ಮುಳ್ಳೇರಿಯ: ಪಾಂಡಿ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಚಿಲುಮೆ 19 ಎಂಬ ಹೆಸರಿನಲ್ಲಿ ಕಲಿಕೋತ್ಸವ ಶಿಬಿರವನ್ನು ಫೆಬ್ರವರಿ14ರಂದು ನಡೆಸಲಾಯಿತು. ಉತ್ಸವದ ವಾತಾವರಣವನ್ನು ಸೃಷ್ಟಿಸಿ ಒಂದರಿಂದ ಏಳನೆಯ ತರಗತಿಯವರೆಗಿನ ಮಕ್ಕಳಿಂದ 42 ವಿಭಾಗಗಳಲ್ಲಿ ಚಟುವಟಿಕೆಗಳ
ಪ್ರದರ್ಶನವು ನಡೆಯಿತು.
ಗಣಿತದ ಆಟಗಳು, ಇಂಗ್ಲೀಷ್ ಭಾಷೆಯಲ್ಲಿ ವಿವಿಧ ರೀತಿಯ ಸಂವಾದಗಳು, ಹಿಂದಿಯಲ್ಲಿ ನಾಟಕೀಕರಣ, ಅರೆಬಿಕ್ ಅಸೆಂಬ್ಲಿ, ಕನ್ನಡ ಮತ್ತು ಮಲೆಯಾಳದ ಭಾಷಾ ಚಟುವಟಿಕೆಗಳು, ವಿಜ್ಞಾನದ ಪ್ರಯೋಗಗಳು ಮತ್ತು ವೀಕ್ಷಣೆಗಳು, ಸಮಾಜ ವಿಜ್ಞಾನದ ಚರ್ಚೆ, ಸಂವಾದ, ವಿಚಾರ ಸಂಕಿರಣ, ಭೂಪಟ ಪರಿಚಯ ಎಂಬಿವುಗಳನ್ನು ಕಲಿಕೆಯ ಭಾಗವಾಗಿ ನಡೆಸಲಾಯಿತು. ಕೆಲವು ಸಂದರ್ಭಗಳಲ್ಲಿ ಹೆತ್ತವರು ವಿದ್ಯಾರ್ಥಿಗಳಾದರು ಮತ್ತು ಮಕ್ಕಳು
ಶಿಕ್ಷಕರಾದರು. ಮಕ್ಕಳು ನಡೆಸಿದ ಚಟುವಟಿಕೆಗಳನ್ನು ಆಸಕ್ತಿಯಿಂದ ಹೆತ್ತವರು ವೀಕ್ಷ್ಸಿಸಿದರು. ಹೆತ್ತವರು ಚರ್ಚೆಗಳಲ್ಲಿ ತಮ್ಮ ಅನುಭವಗಳನ್ನು
ಹಂಚಿಕೊಂಡರು. ಕಲಿಕೋತ್ಸವದ ಪ್ರಚಾರಕ್ಕಾಗಿ ಸ್ಥಳೀಯ ಭಾಷೆಗಳಾದ ತುಳು, ಕನ್ನಡ, ಮಲೆಯಾಳ ಮತ್ತು ಮಾರಾಠಿಯಲ್ಲಿ ನಿರ್ಮಿಸಿದ ನಾವಿದ್ದೇವೆ ನೀವು... ಎಂಬ ಪ್ರೊಮೋ ವೀಡಿಯೋ ಜಿಲ್ಲೆಯಲ್ಲಿಯೇ ತನ್ನ ಸೃಜನಶೀಲತೆಯಿಂದ ಗಮನ ಸೆಳೆಯಿತು. ಊರವರೂ, ಮಕ್ಕಳೂ, ಹೆತ್ತವರೂ ಈ ಪ್ರೊಮೋ ವೀಡಿಯೋದಲ್ಲಿ ತಮ್ಮ ಧ್ವನಿಗೂಡಿಸಿದ್ದರು.
ಕಲಿಕೋತ್ಸವದ ಮೊದಲು ಪಾಂಡಿಯ ಸುತ್ತಮುತ್ತಲಿನ ಸ್ಥಳಗಳಲ್ಲಿ ಸಂಚರಿಸಿದ ಕಲಿಕೋತ್ಸವ ಪ್ರಚಾರ ವಾಹನವೂ ಗಮನ ಸೆಳೆಯಿತು.
ಔಪಚಾರಿಕವಾದ ಉದ್ಘಾಟನೆಯನ್ನು ಮಾಡದೆ ಸಂಪೂರ್ಣವಾಗಿ ಮಕ್ಕಳ ಚಟುವಟಿಕೆಗಳ ಪ್ರದರ್ಶನಕ್ಕಾಗಿ ಮೀಸಲಿಟ್ಟ ಕಾರ್ಯಕ್ರಮದಲ್ಲಿ ಸಮಗ್ರ ಶಿಕ್ಷಾ ಕೇರಳದ ಜಿಲ್ಲಾ ಯೋಜನಾಧಿಕಾರಿ ಪಿ. ಪಿ. ವೇಣುಗೋಪಾಲನ್, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೆ. ಕೈಲಾಸಮೂರ್ತಿ, ಕುಂಬಳೆ ಬ್ಲಾಕ್ ಯೋಜನಾದಿಕಾರಿ ಎನ್.ವಿ. ಕುಂಞÂಕೃಷ್ಣನ್ ಭಾಗವಹಿಸಿ ಮಕ್ಕಳೊಡನೆ ಮತ್ತು ರಕ್ಷಕರೊಡನೆ ಸಂವಾದ ನಡೆಸಿದರು. ಮಕ್ಕಳ ಈ ವರ್ಷದ ಕಲಿಕಾ ಉತ್ಪನ್ನಗಳ ಪ್ರದರ್ಶನಕ್ಕಾಗಿ ಕಲಿಕೋತ್ಸವ ಮನೆಯನ್ನು ನಿರ್ಮಿಸಲಾಗಿತ್ತು. ದೇಲಂಪಾಡಿ ಗ್ರಾಮ ಪಂಚಾಯತು ಸ್ಥಾಯಿ ಸಮಿತಿ ಸದಸ್ಯರು ಮತ್ತು ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ರತನ್ ಕುಮಾರ್, ಗ್ರಾಮ ಪಂಚಾಯತು ಸದಸ್ಯೆ ಉಷಾ ಕುಮಾರಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ತೋಟ್ಟಂ ಅಬ್ದುಲ್ಲ, ಉಪಾಧ್ಯಕ್ಷ ರಾಜನ್, ಮಾತೃ ಸಂಘದ ಅಧ್ಯಕ್ಷೆ ಪ್ರಿಯಾ ಬಾಲಕೃಷ್ಣನ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ದಿವಾಕರನ್ ಪಾಂಡಿಬಯಲು, ಪ್ರೊಮೋಟರ್ ನಾರಾಯಣಿ ಮೊದಲಾದವರು ಕಾರ್ಯಕ್ರಮದ ವ್ಯವಸ್ಥೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದರು.
ನಿವೃತ್ತ ಮುಖ್ಯೋಪಾಧ್ಯಾಯ ಗಂಗಾಧರನ್, ವೇಣುಗೋಪಾಲನ್, ವನ ಸಂರಕ್ಷಣ ಸಮಿತಿ ಅಧ್ಯಕ್ಷ ರಮೇಶನ್ ಚೀನಪ್ಪಾಡಿ, ರಕ್ಷಕ ಶಿಕ್ಷಕ ಸಂಘದ ಮಾಜಿ ಅಧ್ಯಕ್ಷ ಶಶಿಧರನ್ ಪಾಂಡಿ ಮತ್ತು ಇತರ ಅನೇಕ ಊರ ಪ್ರಮುಖರು ಭಾಗವಹಿಸಿದರು. ಮುಖ್ಯೋಪಾಧ್ಯಾಯ ನಾರಾಯಣ ದೇಲಂಪಾಡಿ ಸ್ವಾಗತಿಸಿ, ಪ್ರಾಂಶುಪಾಲ ರಾಜು ವಿ, ಹಿರಿಯ ಸಹಾಯಕಿ ರೇಖಾ ಸ್ಮಿತಾ, ನೌಕರ ಸಂಘದಕಾರ್ಯದರ್ಶಿ ರಂಜಿತ್ ಪೆರ್ಲ, ಸತ್ಯಶಂಕರ್, ಮುನೀರ್ ಯಾಕ್ಕಿಪರಂಬನ್, ವಿಜಯನ್ ಶಂಕರಂಪಾಡಿ ಮತ್ತು ಅಧ್ಯಾಪಕ ಅಧ್ಯಾಪಿಕೆಯರು ಮಕ್ಕಳನ್ನು ತರಬೇತುಗೊಳಿಸುವುದರ ಜೊತೆಗೆ ಎಲ್ಲಾ ಕ್ರಾಯಕ್ರಮಗಳಿಗೂ ಕ್ರಿಯಾತ್ಮಕ ನೇತೃತ್ವವನ್ನು ನೀಡಿದರು. ಪಾಂಡಿಯ ಶೈಕ್ಷಣಿಕ ಚರಿತ್ರೆಯಲ್ಲಿಯೇ ಅತ್ಯದ್ಭುತ ಶೈಕ್ಷಣಿಕ ಕಾರ್ಯಕ್ರಮವಾಗಿ ಈ ಸಾಲಿನ ಕಲಿಕೋತ್ಸವವು ದಾಖಲಾಯಿತು.

