧಿ, ಸಹಸ್ರಮೋದಕ ಅಥರ್ವ ಶೀರ್ಷ ಗಣಯಾಗ, ಶಕುಂತಳಾ ಎಸ್.ಎನ್.ಭಟ್ ಅವರಿಂದ ಸಂಗೀತ, ಪ್ರಜ್ವಲ್ ಎಸ್.ಕೆ., ಪ್ರಮೋದ್ ರಾಜ್ ಎಸ್.ಕೆ. ನಾದ ಸರಸ್ವತಿ ಸಂಗೀತ ನಿಲಯ ಪೆರ್ಲ ಇವರಿಂದ ಭಜನ್ ವೈವಿಧ್ಯ ನಡೆಯಿತು.



   ಮಧ್ಯಾಹ್ನ ಬದಿಯಡ್ಕದ ಪದ್ಮಶ್ರೀ ಮ್ಯೂಸಿಕಲ್ ವೇವ್ಸ್ ಅವರಿಂದ  ವಾದ್ಯವೃಂದ, 3ರಿಂದ ಬೆಂದ್ರೋಡು ಗೋವಿಂದ ಭಟ್ ಬಳಗದಿಂದ ಯಕ್ಷಗಾನ ಗಾನ ವೈಭವ, ಸಂಜೆ 5.30ರಿಂದ ಧಾರ್ಮಿಕ ಸಭೆ ನಡೆಯಿತು. ರಾತ್ರಿ 8ರಿಂದ ಮಂಗಳಾ ಮ್ಯಾಜಿಕ್ ವಲ್ರ್ಡ್ ರಾಜೇಶ್ ಮಳಿ, ಮಳಿ ಸಹೋದರಿಯರ ಅಪೂರ್ವ ಜಾದೂ ಪ್ರದರ್ಶನ, 9ರಿಂದ ಕುಂಟಾಲುಮೂಲೆ ಚಿರಂಜೀವಿ ಯಕ್ಷಗಾನ ಕಲಾಸಂಘ ಇವರಿಂದ ಯಕ್ಷಗಾನ ಬಯಲಾಟ ನಡೆಯಿತು.
   ಇಂದಿನ ಕಾರ್ಯಕ್ರಮ:
   ಜ.29ರಂದು ಬೆಳಗ್ಗೆ 6ರಿಂದ ವೈದಿಕ ಕಾರ್ಯಕ್ರಮಗಳು, 10ರಿಂದ ಭಜನೆ, 1ರಿಂದ ಹರಿಕಥೆ, 3ರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 5.30ಕ್ಕೆ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡುವರು.ಸಿ.ಸಂಜೀವ ರೈ ಕೆಂಗಣಾಜೆ ಅಧ್ಯಕ್ಷತೆಯಲ್ಲಿ ಧಾರ್ಮಿಕ ಮುಂದಾಳು ಕಶೆಕೋಡಿ ಸೂರ್ಯನಾರಾಯಣ ಭಟ್ ಧಾರ್ಮಿಕ ಭಾಷಣ ಮಾಡಲಿದ್ದಾರೆ.ಕಂದಾಯ ಸಚಿವ ಇ.ಚಂದ್ರಶೇಖರನ್ ಮತ್ತಿತರ ಗಣ್ಯರು ಉಪಸ್ಥಿತರಿರುವರು.ರಾತ್ರಿ 8ರಿಂದ ಸಾಯಿ ಮನೋಹರ್ ಕಾಸರಗೋಡು ಬಳಗದ ಸ್ಯಾಕ್ಸೋಫೋನ್ ಫ್ಯೂಶನ್ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries