ಅನಾರೋಗ್ಯ ಪೀಡಿತ ಯಕ್ಷಗಾನ ಚೌಕಿ ಕಲಾವಿದನಿಗೆ ಸವಾಕ್ ನಿಂದ ನೆರವು
0
ಮಾರ್ಚ್ 27, 2019
ಉಪ್ಪಳ: ಸುಮಾರು 35 ವರ್ಷಗಳಿಂದ ಯಕ್ಷಗಾನ ವೇಷಭೂಷಣಗಳ ತಯಾರಿಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದು, ಪ್ರಸ್ತುತ ಅನಾರೋಗ್ಯದಿಂದ ಬಳಲುತ್ತಿರುವ ಬಾಯಾರು ಸಜಂಕಿಲ ನಿವಾಸಿ ನಾರಾಯಣ ಅವರಿಗೆ ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್ ಆಫ್ ಕೇರಳ (ಸವಾಕ್) ನೇತೃತ್ವದಲ್ಲಿ ಇತ್ತೀಚೆಗೆ ನೆರವು ಹಸ್ತಾಂತರಿಸಲಾಯಿತು.
ಯಕ್ಷಗಾನ ವೇಷಭೂಷಣ ಪರಿಕರಗಳ ತಯಾರಿಯಯಲ್ಲಿ ಸಿದ್ದಹಸ್ತರಾಗಿದ್ದ ನಾರಾಯಣ ಅವರು ಕಟೀಲು ಶ್ರೀಕ್ಷೇತ್ರದ ಮೇಳದಲ್ಲಿ ದಶಕಗಳಿಂದ ಸೇವೆ ಸಲ್ಲಿಸಿದ್ದರು. ಆ ಬಳಿಕ ತೆಂಕುತಿಟ್ಟಿನ ಸುಪ್ರಸಿದ್ದ ವೇಷಭೂಷಣ ಪೂರೈಕೆದಾರ ಸಂಘಟನೆಯಾದ ಪೈವಳಿಕೆಯ ಗಣೇಶಕಲಾವೃಂದ ಸಹಿತ ಸ್ಥಳೀಯ ಮೇಳಗಳಿಗೆ ಪ್ರಸಾದನ ಕಲಾವಿದರಾಗಿ ದುಡಿಯುತ್ತಿದ್ದರು. ಆದರೆ ಇತ್ತೀಚೆಗೆ ಅವರನ್ನು ಹಠಾತ್ ಬಾಧಿಸಿರುವ ಅನಾರೋಗ್ಯದಿಂದ ಅವರು ಸಂಕಷ್ಟಕ್ಕೊಳಗಾಗಿದ್ದು, ಕುಟುಂಬ ಸವಾಲಿನಿಂದ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಸವಾಕ್ ನೆರವಿನ ಹಸ್ತ ನೀಡಿದೆ.
ಸವಾಕ್ ಜಿಲ್ಲಾಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು, ಕಾರ್ಯದರ್ಶಿ ಸನ್ನಿ ಅಗಸ್ಟಿನ್, ಕೋಶಾಧಿಕಾರಿ ಚಂದ್ರಹಾಸ ಕಯ್ಯಾರು, ಸವಾಕ್ ಮಂಜೇಶ್ವರ ಬ್ಲಾಕ್ ಅಧ್ಯಕ್ಷ ಪ್ರಮೋದ್ ಪಣಿಕ್ಕರ್, ಕಾಸರಗೋಡು ಬ್ಲಾಕ್ ಅಧ್ಯಕ್ಷ ದಯಾ ಪಿಲಿಕುಂಜೆ, ಉಪಾಧ್ಯಕ್ಷ ಶಂಕರ ಸ್ವಾಮಿಕೃಪಾ, ಸವಾಕ್ ಮಹಿಳಾ ಘಟಕದ ಜಿಲ್ಲಾ ಕಾರ್ಯದರ್ಶಿ ಜಯಶ್ರೀ ಸುವರ್ಣ ಮೊದಲಾದವರು ಇತ್ತೀಚೆಗೆ ನಾರಾಯಣ ಅವರ ಸಜಂಕಿಲದಲ್ಲಿರುವ ಮನೆಯಲ್ಲಿ ಭೇಟಿ ನೀಡಿ ಪ್ರಾಥಮಿಕ ಚಿಕಿತ್ಸಾ ನೆರವಿಗಾಗಿ ಐದು ಸಾವಿರ ರೂ. ಹಸ್ತಾಂತರಿಸಿದರು. ಅನಾರೋಗ್ಯದಿಂದ ಬಳಲುತ್ತಿರುವ ಕಲಾವಿದರಾದ ನಾರಾಯಣ ಅವರಿಗೆ ಸಾರ್ವಜನಿಕರು, ಕಲಾಪೋಷಕರು ನೆರವು ನೀಡಲು ಮುಂದೆ ಬರಬೇಕು ಎಂದು ಎಂ.ಉಮೇಶ್ ಸಾಲ್ಯಾನ್ ವಿನಂತಿಸಿದ್ದಾರೆ.

