ಮತ ಜಾಗೃತಿ ವಾಹನಕ್ಕೆ ಅರ್ಥಪೂರ್ಣ ಚಾಲನೆ-ಹಸುರು ನಿಶಾನೆ ತೋರಿದ 101 ವಯೋಮಾನದ ಶ್ಯಾಮ ಭಟ್
0
ಮಾರ್ಚ್ 25, 2019
ಕಾಸರಗೋಡು: ಮಂಜೇಶ್ವರ ತಾಲೂಕಿನ ಕುಂಬಳೆ ಸಮೀಪದ ಶಾಂತಿಪಳ್ಳ ನಾರಾಯಣಮಂಗಲ ನಿವಾಸಿ ಶ್ಯಾಮ ಭಟ್ ಅವರಿಗೆ ಈಗ ವಯಸ್ಸು ಭರ್ತಿ 101. ಈಗಲೂ ಮತದಾನ ನಡೆಸಲು ಅವರು ದೈಹಿಕವಾಗಿ, ಮಾನಸಿಕವಾಗಿ ಸೈ ಎನಿಸಿದ್ದಾರೆ.
ಪೌರೋಹಿತ್ಯ ಮತ್ತು ಕೃಷಿ ಅವರ ಬದುಕಿನ ಪ್ರಧಾನ ಭೂಮಿಕೆಗಳು. ಕಾಸರಗೋಡು ಜಿಲ್ಲಾ ಮಟ್ಟದ ಸ್ವೀಪ್(ಎಸ್.ವಿ.ಇ.ಇ.ಪಿ.) ಯೋಜನೆಯ ಅಂಗವಾಗಿ ನಡೆಯುತ್ತಿರುವ ಮತದಾನ ಜಾಗೃತಿ ವಾಹನ ಪರ್ಯಟನೆಗೆ ಅವರು ಹಸುರು ನಿಶಾನೆ ತೋರುವ ಮೂಲಕ ಮತದಾನ ಜಾಗೃತಿ ಚಟುವಟಿಕೆಗಳಿಗೆ ಅರ್ಥಪೂರ್ಣತೆ ಬಂದಿದೆ. ವಾಹನದಲ್ಲಿ ಇರಿಸಲಾದ ಮತಯಂತ್ರ ಮತ್ತು ವಿವಿಪಾಟ್ ಚಟುವಟಿಕೆಗಳ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ ಅವರು ನೂತನ ಸೌಲಭ್ಯಗಳನ್ನು ಅರ್ಥಮಾಡಿಕೊಂಡಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯ ಮತದಾನಕ್ಕೆ ಅವರು ಸಿದ್ಧರಾಗಿದ್ದಾರೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ವಿ.ಪಿ.ಅಬ್ದುಲ್ ರಹಮಾನ್, ಮಂಜೇಶ್ವರ ತಹಸೀಲ್ದಾರ್ ಜೋನ್ ವರ್ಗೀಸ್, ಚುನಾವಣೆ ವಿಭಾಗ ಕಿರಿಯ ವರಿಷ್ಠಾಧಿಕಾರಿ ಎಸ್.ಗೋವಿಂದನ್ ಮೊದಲಾದವರು ಉಪಸ್ಥಿತರಿದ್ದರು.

