ಇಂದು ವಿಶ್ವ ಕ್ಷಯರೋಗ ನಿವಾರಣೆ ದಿನಾಚರಣೆ -ಚಿನ್ನದ ಜಿಂಕೆ ಪಿ.ಟಿ.ಉಷಾ ಇಂದು ಜಿಲ್ಲೆಗೆ
0
ಮಾರ್ಚ್ 22, 2019
ಕಾಸರಗೋಡು: ಕ್ಷಯರೋಗವನ್ನು ಬೇರು ಸಹಿತ ಕಿತ್ತು ಒಗೆಯುವ ಕಾಲಸನ್ನಿಹಿತವಾಗಿದೆ ಎಂಬ ಸಂದೇಶದೊಂದಿಗೆ ಈ ಬಾರಿಯ ವಿಶ್ವ ಕ್ಷಯರೋಗ ದಿನಾಚರಣೆ ಸಂಬಂಧ ಮಾ.23ರಂದು ಜಿಲ್ಲಾ ಮಟ್ಟದ ಕಾರ್ಯಕ್ರಮಗಳು ನಡೆಯಲಿವೆ.
ಸರ್ ರೋಬರ್ಟ್ ಅವರು 1882ರಲ್ಲಿ ಕ್ಷಯರೋಗಾಣು ಪತ್ತೆ ಮಾಡಿರುವ 137ನೇ ವಾರ್ಷಿಕೋತ್ಸವ ಅಂಗವಾಗಿಯೂ ಇದು ಜರಗುತ್ತಿರುವುದು ಮಹತ್ವವನ್ನು ಹೆಚ್ಚಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಹೆಳಿದರು.
ಜಿಲ್ಲಾಧಿಕಾರಿ ಕಚೇರಿಯ ಕಿರು ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಶ್ವದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕ್ಷಯರೋಗ ಕಂಡುಬರುವ ದೇಶಗಳಲ್ಲಿ ಭಾರತವೂ ಒಂದಾಗಿದ್ದು, ಶೇ. 40 ಮಂದಿ ಭಾರತೀಯರು ಕ್ಷಯರೋಗ ಬಾಧಿತರಾಗಿದ್ದಾರೆ. ಇತರ ಅಂಟುರೋಗಗಳಿಂದ ಸಂಭವಿಸುವ ಮರಣ ಪ್ರಕರಣಗಳಿಗಿಂತ ಕ್ಷಯರೋಗದಿಂದ ಮೃತರಾಗುವವರ ಸಂಖ್ಯೆ ನಮ್ಮ ದೇಶದಲ್ಲಿ ಅಧಿಕವಾಗಿರುವುದು ದುರಂತ ಎಂದು ಅವರು ತಿಳಿಸಿದರು.
ಕ್ಷಯರೋಗ ನಿಯಂತ್ರಣದಲ್ಲಿ ಪ್ರಧಾನ ಸಮಸ್ಯೆಯೆಂದರೆ ಕೆಮ್ಮು ಚಿಕಿತ್ಸೆ ಮೂಲಕ ರೋಗ ಲಕ್ಷಣವೆಂದು ಬಹುತೇಕ ಮಂದಿ ಗಮನಿಸದೇ ಇರುವುದು. ಕೆಲವು ಸ್ವಯಂ ಚಿಕಿತ್ಸೆ ನಡೆಸಿ, ರೋಗ ಉಲ್ಭಣಾವಸ್ಥೆಗೆ ತಲಪಿದಾಗ ವೈದ್ಯರ ಮೊರೆಹೋಗುತ್ತಾರೆ. ಕೆಲವರು ಚಿಕಿತ್ಸೆ ಆರಂಭಿಸಿದರೂ ನಂತರ ಅರ್ಧದಲ್ಲೇ ಚಿಕಿತ್ಸೆ ಮೊಟಕುಗೊಳಿಸುವ ಪರಿಣಾಮ ರೋಗ ಚಿಕಿತ್ಸೆ ಫಲಕಾರಿಯಾಗದಷ್ಟು ಗಂಭಿರ ಸ್ಥಿತಿಗೆ ತಲಪಲು ಕಾರಣರಾಗುವುದೂ ಸಮಸ್ಯೆಯಾಗುತ್ತಿದೆ ಎಂದವರು ಕಳಕಳಿ ವ್ಯಕ್ತಪಡಿಸಿದರು.
ಕ್ಷಯರೋಗಿಗಳಿಗೆ ಚಿಕಿತ್ಸೆಯ ಅವಧಿಯಲ್ಲಿ ಪೌಷ್ಠಿಕ ಆಹಾರಕ್ಕಾಗಿ ಕೇಂದ್ರ ಸರಕಾರ 500 ರೂ., ರಾಜ್ಯ ಸರಕಾರ ಒಂದು ಸಾವಿರ ರೂ. ಆರ್ಥಿಕ ಸಹಾಯ ನೀಡುತ್ತಿದೆ ಎಂದವರು ಹೇಳಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಆಮಿನಾ ಅವರು ಮಾತನಾಡಿ ಈ ಗಂಭೀರ ಹಿನ್ನೆಲೆಯಲ್ಲಿ ದೇಶದಾದ್ಯಂತ ನಡೆಯುತ್ತಿರುವ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಜಿಲ್ಲೆಯಲ್ಲೂ ಚುರುಕಿನ ಕ್ರಮಗಳು ನಡೆಯುತ್ತಿವೆ. ಜನರಲ್ ಆಸ್ಪತ್ರೆಯ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ ಅತ್ಯುತ್ತಮ ತಪಾಸಣೆ ಕೆಂದ್ರವಾಗಿದ್ದು, ಪೂರ್ಣ ರೂಪದ ಉಚಿತ ಚಿಕಿತ್ಸಾ ಸೌಲಭ್ಯ ನೀಡಲಾಗುತ್ತಿದೆ. ಹಿಂದಿನ ಕ್ರಮಗಳಿಗಿಂತ ಭಿನ್ನವಾಗಿ ತ್ವರಿತಗತಿಯಲ್ಲಿ ಕ್ಷಯರೋಗ ಪತ್ತೆಮಾಡುವ ಸಿ.ಬಿ.ಎನ್.ಎ.ಎ.ಟಿ. ಸೌಲಭ್ಯ ಇಲ್ಲಿದೆ. ಕೆಲವು ಖಾಸಗಿ ಚಿಕಿತ್ಸೆ ಕೇಂದ್ರಗಳಲ್ಲಿ 6 ಸಾವಿರ ರೂ.ಗೂ ಅಧಿಕ ವೆಚ್ಚದಲ್ಲಿ ಈ ಚಿಕಿತ್ಸೆ ನಡೆಸಲಾಗುತ್ತಿದೆ. 16 ಅಂಗೀಕೃತ ಕಫ ತಪಾಸಣೆ ಕೇಂದ್ರಗಳು ಇಲ್ಲಿ ಚಟುವಟಿಕೆ ನಡೆಸುತ್ತಿವೆ ಎಂದರು.
ನೇರವಾದ ನಿರೀಕ್ಷಣೆಗಳೊಂದಿಗೆ ಕ್ಷಯರೋಗದ ಚಿಕಿತ್ಸೆ ನಡೆಸಿ ಗುಣಮುಖರಾಗಿಸುವುದು ಆರೋಗ್ಯ ಇಲಾಖೆಯ ನೀತಿ(ಡಾಟ್ಸ್) ಸರಕಾರಿ ಆಸ್ಪತ್ರೆಗಳಲ್ಲದೆ, ಖಾಸಗಿ ಆಸ್ಪತ್ರೆಗಳು, ಕುಟುಂಬ ಕಲ್ಯಾಣ ಕೇಂದ್ರಗಳು, ಅಂಗನವಾಡಿಗಳು ಮೊದಲಾದೆಡೆ ಡಾಟ್ಸ್ ಚಿಕಿತ್ಸೆ ಲಭ್ಯವಿದೆ ಎಂದವರು ತಿಳಿಸಿದರು. ಇಲ್ಲಿನ ಸದಸ್ಯರಗೆ ಕ್ಷಯರೋಗ ಚಿಕಿತ್ಸೆ ಸಂಬಂಧ ತರಬೇತಿ ನೀಡಲಾಗಿದೆ. ಐ.ಎಂ.ಎ.ಯ ಸಹಕಾರದೊಂದಿಗೆ `ಎಸ್ಟಿ.ಪಿ.ಎಸ್.' ಯೋಜನೆ ಖಾಸಗಿ ಆಸ್ಪತ್ರೆಗಳಲ್ಲಿ ಆರಂಭಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನ ಯಜ್ಞ ಕಾರ್ಯಕ್ರಮ 2018 ಫೆಬ್ರವರಿಯಲ್ಲಿ ಆರಂಭವಾಗಿದೆ. 2020ರ ವೇಳೆಗೆ ಕ್ಷಯರೋಗಿಗಳ ಸಂಖ್ಯೆ ಗಣನೀಯವಾಗಿ ಕಡಿತಗೊಳ್ಳಲಿದೆ ಎಂಬುದು ಈ ಯೋಜನೆಯ ಉದ್ದೇಶ, ಇದರ ಮೊದಲ ಹಂತದ ಸಮೀಕ್ಷೆ ಪೂರ್ಣಗೊಂಡಿದೆ ಎಂದರು.
ಕ್ಷಯರೋಗ ಒಂದು ಸಾಮಾಜಿಕ ಸಮಸ್ಯೆಯೂ ಆಗಿರುವ ಹಿನ್ನೆಲೆಯಲ್ಲಿ 2 ವಾರಕ್ಕಿಂತ ಅಧಿಕ ಅವಧಿಯಲ್ಲಿ ಕೆಮ್ಮು ಕಾಡುತ್ತಿದ್ದರೆ ಅಂಥವರು ಸಮೀಪದ ಆರೋಗ್ಯ ಕೇಂದ್ರಕ್ಕೆ ಹಾಜರಾಗಿ, ತಪಾಸಣೆ ನಡೆಸಿ, ಡಾಟ್ಸ್ ಚಿಕಿತ್ಸೆಗೆ ಒಳಗಾಗಬೇಕು. ಚಿಕಿತ್ಸೆ ಅರ್ಧದಲ್ಲೇ ಮೊಟಕುಗೊಳಿಸುವವರನ್ನು ಪತ್ತೆಮಾಡಿ ಮರಳಿ ಚಿಕಿತ್ಸೆ ಮುಂದುವರಿಸುವಂತೆ ಯತ್ನಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹಾಗಾದಾಗ ಮಾತ್ರ ಸಮಾಜದಿಂದ ಈ ರೋಗವನ್ನು ಆಮೂಲಾಗ್ರವಾಗಿ ಕಿತ್ತೊಗೆಯಲು ಸಾಧ್ಯ ಎಂದು ಅವರು ನುಡಿದರು.
ಕ್ಷಯರೋಗ ಬಾಧೆಯಿದ್ದರೆ ಅದನ್ನು ಮುಚ್ಚಿಡಲು ಸಾಧ್ಯವಿಲ್ಲ. ತನಗೆ ಈ ರೋಗ ಬಾರದು ಎಂದು ತಿಳಿಯಲೂ ಸಾಧ್ಯವಾಗದು. ವಾಯು ಸೇವನೆ ನಡೆಸುವ ಯಾರಿಗೂ ಈ ರೋಗದ ಸೋಂಕು ತಗುಲುವ ಸಾಧ್ಯಗಳಿರುತ್ತವೆ. ಜಗತ್ತು ಚಿಕ್ಕದಾಗುತ್ತಿರುವ ಇಂದಿನ ಕಾಲಮಾನದಲ್ಲಿ ಕ್ಷಯರೋಗಾಣುಗಳು ಪ್ರಬಲವಾಗಿ ಕಾಡುತ್ತಿವೆ. ಕ್ಷಯರೋಗ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಎಲ್ಲರ ಸಹಕಾರ ಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಡಳಿತೆ ಮತ್ತು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮಾ.23ರಂದು ಜಿಲ್ಲಾ ಮಟ್ಟದ ಕಾರ್ಯಕ್ರಮ : ವಿಶ್ವ ಕ್ಷಯರೋಗ ನಿಯಂತ್ರಣ ಆಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮ ಮಾ.23ರಂದು ಬೆಳಿಗ್ಗೆ 11 ಗಂಟೆಗೆ ಜನರಲ್ ಆಸ್ಪತ್ರೆ ಆವರಣದಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸುವರು. ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಪಿ.ದಿನೇಶ್ ಕುಮಾರ್ ಅಧ್ಯಕ್ಷತೆ ವಹಿಸುವರು. ಒಲಿಂಪಿಕ್ಸ್ ತಾರೆ, ಭಾರತದ ಚಿನ್ನದ ಜಿಂಕೆ ಡಾ.ಪಿ.ಟಿ.ಉಷಾ ಮುಖ್ಯ ಅತಿಥಿಯಾಗಿರುವರು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9.30ಕ್ಕೆ ನೂತನ ಬಸ್ ನಿಲ್ದಾಣ ಬಳಿಯಿಂದ ಜನರಲ್ ಆಸ್ಪತ್ರೆ ವರೆಗೆ ಕ್ಷಯರೋಗ ವಿರುದ್ಧ ಜನಜಾಗೃತಿ ರ್ಯಾಲಿ ನಡೆಯಲಿದೆ. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್ ಹಸುರು ನಿಶಾನೆ ತೋರುವರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉಪಸ್ಥಿತರಿರುವರು.

