ಕಾಸರಗೋಡು: ರಾಜ್ಯ ಸರಕಾರ ಆಡಳಿತೆ ಒಂದು ಸಾವಿರ ದಿನ ಪೂರೈಸಿದ ಸಂಭ್ರಮವನ್ನು ಜಿಲ್ಲೆಯಲ್ಲಿ ವಿಪುಲವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಫೆ.20ರಿಂದ 27 ವರೆಗೆ (7 ದಿನ) ಈ ಸಂಬಂಧ ತ್ವರಿತಗತಿಯ ಚಟುವಟಿಕೆಗಳು ನಡೆಯಲಿವೆ. "ಒಂದು ಸಾವಿರ ದಿನ,ಒಂದು ಸಾವಿರ ಯೋಜನೆಗಳ ಚಾಲನೆ, ಹತ್ತು ಸಾವಿರ ಕೋಟಿ ರೂ.ಗಳ ಅಂಗೀಕೃತ ಕಾಮಗಾರಿ" ಎಂಬ ಘೋಷಣೆಯೊಂದಿಗೆ ಈ ಆಚರಣೆ ನಡೆಯಲಿದೆ.
ಸಮಾರಂಭ ಅಂಗವಾಗಿ ವಿವಿಧ ಯೋಜನೆಗಳ ಉದ್ಘಾಟನೆ, ವಿವಿಧ ಯೋಜನೆಗಳಿಗೆ ಚಾಲನೆ, ನಿರ್ಮಾಣಗಳಿಗೆ ಶಿಲಾನ್ಯಾಸ, ಪ್ರದರ್ಶನ, ವಿಚಾರಸಂಕಿರಣ, ಕಲಾಕಾರ್ಯಕ್ರಮಗಳು ಇತ್ಯಾದಿ ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಮಾಧ್ಯಮ ಕಾಂಕ್ಲೇವ್ ಕಾರ್ಯಕ್ರಮ ನಡೆಸಲಾಗುವುದು.
ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಈ ಸಂಬಂಧ ಶನಿವಾರ ನಡೆದ ಜಿಲ್ಲಾ ಮಟ್ಟದ ಸಿಬ್ಬಂದಿಗಳ ಪ್ರಥಮ ಸಮಾಲೋಚನೆ ಸಭೆಯಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ, ನಗರಸಭೆ ಮಟ್ಟದಲ್ಲಿ, ಬ್ಲಾಕ್ ಪಂಚಾಯತಿ , ಗ್ರಾಮಪಂಚಾಯತಿ ಮಟ್ಟದಲ್ಲಿ ಸಮಾರಂಭಗಳು ನಡೆಸುವ ನಿಟ್ಟಿನಲ್ಲಿ ಯೋಜನೆ ಸಿದ್ಧವಾಗುತ್ತಿದೆ. ಜಿಲ್ಲಾಡಳಿತೆ, ವಿವಿಧ ಇಲಾಖೆಗಳು, ಕೇರಳ ತುಳು ಅಕಾಡೆಮಿ ಸಹಿತ ಸಂಸ್ಥೆಗಳು, ಸಂಸದ, ಶಾಸಕರು, ಜನಪ್ರತಿನಿಧಿಗಳ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದಿಂದ ಸಮಾರಂಭಗಳು ನಡೆಯಲಿದ್ದು, ಈ ಸಂಬಂಧ ಚರ್ಚೆಗಳು ನಡೆದುವು.
ಸಮಿತಿ ರಚನೆ:
ಜಿಲ್ಲಾ ಮಟ್ಟದ ಚಟುವಟಿಕೆಗಳ ಹೊಣೆ ನಿರ್ವಹಣೆಗೆ ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷರಾಗಿ, ಸಂಸದ ಪಿ.ಕರುಣಾಕರನ್, ಶಾಸಕರಾದ ಎನ್.ಎ.ನೆಲ್ಲಿಕುನ್ನು, ಕೆ.ಕುಂಞÂರಾಮನ್, ಎಂ.ರಾಜಗೋಪಾಲ್, ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅವರು ಮುಖ್ಯ ರಕ್ಷಣಾಧಿಕಾರಿಗಳಾಗಿ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸಂಚಾಲಕರಾಗಿ, ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂದನನ್ ಸಹಸಂಚಾಲಕರಾಗಿರುವ ನೂತನ ಸಮಿತಿ ರಚಿಸಲಾಯಿತು. ಜಿಲ್ಲಾ ಮಟ್ಟದ ಸಿಬ್ಬಂದಿಗಳು, ಅಕಾಡೆಮಿ ಪದಾಧಿಕಾರಿಗಳು, ಸ್ಥಳೀಯಾಡಳಿತೆ ಸಂಸ್ಥೆಗಳ ಪದಾಧಿಕಾರಿಗಳು ಸಮಿತಿಯ ಬೇರೆ ಬೇರೆ ಪದವಿಗಳಲ್ಲಿ ಕಾರ್ಯವಿರ್ವಹಿಸಲಿದ್ದಾರೆ.
ವಿಧಾನಸಭಾ ಮಟ್ಟದ ಸಮಾರಂಭಗಳಿಗೆ ಆಯಾ ಶಾಸಕರು ನೇತೃತ್ವ ವಹಿಸಲಿದ್ದಾರೆ. ಸ್ಥಳೀಯಾಡಳಿತ ಮಟ್ಟದಲ್ಲಿ ಆಯಾ ಸಂಸ್ಥೆಗಳ ಅಧ್ಯಕ್ಷರು ಹೊಣೆ ಹೊರಲಿದ್ದಾರೆ. ವಿಧಾನಸಭೆ ಮಟ್ಟದ ಸಭೆಗಳು ಆಯಾ ಶಾಸಕರ ಅಧ್ಯಕ್ಷತೆಯಲ್ಲಿ ಫೆಬ್ರವರಿ ತಿಂಗಳಮೊದಲ ವಾರದಲ್ಲಿ ನಡೆಸಲಾಗುವುದು.
ಫೆ.20ರಂದು ಉದ್ಘಾಟನೆ:
ಸಮಾರಂಭದ ಜಿಲ್ಲಾ ಮಟ್ಟದ ಉದ್ಘಾಟನೆ ಫೆ.20ರಂದು ಕಾಸರಗೋಡಿನಲ್ಲಿ, ಸಮಾರೋಪ ಫೆ.27ರಂದು ನೀಲೇಶ್ವರದಲ್ಲೂ ನಡೆಸಲು ನಿರ್ಧರಿಸಲಾಗಿದೆ. ರಾಜ್ಯ ಮಟ್ಟದಲ್ಲೂ ಈ ಕಾರ್ಯಕ್ರಮ ವೈಭವಯುತವಾಗಿ ನಡೆಯಲಿದ್ದು, ರಾಜ್ಯ ಮಟ್ಟದ ಉದ್ಘಾಟನೆ ತಿರುವನಂತಪುರಂನಲ್ಲಿ ನಡೆಯಲಿದೆ. ಕೋಯಿಕೋಡ್ ನಲ್ಲಿ ಸಮಾರೋಪ ನಡೆಯಲಿದೆ.
ಸಾವಿರ ದಿನ-ಸಾವಿರ ಹೊಸ ಯೋಜನೆಗಳು:
ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ಮಾತನಾಡಿ ಒಂದು ಸಾವಿರ ದಿನದ ಪೂರೈಕೆ ಫೆ.20ರಂದು ಪೂರ್ತಿಗೊಳ್ಳಲಿದ್ದು, ಈ ಸಂಬಂಧ ಒಂದು ಸಾವಿರ ಹೊಸ ಯೋಜನೆಗಳ ಚಾಲನೆಗೆ ಯತ್ನ ನಡೆಸಲಾಗುತ್ತಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆ ಪೂರ್ತಿಗೊಂಡಿದ್ದು, ಶೀಘ್ರದಲ್ಲೇ ಸಿದ್ಧತೆ ಪೂರ್ಣಗೊಳ್ಳಲಿದೆ. ಕಳೆದ 3 ವರ್ಷದ ಮುಂಗಡಪತ್ರದಲ್ಲಿ ತಿಳಿಸಲಾದ ಕೆಲವು ಯೋಜನೆಗಳ ಪೂರ್ತೀಕರಣವೂ ಈ ಸಂದರ್ಭದಲ್ಲಿ ನಡೆಸಲು ಉದ್ದೇಶವಿದೆ ಎಂದು ಹೇಳಿದರು.
ಇದೇ ಆಚರಣೆ ಸಂದರ್ಭದಲ್ಲಿ ಪ್ರವಾಸೋದ್ಯಮ ಪ್ರಗತಿಗೂ ರಾಜ್ಯ ಸರಕಾರ ಆದ್ಯತೆ ನೀಡಲಿದೆ. ಈ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ವಲಯಕ್ಕೂ ಹೆಚ್ಚುವರಿ ಹೊಣೆಗಾರಿಕೆಯಿದೆ ಎಂದು ಸಚಿವ ತಿಳಿಸಿದರು.
ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಬೇಕಲ ಅಭಿವೃದ್ಧಿ ನಿಗಮ ಜಂಟಿ ವತಿಯಿಂದ ವಿಚಾರಸಂಕಿರಣ-ಕಲಾಕಾರ್ಯಕ್ರಮ ಇತ್ಯಾದಿ ನಡೆಸುವ ಉದ್ದೇಶಗಳಿವೆ ಎಂದವರು ಹೇಳಿದರು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಮಾತನಾಡಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮತ್ತು ಶಾಸಕರ ನಿಧಿ ಬಳಸಿ ಈ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಯಾವುದೇ ಕಾರ್ಯಕ್ರಮ ಸ್ಥಳೀಯ ಮಟ್ಟದಲ್ಲಿ ಚರ್ಚೆ ನಡೆಸಿ ಅಂತಿಮ ರೂಪು ಪಡೆಯಬೇಕು ಎಂದವರು ಆಗ್ರಹಿಸಿದರು.
ಶಾಸಕರಾದ ಕೆ.ಕುಂಞÂರಾಮನ್, ಎಂ.ರಾಜಗೋಪಾಲ್, ಉಪಜಿಲ್ಲಾಧಿಕಾರಿ ಅರುಣ್ ಕೆ. ವಿಜಯ್, ಜಿಲ್ಲಾ ಮಟ್ಟದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

