ಸಿ.ಪಿ.ಸಿ.ಆರ್.ಐ.ಯಲ್ಲಿ ಪುನರ್ನವ ಕೃಷಿ ಮೇಳ ಆರಂಭ- ಕೃಷಿಕರನ್ನು ಮರೆತು ದೇಶದಲ್ಲಿನೆಲೆಗೊಳ್ಳಲು ಯಾರಿಗೂ ಸಾಧ್ಯವಿಲ್ಲ: ಸಚಿವ ಚಂದ್ರಶೇಖರನ್
0
ಫೆಬ್ರವರಿ 17, 2019
ಕಾಸರಗೋಡು: ಕೃಷಿಕರನ್ನು ಮರೆತು ಯಾರಿಗೂ ದೇಶದಲ್ಲಿ ನೆಲೆಗೊಳ್ಳಲು ಸಾಧ್ಯವಿಲ್ಲ ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅಭಿಪ್ರಾಯಪಟ್ಟರು.
ರಾಜ್ಯ ಕೃಷಿ ಅಭಿವೃದ್ಧಿ, ಕೃಷಿ ಕಲ್ಯಾಣ ಇಲಾಖೆ, ಆತ್ಮ ಸಂಘಟನೆ ಕಾಸರಗೋಡು, ಐ.ಸಿ.ಎ.ಆರ್., ಸಿ.ಪಿ.ಸಿ.ಆರ್.ಐ. ಜಂಟಿ ವತಿಯಿಂದ ಸಿ.ಪಿ.ಸಿ.ಆರ್.ಐ.ಯಲ್ಲಿ ಶನಿವಾರ ಆರಂಭಗೊಂಡ "ಪುನರ್ನವ ಕೃಷಿಮೇಳ" ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಶೇ 70 ಮಂದಿ ಜನತೆ ಕೃಷಿ ಸಂಬಂಧ ಬದುಕನ್ನೇ ಇಂದಿಗೂ ನೆಚ್ಚಿಕೊಂಡಿದ್ದಾರೆ. ಅವರನ್ನು ಅವಗಣಿಸಿ ದೇಶದಲ್ಲಿ ಬಾಳಬಹುದು ಎಂದು ಯಾರೂ ಭಾವಿಸಬಾರದು. ಕೃಷಿ ವಲಯದ ಸಮಸ್ಯೆ ಅದು ಇಡೀ ಮಾನವ ಸಂಕುಲದ ಸಮಸ್ಯೆ ಎಂಬಮನವರಿಯಾಗುವವರೆಗೆ ಬದುಕು ಸುಲಭಸಾಧ್ಯವಲ್ಲ. ಈ ಬಗ್ಗೆ ಕ್ರಿಯಾತ್ಮಕ ಪರಿಹಾರಗಳು ಬೇಕು. ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನಿಗಳ ಕ್ರಮ ಅನಿವಾರ್ಯ ಎಂದು ಅವರು ಹೇಳಿದರು.
ಕೃಷಿಕರೊಂದಿಗೆ ಉತ್ತಮ ಸಂಬಂಧ ಹೊಂದಿ, ಕೃಷಿ ಸಂಶೋಧನೆಯಲ್ಲಿ ಜನಪರ ಸಾಧನೆ ನಡೆಸುತ್ತಿರುವ ಸಿ.ಪಿ.ಸಿ.ಆರ್.ಐ.ಯ ಕೊಡುಗೆ ಈನಿಟ್ಟಿನಲ್ಲಿ ಶ್ಲಾಘನೀಯ. ಕೃಷಿ ಮೇಳದಂಥಾ ಯತ್ನಗಳು ಕೃಷಿ ವಲಯದ ಪುನಶ್ಚೇತನಕ್ಕೆ ಪೂರಕವಾಗಲಿವೆ ಎಂದವರು ನುಡಿದರು.
ರಾಜ್ಯದಲ್ಲಿ ನಡೆದ ಜಲದುರಂತದಿಂದ ನಾವು ಕಲಿಯಬೇಕಾದ ಪಾಠಗಳು ಅನೇಕ ಇವೆ. ನವಕೇರಳ ನಿರ್ಮಾಣ ವೇಳೆಗೆ ಮುಂದೆ ಇಂಥಾ ದುರಂತಗಳು ಸಂಭವಿಸದೇ ಇರುವಂತೆ ಮುಂಜಾಗರೂಕತೆ ವಹಿಸಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದರು.
ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು.ಜೈವಿಕ ಕೃಷಿ ವಲಯದಲ್ಲಿ ಸಾಧನೆ ನಡೆಸಿದವರನ್ನು ಅಭಿನಂದಿಸಲಾಯಿತು. ಕೃಷಿಕೋತ್ತಮ ಪ್ರಶಸ್ತಿ ವಿಜೇತ, ಕಯ್ಯೂರು-ಚೀಮೇನಿಯ ನಿವಾಸಿ ಪಿ.ಎ.ರಾಜನ್, ಪಡನ್ನಕ್ಕಾಡ್ ಕೃಷಿ ಕಾಲೇಜಿನ ಅಸೋಸಿಯೆಟ್ ಡೀನ್ ಡಾ.ಪಿ.ಆರ್.ಸುರೇಶ್, ನೀಲೇಶ್ವರ ಕೃಷಿ ಸಹಾಯಕ ನಿರ್ದೇಶಕ ಸಿಂಧು ಕುಮಾರಿ, ಪಿಲಿಕೋಡ್ ನ ನಿಷಾಂತ್ ಪುದಿಯವೀಟ್ಟಿಲ್, ಪಳ್ಳಿಕ್ಕರೆಯ ಕೆ.ಭಾಸ್ಕರನ್ ಮೊದಲಾದವರನ್ನು ಅಭಿನಂದಿಸಲಾಯಿತು.
ಜೈವ ಕೃಷಿ ಯೋಜನೆಪ್ರಕಾರದ ಅತ್ಯುತ್ತಮ ಜೈವಿಕ ಕೃಷಿನಡೆಸಿದ ಗ್ರಾಮಪಂಚಾಯತ್ ಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 2017-18 ವರ್ಷದ ಬಹುಮಾನ ಪಡೆದ ಪನತ್ತಡಿ ಗ್ರಾಮಪಂಚಾಯತ್ , ಕಿನಾನೂರು ಕರಿಂದಳಂ, ಮುಳಿಯಾರ್ ಗ್ರಾಮಪಂಚಾಯತ್ ಗಳು, 2018-19 ವರ್ಷದ ಬಹುಮಾನ ಗಲೀಸಿದ ಕಿನಾನೂರು-ಕರಿಂದಳಂ, ಕಳ್ಳಾರ್, ದೇಲಂಪಾಡಿ ಗ್ರಾಮಪಂಚಾಯತ್ ಗಳಿಗೆ ಪ್ರಶಸ್ತಿ ಪ್ರದಾನನಡೆಯಿತು.
ಮೇಳ ಅಂಗವಾಗಿನಡೆಯುವ ವಿಚಾರಸಂಕಿರಣಗಳ ಉದ್ಘಾಟನೆಯನ್ನು ಶಾಸಕ ಎಂ.ರಾಜಗೋಪಾಲನ್ ನೆರವೇರಿಸಿದರು. ಸಿ.ಪಿ.ಸಿ.ಆರ್.ಐ. ಪ್ರಭಾರ ನಿರ್ದೇಶಕಿ ಡಾ.ಅನಿತಾಕರುಣ್ ಪ್ರಧಾನ ಭಾಷಣ ಮಾಡಿದರು. ಮೊಗ್ರಾಲ್ ಪುತೂರು ಗ್ರಾಮಪಂಚಾಯತ್ ಅಧ್ಯಕ್ಷ ಎ.ಎ.ಜಲೀಲ್, ಕೃಷಿ ಸಹಾಯಕ ನಿರ್ದೇಶಕ ಡಾ.ಮೋಹನ್ ಜೋಸೆಫ್, ಆತ್ಮ ಯೋಜನೆ ನಿರ್ದೇಶಕಿ ಲೌಲಿ ಆಗಸ್ಟಿನ್, ಕೃಷಿ ವಿಜ್ಞಾನ ಕೇಂದ್ರ ಅಧಿಕಾರಿ ಡಾ.ಮನೋಜ್ ಕುಮಾರ್, ಎ.ಡಿ.ಸಿ.ಆರ್.ಎ.ಆರ್.ಎಸ್. ಪಿಲಿಕೋಡ್ ಕೆ.ಎಂ.ಸತೀಶನ್, ಹಾಲು ಅಭಿವೃದ್ಧಿಇಲಾಖೆ ಜಿಲ್ಲಾ ಅಧಿಕಾರಿ ಶಾಂಟಿ ಅಬ್ರಾಹಂ, ಜಿಲ್ಲಾ ಸೋಯಿಲ್ ಕನ್ಸರ್ ವೇಟರ್ ಅಧಿಕಾರಿ ಅಶೋಕ್ ಕುಮಾರ್, ಸಿಬ್ಬಂದಿ, ಕೃಷಿಕರು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಫೆ.19 ವರೆಗೆ ಮೇಳ ಆಯೋಜಿಸಲಾಗಿದೆ. ಬೆಳಿಗ್ಗೆ 10ರಿಂದ ಸಂಜೆ 7.30 ವರೆಗೆ ಪ್ರದರ್ಶನ ನಡೆಯಲಿದೆ.

