ಉಪ್ಪಳ: ಭಜನೆಯು ಸಾಮಾಜಿಕ ಮತ್ತು ಮಾನಸಿಕ ಸ್ವಾಸ್ಥಕ್ಕೆ ಪೂರಕವಾಗಿದ್ದು, ಭಜನೆಯಿಂದ ವಿಭಜನೆ ಇಲ್ಲವಾಗುತ್ತದೆ ಎಂದು ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಹೇಳಿದರು.
ಕನಿಯಾಲ ಸಮೀಪದ ಸುದೆಂಬಳ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಮತ್ತು ಶ್ರೀ ದುರ್ಗಾಪರಮೇಶ್ವರಿ ಕಲಾ ಸಂಘದ 15 ನೇ ವಾರ್ಷಿಕೋತ್ಸವ ಅಂಗವಾಗಿ ಭಾನುವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಭಜನೆಯ ಒಳಾರ್ಥ ಭಜಿಸು, ಜಪಿಸು ಮತ್ತು ನೆನಪಿಸು ಎಂಬುದಾಗಿದೆ. ಭಾರತೀಯ ಧರ್ಮ ಸಂಸ್ಕøತಿಯಲ್ಲಿ ಹಲವು ದೇವರಿದ್ದು, ಯಾವ ದೇವರನ್ನಾದರೂ ಭಕ್ತಿಯಿಂದ ಭಜಿಸಿ, ಜಪಿಸಿ ನಂತರ ಮತ್ತೆ ಮತ್ತೆ ನೆನಪಿಸಿದಲ್ಲಿ ಭಾವ ಶುದ್ಧಿಯೊಂದಿಗೆ ಕರ್ಮ ಶುದ್ಧಿಯ ದಾರಿಯಲ್ಲಿ ಮುನ್ನಡೆಯಲು ಸಾಧ್ಯವಿದೆ ಎಂದರು. ಭಜನೆಯ ಮೂಲಕ ಜನರು ಒಗ್ಗೂಡಲು ಸಾಧ್ಯವಿದೆ ಎಂದರು. ಕಲಿಯುಗದಲ್ಲಿ ಯಾಗಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ಭಕ್ತಿ ಮಾರ್ಗಕ್ಕಿದ್ದು, ಭಕ್ತಿಯೇ ದೇವರನ್ನು ಒಲಿಸಿಕೊಳ್ಳುವ ಯಾಗವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಡಾ.ಮನು ಭಟ್ ಕೆದುಕೋಡಿ ಮಾತನಾಡಿ ಮನುಷ್ಯನ ದೈಹಿಕ ಮಾನಸಿಕ ಸ್ವಾಸ್ಥ್ಯದೊಂದಿಗೆ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ಕೆಲಸವಾಗಬೇಕಿದೆ. ಭಜನಾ ಮಂದಿರಗಳಂತಹ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಚಟುವಟಿಕೆಗಳು ಸಾಮಾಜಿಕ ಸ್ವಾಸ್ಥ್ಯವನ್ನು ಸಂರಕ್ಷಿಸುವಲ್ಲಿ ಸಹಕಾರಿಯಾಗಿವೆ ಎಂದರು. ಜನ ಮನ ಬೆಸೆಯುವಲ್ಲಿ ಭಜನಾ ಮಂದಿರಗಳ ಕೊಡುಗೆ ಅನನ್ಯ ಎಂದರು.
ಮಾನ್ಯಂತಾಯ ಶ್ರೀನಿವಾಸ ಭಟ್ ಸುದೆಂಬಳ ಸಭಾ ಕಾರ್ಯಕ್ರಮದ ಗೌರವಾಧ್ಯಕ್ಷತೆ ವಹಿಸಿಕೊಂಡಿದ್ದರು. ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಭಜರಂಗದಳದ ಅಕ್ಷಯ ರಜಪೂತ್ ಕಲ್ಲಡ್ಕ, ಸಜಂಕಿಲ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಕಾರ್ಯದರ್ಶಿ ಸದಾನಂದ.ಯಂ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಗಣೇಶ್ ಕುಮಾರ್ ಕಲ್ಲಗದ್ದೆ, ಕಿಶೋರ್ ಕುಮಾರ್ ಪೆರ್ವಡಿ ಬೀಡು, ಸುದೆಂಬಳ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಗವರವಾಧ್ಯಕ್ಷ ರಾಮಚಂದ್ರ ದೇವಾಡಿಗ ಮೊದಲಾದವರು ಇದ್ದರು. ಸಾಧಕರು ಮತ್ತು ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಿಶನ್ ಕೌಡೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಂಗವಾಗಿ ಭಜನಾ ಮಂದಿರದಲ್ಲಿ ಧಾರ್ಮಿಕ ಪೂಜಾದಿ ಕಾರ್ಯಕ್ರಮಗಳು, ವಿವಿಧ ಭಜನಾ ಸಂಘಗಳ ಮೂಲಕ ಭಜನಾ ಸಂಕೀರ್ತನಾ ಕಾರ್ಯಕ್ರಮ ಸಹಿತ ಸತ್ಯನಾರಾಯಣ ಪೂಜೆ, ದುರ್ಗಾ ಪೂಜೆ ನೆರವೇರಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಮಕ್ಕಳಿಂದ ಸಾಂಸ್ಕøತಿಕ ವೈವಿಧ್ಯ ಕಾರ್ಯಕ್ರಮ ನೆರವೇರಿತು. ರಾತ್ರಿ ಬಂಜಿಗ್- ಆಕೋಡ್ಜಿ ನಾಟಕ ಪ್ರದರ್ಶನಗೊಂಡಿತು.

