ವೀರ ಯೋಧರಿಗೆ ನಮನ
0
ಫೆಬ್ರವರಿ 16, 2019
ಬದಿಯಡ್ಕ: ಉಗ್ರರ ಧಾಳಿಗೆ ತುತ್ತಾಗಿ ವೀರಮರಣವನ್ನಪ್ಪಿದ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಬಿಜೆಪಿ ಬದಿಯಡ್ಕ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ಬದಿಯಡ್ಕ ಪೇಟೆಯಲ್ಲಿ ಶುಕ್ರವಾರ ಸಂಜೆ ಮೌನ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯ ಬಳಿಕ ಬಸ್ ನಿಲ್ದಾಣ ಸಮೀಪ ನಡೆದ ಶ್ರದ್ಧಾಂಜಲಿ ಸಭೆಯನ್ನುದ್ದೇಶಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಕಾಲೇಜು ವಿದ್ಯಾರ್ಥಿ ಪ್ರಮುಖ್ ರಾಜೇಶ್ ಪದ್ಮಾರ್ ಮಾತನಾಡಿ, ಕಳೆದ 70 ವರ್ಷಗಳಿಂದ ಸತತವಾಗಿ ಮತೀಯ ತೀವ್ರವಾದಿಗಳು ನಡೆಸಿಕೊಂಡು ಬರುವ ಉಗ್ರವಾದವನ್ನು ಹತ್ತಿಕ್ಕುವಲ್ಲಿ ಕೇಂದ್ರ ಸರಕಾರವು ಸತತವಾಗಿ ಪ್ರಯತ್ನಿಸುತ್ತಿದೆ. ಚುನಾವಣೆ ಸಮೀಪಿಸುತ್ತಿರುವಂತೆ ಸರಕಾರವನ್ನು ಅಲ್ಲೋಲಕಲ್ಲೋಲಗೊಳಿಸುವ ಪ್ರಯತ್ನದ ಅಂಗವಾಗಿ ಪಾಕ್ ಪ್ರಚೋದಿತ ಉಗ್ರವಾದಿ ಸಂಘಟನೆಯಾದಂತಹ ಜೈಷೆ ಮುಹಮ್ಮದ್ ಪ್ರಾಯೋಜಿತ ಬಾಂಬರ್ ದಾಳಿಯನ್ನು ಸಮಸ್ತ ಭಾರತೀಯರು ಒಕ್ಕೊರಲಿನಿಂದ ಖಂಡಿಸುವಂತಾಗಿದೆ. ಈ ಘಟನೆಯಲ್ಲಿ ಪ್ರಾಣವನ್ನು ಕಳೆದುಕೊಂಡ ನಮ್ಮ ಹೆಮ್ಮೆಯ ಸೇನಾನಿಗಳಿಗೆ ಶ್ರದ್ಧಾಂಜಲಿಯನ್ನು ಸಮರ್ಪಿಸಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ನೇತಾರರಾದ ಬಾಲಕೃಷ್ಣ ಶೆಟ್ಟಿ ಕಡಾರು, ವಿಶ್ವನಾಥ ಪ್ರಭು ಕರಿಂಬಿಲ, ಅವಿನಾಶ್ ರೈ, ನ್ಯಾಯವಾದಿ ಗಣೇಶ್, ಕರಿಂಬಿಲ ಲಕ್ಷ್ಮಣ ಪ್ರಭು, ಉದನೇಶ್ವರ, ವಿಜಯಸಾಯಿ, ಶರತ್ ಶೆಟ್ಟಿ ಹಾಗೂ ನೂರಾರು ಕಾರ್ಯಕರ್ತರು, ನಾಗರಿಕರು ಪಾಲ್ಗೊಂಡಿದ್ದರು.

