ಬಿದಿರು ಬೆಳೆ ಯೋಜನೆ: ಮೊದಲ ನರ್ಸರಿ ಆರಂಭ
0
ಫೆಬ್ರವರಿ 24, 2019
ಉಪ್ಪಳ: ಕಾಸರಗೋಡು ಜಿಲ್ಲೆಯನ್ನು ದಕ್ಷಿಣ ಭಾರತದ ಬಿದಿರು ಕೃಷಿಯ ರಜಧಾನಿಯಾಗಿಸುವ ಚಟುವಟಿಕೆಗಳು ತ್ವರಿತಗತಿಯಿಂದ ಸಾಗುತ್ತಿದ್ದು, ಯೋಜನೆಗಾಗಿ ಬಿದಿರು ಸಸಿಗಳನ್ನು ಉತ್ಪಾದಿಸುವ ಜಿಲ್ಲೆಯ ಮೊದಲ ನರ್ಸರಿ ಆರಂಭಗೊಂಡಿದೆ.
ರಾಜ್ಯ ಸರಕಾರ ಒಂದು ಸಾವಿರ ದಿನ ಪೂರೈಸಿದ ಆಚರಣೆಯ ಅಂಗವಾಗಿ ಬ್ಯಾಂಬೂ ನರ್ಸರಿ ಆಫ್ ಕೇರಳ ಜಿಲ್ಲಾ ಮಟ್ಟದ ನರ್ಸರಿ ಉದ್ಘಾಟನೆ ಶನಿವಾರ ಪೈವಳಿಕೆ ಗ್ರಾಮಪಂಚಾಯತ್ ನ ಕಚೇರಿ ಬಳಿ ನಡೆಯಿತು.
ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟನೆ ನಡೆಸಿದರು. ಸಾಧಾರಣ ಗತಿಯಲ್ಲಿ ಬೇಲಿನಿರ್ಮಾಣ ಇತ್ಯಾದಿಗಳಿಗಾಗಿ ಬಳಸುವ ಬಿದಿರನ್ನು ಜಿಲ್ಲೆಯ ಪ್ರಕೃತಿ ಸಂರಕ್ಷಣೆಗಾಗಿ ಬಳಸುವ ಮೂಲಕ ಜಗತ್ತಿಗೆ ಮಾದರಿಯಾಗುವ ಯೋಜನೆ ಇದಾಗಿದೆ ಎಂದು ಸಚಿವ ಈ ವೇಳೆ ತಿಳಿಸಿದರು.
ಸರಕಾರ ಒಂದು ಸಾವಿರ ದಿನದ ತನ್ನ ಅವಧಿಯಲ್ಲಿ ಸಮಗ್ರ ಅಭಿವೃದ್ಧಿಯನ್ನು ಜಾರಿಗೊಳಿಸುತ್ತಿದ್ದು, ಕಾಸರಗೋಡು ಜಿಲ್ಲೆಯನ್ನು ಪ್ರಗತಿಯ ಪ್ರಧಾನ ವಾಹಿನಿಗೆ ತರುವ ಉದ್ದೇಶ ಹೊಂದಿದೆ ಎಂದವರು ನುಡಿದರು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಮಾತನಾಡಿ ಜಿಲ್ಲೆಯ ಸಾಮಾಜಿಕ-ಆರ್ಥಿಕ ವಲಯಗಳಲ್ಲಿ ಐತಿಹಾಸಿಕ ಬದಲಾವಣೆ ತರುವ ನಿಟ್ಟಿನಲ್ಲಿ ಬಿದಿರು ಬೆಳೆ ಯೋಜನೆ ಪೂರಕವಾಗಿದೆ. ಜಿಲ್ಲೆಯನ್ನು ದಕ್ಷಿಣ ಭಾರತದ ಬ್ಯಾಂಬೂ ಹಬ್ ಆಗಿಸುವ ಉದ್ದೇಶವಿದೆ ಎಂದು ಅವರು ಹೇಳಿದರು.
ಮೊದಲ ಹಂತದಲ್ಲಿ ಕಾಸರಗೋಡು, ಮಂಜೇಶ್ವರ ಬ್ಲೋಕ್ ಪಂಚಾಯತ್ ಗಳಲ್ಲಿ, ಚೀಮೇನಿ ತೆರೆದ ಜೈಲಿನಲ್ಲಿ ಈ ಯೋಜನೆ ಜಾರಿಗೊಳಿಸಲಾಗುವುದು. ವಿಶ್ವ ಪರಿಸರ ದಿನವಾಗಿರುವ ಜೂನ್ 5ರಂದು ಈ ಪ್ರದೇಶಗಳಲ್ಲಿ ಮೂರು ಲಕ್ಷ ಸಸಿಗಳನ್ನು ನೆಡಲಾಗುವುದು. ಉದ್ಯೋಗ ಖಾತರಿ ಯೋಜನೆ ಮೂಲಕ ಬಿದಿರು ಸಸಿಗಳನ್ನು ಉತ್ಪಾಇಸಲಾಗುವುದು. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉದ್ಯಮ ರಂಗ ಹಿಂದೇಟು ಹಾಕಿರುವ ಜಿಲ್ಲೆಯಲ್ಲಿ ಬಿದಿರು ಕೇಂದ್ರಿತ ಉದ್ಯಮ ಪುನಶ್ಚೇತನಕ್ಕೆ ಕಾರಣವಾಗಲಿದೆ ಎಂದವರು ಹೇಳಿದರು.
ಪೈವಳಿಕೆ ಗ್ರಾಮಪಂಚಾಯತಿ ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮೀಂಜ ಗ್ರಾಮಪಂಚಾಯತ್ ಅಧ್ಯಕ್ಷ ಅಧ್ಯಕ್ಷೆ ಶಂಸಾದ್ ಶುಕೂರ್, ಉದ್ಯೋಗ ಖಾತರಿ ಯೋಜನೆ ನಿರ್ದೇಶಕ ವಿ.ಕೆ.ದಿಲೀಪ್, ಪ್ರಧಾನ ಕೃಷಿ ಅಧಿಕಾರಿ ಟಿಸಮ್ಮ ಥಾಮಸ್, ಅರಣ್ಯ ಸಹಾಯಕ ಕನ್ಸರ್ ವೇಟರ್ ಬಿಜು, ಎ.ಡಿ.ಸಿ. ಬೆವಿನ್ ಜಾನ್ ವರ್ಗೀಸ್, ಮಣ್ಣು ಸಮೀಕ್ಷೆ ಸಹಾಯಕ ನಿರ್ದೇಶಕ ಎನ್.ಸತ್ಯನಾರಾಯಣ, ಪೈವಳೀಕೆ ಗ್ರಾಮಪಂಚಾಯತ್ ಉಪಾಧ್ಯಕ್ಷೆ ಸುನಿತಾ ವಲ್ಟಿ ಡಿಸೋಜಾ, ಪೈವಳಿಕೆ ಕೃಷಿ ಅಧಿಕಾರಿ ಅಂಜನಾ ಅಜಯ್ ಕುಮಾರ್, ಗ್ರಾಮಪಂಚಾಯತ್ ಸದಸ್ಯರು, ಕಾರ್ಯದರ್ಶಿ ಕೆ.ಪ್ರೇಮಕುಮಾರ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು.

