ಕುಂಬಳೆ: ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆಯ ಎಡನಾಡು ಗ್ರಾಮದಲ್ಲಿರುವ ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನವು ಆಸ್ತಿಕರ ಶ್ರದ್ಧಾಕೇಂದ್ರ. ಕುಂಬಳೆ - ಬದಿಯಡ್ಕ ರಸ್ತೆಯಲ್ಲಿರುವ ಸೂರಂಬೈಲಿನಿಂದ ಎಡಭಾಗಕ್ಕೆ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಶ್ರೀಕ್ಷೇತ್ರವು ಅಡಿಕೆ, ತೆಂಗು ತೋಟ, ಗುಡ್ಡ, ಗದ್ದೆ ಬಯಲುಗಳಿಂದ ಆವೃತವಾಗಿದೆ. ಗ್ರಾಮೀಣ ಪ್ರದೇಶದ ಹಸಿರಿನ ಹಿನ್ನೆಲೆಯಲ್ಲಿ ಕಂಗೊಳಿಸುವ ಚಿನ್ಮಯಮೂರ್ತಿ ಗೋಪಾಲಕೃಷ್ಣ ದೇವರ ಮತ್ತು ಉಳ್ಳಾಕ್ಲು, ಧೂಮಾವತಿ, ರಕ್ತೇಶ್ವರಿ ದೈವಸಾನ್ನಿಧ್ಯಗಳ ನವೀಕರಣ ಪುನಃಪ್ರತಿಷ್ಟಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಶ್ರೀಕ್ಷೇತ್ರವು ಭರದಿಂದ ಸಜ್ಜುಗೊಳ್ಳುತ್ತಿದೆ. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರ ಮಠ ಇವರ ದಿವ್ಯಾನುಗ್ರಹ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಶಡ್ರಂಪಾಡಿ ಶ್ರೀಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಈ ಕಾರ್ಯಕ್ರಮಗಳು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 2019 ಎಪ್ರಿಲ್ 2ರಿಂದ ಎಪ್ರಿಲ್ 10 ರ ತನಕ ಜರಗಲಿದೆ.
ಸ್ಥಳದ ನಿವಾಸಿಯಾಗಿದ್ದ ಶ್ರೀ ಶಡ್ರಂಪಾಡಿತ್ತಾಯರಿಂದ ಸುಮಾರು 500 ವರ್ಷಗಳ ಹಿಂದೆ ಸ್ಥಾಪಿತವಾದ ಈ ದೇವಾಲಯವು ಸೀಮೆಯ ಪುರಾತನ ದೇವಸ್ಥಾನಗಳಲ್ಲೊಂದು. ಸಂತಾನ ಗೋಪಾಲಕೃಷ್ಣನೆಂದು ಪ್ರಸಿದ್ಧಿ ಪಡೆದ ಶ್ರೀ ದೇವರ ನಿತ್ಯ ಪೂಜೆಯು ಯಥಾವತ್ತಾಗಿ ನಡೆದು ಬರುತ್ತಿತ್ತು. ಆದರೆ ಲಭ್ಯ ಮಾಹಿತಿಗಳ ಪ್ರಕಾರ, ಅನೇಕ ಕಾರಣಗಳಿಂದಾಗಿ 1969ರ ನಂತರ ಇಲ್ಲಿನ ಪೂಜಾ ಕಾರ್ಯಕ್ರಮಗಳು ನಿಂತುಹೋದವು. 27.01.1979 ರಂದು ದೈವಜ್ಞರು ನಡೆಸಿದ ಪ್ರಶ್ನೆಚಿಂತನೆಯಲ್ಲಿ ಕಂಡುಬಂದಂತೆ ನಿರ್ಜೀವವಾಗಿದ್ದ ದೇವಾಲಯಕ್ಕೆ ಚೈತನ್ಯ ತುಂಬುವ ಕಾರ್ಯಕ್ರಮಗಳು 1982 ರ ಮೇ 20 ರಂದು ಜರಗಿದ್ದವು. 16.01.1983 ರಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳು ಶ್ರೀಕ್ಷೇತ್ರವನ್ನು ಸಂದರ್ಶಿಸಿ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗಾಗಿ ಸುವರ್ಣ ಮಂತ್ರಾಕ್ಷತೆಯನ್ನು ನೀಡಿ ಹರಸಿದ್ದರು.
ಕಾರ್ತಿಕ ಮಾಸಾದ್ಯಂತ ವಿಶೇಷ ಕಾರ್ತಿಕ ಪೂಜೆ, ಪ್ರತಿ ಶ್ರವಣ ನಕ್ಷತ್ರದಂದು ಬಲಿವಾಡು ಕೂಟ, ಕೃಷ್ಣಾಷ್ಟಮಿ, ಅಕ್ಷಯ ತದಿಗೆ, ನವಾನ್ನ, ದುರ್ಗಾಪೂಜೆ, ವಿಷು ಮೊದಲಾದ ವಿಶೇಷ ದಿನಗಳ ಆಚರಣೆ, ಎಡನಾಡು ಗ್ರಾಮದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ನಾಟಕ ಸಂಘದ ಸದಸ್ಯರಿಂದ ಪ್ರತಿ ಶನಿವಾರ ರಾತ್ರಿ ಯಕ್ಷಗಾನ ಕೂಟ, ನಾಟಕ ಸಂಘದ ವಾರ್ಷಿಕೋತ್ಸವ ಇತ್ಯಾದಿಗಳಲ್ಲಿ ಕೆಲವು ಕಾರ್ಯಕ್ರಮಗಳು ಕಾಲಾನಂತರ ನಿಂತುಹೋದವು. ಈ ಸಂದರ್ಭದಲ್ಲಿ, ನಿವೃತ್ತ ಮುಖ್ಯೋಪಾಧ್ಯಾಯ ಎಚ್.ವಿಷ್ಣು ಭಟ್ ಅಧ್ಯಕ್ಷರಾಗಿದ್ದ ದೇವಸ್ಥಾನದ ಸೇವಾ ಸಮಿತಿಯು ಅವರ ನಿಧನಾನಂತರ ಮರುರೂಪೀಕರಣಕ್ಕೆ ಒಳಗಾಗಬೇಕಿತ್ತು. ಅದಕ್ಕಾಗಿ ಸಭೆ ಸೇರಿದ ಆಸ್ತಿಕ ಬಾಂಧವರು ಸಮಾಜ ಸಂಘಟನೆಯ ಕಾರ್ಯಗಳಲ್ಲಿ ನಿರತರಾಗಿದ್ದ ಎಚ್. ಶಂಕರನಾರಾಯಣ ಭಟ್ಟರನ್ನು ಅಧ್ಯಕ್ಷರನ್ನಾಗಿ ಮತ್ತು ಎಚ್.ಶಿವರಾಮ ಭಟ್ ಕಾರಿಂಜ-ಹಳೆಮನೆ ಇವರನ್ನು ಕಾರ್ಯದರ್ಶಿಯನ್ನಾಗಿ ಆಯ್ಕೆಮಾಡಿದರು. ಅಸ್ತಿತ್ವದಲ್ಲಿದ್ದ ದೇವಾಲಯದ ಗರ್ಭಗುಡಿ, ನಮಸ್ಕಾರ ಮಂಟಪ ಮತ್ತು ಮೂಡುಗೋಪುರಗಳು ಶಿಥಿಲವಾಗುತ್ತಿದ್ದುದರಿಂದ ಊರಪರವೂರ ಆಸ್ತಿಕ ಬಂಧುಗಳು ಕ್ಷೇತ್ರದ ನವೀಕರಣದ ಸಂಕಲ್ಪವನ್ನು ಕೈಗೊಂಡರು.
ದೇವಾಲಯದ ಕೇವಲ 18 ಸೆಂಟ್ಸ್ ಭೂಮಿಯು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ತಡೆಯಾಗಿದ್ದುದರಿಂದ ಸುತ್ತಮುತ್ತಲಿನ 3 ಎಕರೆ 41 ಸೆಂಟ್ಸ್ ಭೂಮಿಯನ್ನು ದಾನಿಗಳ ಸಹಕಾರದೊಂದಿಗೆ ವಿವಿಧ ಹಂತಗಳಲ್ಲಿ ಖರೀದಿಸಲಾಯಿತು. ಆ ಪ್ರಯುಕ್ತ 2006 ದಶಂಬರ 25ರಂದು ಜ್ಯೋತಿಷಿಗಳಾದ ವಳಕ್ಕುಂಜ ವೆಂಕಟ್ರಮಣ ಭಟ್ ಮತ್ತು ಪೊಯಿನಾಚಿ ರಾಜಶೇಖರನ್ ಇವರು ನಡೆಸಿದ ಸ್ವರ್ಣಪ್ರಶ್ನೆ ಮತ್ತು ಚಿಂತನೆಗಳ ಮೂಲಕ ದೇವಾಲಯದ ಜೀರ್ಣೋದ್ಧಾರದ ಕಾರ್ಯಗಳನ್ನು ಆರಂಭಿಸಲಾಯಿತು.

18.02.2007 ರಂದು ದೇವಾಲಯದಲ್ಲಿ ಸಭೆ ಸೇರಿದ ಆಸ್ತಿಕ ಬಾಂಧವರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಮರ್ಥರಾದ ಕೆ.ಎಚ್.ಶ್ರೀಕೃಷ್ಣಪ್ರಸಾದರನ್ನು ಅಧ್ಯಕ್ಷರನ್ನಾಗಿಯೂ ಎಚ್.ಶಂಕರನಾರಾಯಣ ಭಟ್ಟರನ್ನು ಕಾರ್ಯದರ್ಶಿಗಳನ್ನಾಗಿಯೂ ವಿವಿಧ ವಿಭಾಗದ ಸದಸ್ಯರನ್ನು ಪದಾಧಿಕಾರಿಗಳನ್ನಾಗಿಯೂ ಆಯ್ಕೆಮಾಡಿ ಜೀರ್ಣೋದ್ಧಾರ ಸಮಿತಿಯನ್ನು ರೂಪೀಕರಿಸಿದರು. ಹೀಗೆ ನೂತನ ಸಮಿತಿಯು ತ್ವರಿತವಾಗಿ ಅಭಿವೃದ್ಧಿಕಾರ್ಯಗಳನ್ನು ಕೈಗೊಳ್ಳಲು ಅಗತ್ಯವಾದ ರೂಪುರೇಷೆಗಳನ್ನು ಸಿದ್ಧಪಡಿಸಿದುದರಿಂದ 2009ರ ನವೆಂಬರ್ 2ರ ಶುಭಮುಹೂರ್ತದಂದು ಮರಕಡಿಯುವ ಮೂಲಕ ನವೀಕರಣದ ಕಾರ್ಯಗಳಿಗೆ ಚಾಲನೆ ನೀಡಲಾಯಿತು.
04.09.2011 ರಂದು ಜರಗಿದ ಜೀರ್ಣೋದ್ಧಾರ ಸಮಿತಿ ಸಭೆಯಲ್ಲಿ ದೇವಾಲಯದ ರಚನೆಗಳನ್ನು ಕೆಡಹಿ ಶಿಲಾಮಯವಾದ ಗರ್ಭಗುಡಿ ಹಾಗೂ ನಮಸ್ಕಾರ ಮಂಟಪಗಳನ್ನು ತಾಮ್ರ ಹೊದೆಸಿದ ಛಾವಣಿಯೊಂದಿಗೆ ಸಂಪೂರ್ಣವಾಗಿ ಪುನರ್ ರಚನೆ ಮಾಡಲು ತೀರ್ಮಾನಿಸಲಾಯಿತು. ಈ ನಿಟ್ಟಿನಲ್ಲಿ ವಾಸ್ತುಶಿಲ್ಪಿ ಮಹೇಶ ಮುನಿಯಂಗಳ ಇವರ ಸಲಹೆಗಳನ್ನು ಪಡೆದುಕೊಂಡು ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ 24.02.2012ರಂದು ಅನುಜ್ಞಾ ಕಲಶವನ್ನು ನೆರವೇರಿಸಲಾಯಿತು.
2012 ದಶಂಬರ 5 ರಿಂದ 7 ರ ತನಕ ಕ್ಷೇತ್ರದಲ್ಲಿ ಜರಗಿದ ಷಡಾಧಾರನ್ಯಾಸ ಕಾರ್ಯಕ್ರಮಗಳ ಮೂಲಕ ನಿಧಿಕುಂಭ ಸ್ಥಾಪನೆ, ಇಷ್ಟಿಗಾನ್ಯಾಸ, ಗರ್ಭನ್ಯಾಸ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಯಿತು. ಹಳೆಯ ಬಾವಿಯನ್ನು ಮುಚ್ಚಿ ವಾಸ್ತುಪ್ರಕಾರವಾದ ನೂತನ ಬಾವಿಯನ್ನು ರಚಿಸಿ ನೀರಿನ ಸೆಲೆಯನ್ನು ಕಣ್ತುಂಬಿಕೊಳ್ಳಲು ಸಾಧ್ಯವಾದದ್ದು ಮುಸ್ಸಂಜೆಯ ಹೊತ್ತಿನಲ್ಲಿ ನಿತ್ಯ ಶ್ರಮದಾನಕ್ಕೆ ಆಗಮಿಸುತ್ತಿದ್ದ ಭಕ್ತರಿಗೆ ಸ್ಫೂರ್ತಿಯ ಸೆಲೆಯಂತಾಯಿತು. ಅಂದ ಹಾಗೆ ದೇವಸ್ಥಾನದ ಜೀರ್ಣೋದ್ಧಾರದ ಬಹುಪಾಲು ಕಾರ್ಯಗಳು ಭಕ್ತಬಾಂಧವರ ಶ್ರಮದಾನದ ಮೂಲಕವೇ ಜರಗಿದೆ.
ಸಂತಾನಾಪೇಕ್ಷೆ, ವಿವಾಹಾಪೇಕ್ಷೆ, ವ್ಯವಹಾರ ವೃದ್ಧಿ, ಆರೋಗ್ಯ ಭಾಗ್ಯ ಎಂಬಿವುಗಳಿಗೆ ದೇವಸ್ಥಾನದಲ್ಲಿ ವಿಶೇಷ ಸೇವೆಗಳನ್ನು ಸಲ್ಲಿಸಿ ಪ್ರಾರ್ಥನೆ ಮಾಡುವ ಮೂಲಕ ಶ್ರೇಯಸ್ಸನ್ನು ಗಳಿಸಿದ ಅನೇಕ ಮಂದಿಯ ಉದಾಹರಣೆಗಳು ಕಣ್ಣಮುಂದಿವೆ. ಸ್ವರ್ಣಪ್ರಶ್ನೆ ನಡೆಸಿದ ಜ್ಯೋತಿಷಿಗಳೂ ಈ ವಿಚಾರಕ್ಕೆ ವಿಶೇಷ ಮಹತ್ವ ನೀಡಿದ್ದು ತುಲಾಭಾರ ಸಹಿತ ವಿವಿಧ ಸೇವೆಗಳನ್ನು ಆಸ್ತಿಕರು ಅಗತ್ಯ ಸಂದರ್ಭಗಳಲ್ಲಿ ಸಂಕಲ್ಪ ಮಾಡಿಕೊಳ್ಳಲು ಸೂಚಿಸಿದ್ದಾರೆ. ದೈವಜ್ಞರ ಮತ್ತು ಕ್ಷೇತ್ರ ತಂತ್ರಿಗಳ ಸಲಹೆಯಂತೆ ಮರು ಆರಂಭ ಮಾಡಲಾಗಿದ್ದ ಸಾರ್ವಜನಿಕ ಶ್ರೀ ಸತ್ಯನಾರಾಯಣಪೂಜೆಯು ಇದೀಗ ಹದಿನೆಂಟು ವರ್ಷಗಳನ್ನು ಪೂರೈಸಿದೆ. ದೇವಸ್ಥಾನದ ನೂತನ ಸಮಿತಿಯು ಕರ್ಕಟಕ ಮಾಸದಲ್ಲಿ ದುರ್ಗಾಪೂಜೆಯನ್ನೂ ಆರಂಭಿಸಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯ ಆಚರಣೆಗಾಗಿ ಅವಿನಾಶ ಕಾರಂತ, ಪಾಡಿ ಇವರ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಸಮಿತಿಯನ್ನು ರೂಪೀಕರಿಸಲಾಗಿದ್ದು ಮರು ಆರಂಭವಾದ ಈ ಕಾರ್ಯಕ್ರಮವು ಒಂಬತ್ತು ವರ್ಷಗಳನ್ನು ಪೂರೈಸಿದ್ದು ಮುಂದಿನ ಬಾರಿ ದಶಮಾನೋತ್ಸವ ಜರಗಲಿದೆ. ವೃಷಭ ಮಾಸದ ಆರನೇ ದಿನದಂದು ಶ್ರೀಕ್ಷೇತ್ರದಲ್ಲಿ ವಾರ್ಷಿಕೋತ್ಸವವು ಜರಗುತ್ತಿದೆ. ಕಾರ್ತಿಕ ಮಾಸದ ಎಲ್ಲ ದಿನಗಳಲ್ಲೂ ರಾತ್ರಿ ಜರಗುವ ವಿಶೇಷ ಕಾರ್ತಿಕ ಪೂಜೆಯು ದೇವಾಲಯದ ಚೈತನ್ಯ ವೃದ್ಧಿಗೆ ಸಹಕಾರಿಯಾಗುತ್ತಿದೆ ಎನ್ನುವುದು ಪ್ರಶ್ನೆಚಿಂತನೆಗಳಲ್ಲೂ ತಿಳಿದುಬಂದಿದೆ.
ಪ್ರಸ್ತುತ ನೂತನ ಗರ್ಭಗುಡಿ, ನಮಸ್ಕಾರಮಂಟಪ, ಸುತ್ತುಗೋಪುರ, ಬಾವಿ, ದೈವಸ್ಥಾನಗಳ ರಚನೆ ಪೂರ್ತಿಯಾಗಿದ್ದು ಬಲಿಕಲ್ಲುಗಳ ಸ್ಥಾಪನೆ, ಉತ್ಸವಮೂರ್ತಿಯ ನಿರ್ಮಾಣ, ರಾಜಾಂಗಣಕ್ಕೆ ಕಾಂಕ್ರೀಟ್ ಹಾಸುವ ಕಾಮಗಾರಿಗಳು ನಡೆಯುತ್ತಿವೆ. ಪುತ್ತಿಗೆ ಗ್ರಾಮಪಂಚಾಯತು ಶ್ರೀಕ್ಷೇತ್ರದ ತನಕದ ರಸ್ತೆಗೆ ಡಾಮರು ಹಾಸಿ ಕೊಟ್ಟಿರುವುದು ಕ್ಷೇತ್ರ ಸಂದರ್ಶಕರಿಗೆ ಅನುಕೂಲಕರವಾಗಿದೆ.
ಎಪ್ರಿಲ್ 2 ರಂದು ಬೆಳಗ್ಗೆ ಗಣಪತಿ ಹವನ, ಉಗ್ರಾಣ ಭರಣ, ದೀಪಸ್ಥಾಪನೆಗಳೊಂದಿಗೆ ಬ್ರಹ್ಮಕಲಶೋತ್ಸವದ ಕಾರ್ಯಗಳು ಆರಂಭವಾಗಲಿದ್ದು ಹಸಿರುವಾಣಿ ಹೊರೆಕಾಣಿಕೆ, ಶೋಭಾಯಾತ್ರೆಗಳು ಉತ್ಸವದ ರಂಗೇರಿಸಲಿವೆ. ವಿವಿಧ ಸಂಘ ಸಂಸ್ಥೆಗಳು, ವ್ಯಕ್ತಿಗಳಿಂದ ಈ ದಿನಗಳಲ್ಲಿ ಭಜನೆ, ಯಕ್ಷಗಾನ ಬಯಲಾಟ, ತಾಳಮದ್ದಳೆ, ಯಕ್ಷಗಾನ ವೈಭವ, ಭಕ್ತಿಗಾನ ಸುಧಾ, ಹರಿಕಥೆ, ಸಂಗೀತ ಕಛೇರಿ, ಕೊಳಲು, ವೀಣಾ ವಾದನ, ಭರತ ನಾಟ್ಯ, ಜನಪದ ನೃತ್ಯ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.
ಎಪ್ರಿಲ್ 7 ರಂದು ಬೆಳಗ್ಗೆ ಶ್ರೀದೇವರ ಪುನಃಪ್ರತಿಷ್ಟೆಯು ಜರಗಲಿದ್ದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರ ಮಠ ಇವರ ದಿವ್ಯ ಉಪಸ್ಥಿತಿಯಲ್ಲಿ ಎಪ್ರಿಲ್ 10 ರಂದು ಬ್ರಹ್ಮಕಲಶಾಭಿಷೇಕವು ಜರಗಲಿದೆ. ಬ್ರಹ್ಮಕಲಶಾಭಿಷೇಕದ ನಂತರ ರಾತ್ರಿ ಮಹಾಪೂಜೆ, ಶ್ರೀಭೂತಬಲಿ ಉತ್ಸವಗಳು ಜರಗಲಿದ್ದು ಮಂತ್ರಾಕ್ಷತೆಯೊಂದಿಗೆ ಬ್ರಹ್ಮಕಲಶೋತ್ಸವ ಸಂಪನ್ನಗೊಳ್ಳಲಿದೆ.