ಕುಂಬಳೆ: ಹವ್ಯಕ ಮಹಾ ಮಂಡಲದ ಮುಳ್ಳೇರಿಯಾ ಮಂಡಲ ವಿದ್ಯಾರ್ಥಿವಾಹಿನಿಯ ಸಹಕಾರದೊಂದಿಗೆ ಗುಂಪೆ ವಲಯ ವಿದ್ಯಾರ್ಥಿವಾಹಿನಿಯ ಪ್ರಾಯೋಜಕತ್ವದಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್‍ನಲ್ಲಿ ಇತ್ತೀಚೆಗೆ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಸಿದ್ಧತಾ ಕಾರ್ಯಾಗಾರ " ಪರೀಕ್ಷೆ-ನಿರೀಕ್ಷೆ " ಕಾರ್ಯಕ್ರಮ ನಡೆಯಿತು.
ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಭಟ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಅನಂತನಾರಾಯಣ ಪದಕಣ್ಣಾಯ, ಶ್ರೀಭಾರತೀ ಕಾಲೇಜು ನಂತೂರು ಶುಭ ಹಾರೈಸಿದರು.
ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬನ ಉತ್ತಮ ಉತ್ತರಗಳು ಅಧ್ಯಾಪಕರ ಮನಸ್ಸು ಅರಳುತ್ತದೆ. ಉತ್ತಮ ತಯಾರಿ ನಡೆಸಿದ್ದಲಿ ಉತ್ತರ ತಿಳಿದಲ್ಲಿ ವಿದ್ಯಾರ್ಥಿಯ ಮುಖದಲ್ಲಿ ಮಂದಹಾಸ ಮೂಡುತ್ತದೆ ಎಂದು ಉಂಡೆಮನೆ ವಿಶ್ವೇಶ್ವರ ಭಟ್ ವಿದ್ಯಾರ್ಥಿಗಳನ್ನು ಕಾರ್ಯಕ್ರಮದತ್ತ ಸೆಳೆಯುತ್ತಾ ವಿಶೇಷ ತರಗತಿ ನಡೆಸಿದರು. ಈಗಲೇ ಪರೀಕ್ಷಾ ತಯಾರಿ ನಡೆಸಿದರೆ ಸಾಮಾನ್ಯ ದಿನಕ್ಕೆ ನಾಲ್ಕು ಗಂಟೆ ತಯಾರಿ ಸಾಕಾಗುತ್ತದೆ. ದಿನ ಕಳೆದಂತೆ ತಯಾರಿ ಆರಂಭಿಸಿದರೆ ಕಲಿಕೆಯ ವೇಗ ಹೆಚ್ಚಾಗಿ ವಿಷಯಗಳನ್ನು ಸರಿಯಾಗಿ ಮನನ ಮಾಡದೆ ಎಡವುವ ಸಾಧ್ಯತೆ ಹೆಚ್ಚು. ಆದ್ದರಿಂದ ಸಾಕಷ್ಟು ಮೊದಲೇ ತಯಾರಿ ಅಗತ್ಯ ಎಂದರು. ಅಧ್ಯಯನ ಮಾಡುವಾಗ ಸರಿಯಾಗಿ ಅರ್ಥೈಸಿಕೊಂಡು ಮಾಡುವುದು ಬಹು ಮುಖ್ಯ ಅಂಶ ಎಂಬುದನ್ನು ನೆನಪಿಸಿದರು. ಓದುವ ವೇಳಾಪಟ್ಟಿ, ಅಗತ್ಯದ ವಿಶ್ರಾಂತಿ, ಮನೋದೈಹಿಕ ಚಟುವಟಿಕೆಗಳು, ಪೂರಕವಾಗಿ ಯುಕ್ತ ಆಹಾರದ ಅಗತ್ಯ ಇವುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. 180 ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಂಡರು.
ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಪ್ರಾಂಶುಪಾಲ ರಾಮಚಂದ್ರ ಭಟ್ ನೇರೋಳು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗುಂಪೆ ವಲಯ ಜೀವಿಕಾ ಪ್ರಧಾನ ಇ.ಎಚ್. ಗೋವಿಂದ ಭಟ್ ವಂದಿಸಿದರು. ಮುಳ್ಳೇರಿಯ ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಕೇಶವಪ್ರಸಾದ ಎಡಕ್ಕಾನ ಪರೀಕ್ಷೆ - ನಿರೀಕ್ಷೆ ಕಾರ್ಯಕ್ರಮ ಸಂಯೋಜನೆ ಮಾಡಿದರು.
