ಕುಂಬಳೆಯಲ್ಲಿ ವಿಶ್ವ ಅರಣ್ಯ ದಿನಾರಣೆ ನೆರಳು ಗಿಡಗಳ ಪೋಷಣೆ : ಅಟೋ ಚಾಲಕರಿಗೆ ಅಭಿನಂದನೆ
0
ಮಾರ್ಚ್ 22, 2019
ಕುಂಬಳೆ : ನೆರಳಿಗಾಗಿ ಗಿಡಗಳನ್ನು ನೆಟ್ಟು,ನಿರಂತರ ಅವುಗಳಿಗೆ ನೀರೆರೆದು ಪೋಷಿಸುವ ಮಾದರಿ ಅಟೋ ಚಾಲಕರ ತಂಡವನ್ನು ವಿದ್ಯಾರ್ಥಿ ಸಮೂಹ ಗುರುವಾರ ವಿಶ್ವ ಅರಣ್ಯ ದಿನಾಚರಣೆಯ ಅಂಗವಾಗಿ ಅಭಿನಂದಿಸಿತು. ವಿಶ್ವ ಅರಣ್ಯ ದಿನಾಚರಣೆಯ ಅಂಗವಾಗಿ ನಡೆದ ಸಮಾರಂಭವೊಂದರಲ್ಲಿ ಕುಂಬಳೆ ಪೇಟೆಯ ಅಟೋ ಚಾಲಕರ ಪರಿಸರ ಪ್ರೇಮವನ್ನು ಕೊಂಡಾಡಿದ ಮಕ್ಕಳು ಅವರಿಗೆ ಉಡುಗೊರೆಗಳನ್ನು ನೀಡಿ ಗೌರವಿಸಿತು.
ಕಳೆದೆರಡು ವರುಷಗಳಿಂದ ತಮ್ಮ ಅಟೋ ನಿಲ್ದಾಣವನ್ನು ಹಸಿರೀಕರಣ ಗೊಳಿಸುವ ನಿಟ್ಟಿನಲ್ಲಿ ಎರಡು ಬಾದಾಮಿ ಗಿಡಗಳನ್ನು ನೆಟ್ಟು ಸಂರಕ್ಷಿಸುವುದು ಮಕ್ಕಳ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಅಟೋ ಚಾಲಕರಿಗೆ ಮಾತ್ರವಲ್ಲ ನಾಗರಿಕರಿಗೂ ನೆರಳಿನಾಸರೆಯಾಗುವಂತೆ ಕುಂಬಳೆ ಪೇಟೆಯ ಹೃದಯ ಭಾಗದಲ್ಲಿ ಬಾದಾಮಿ ಮರಗಳು ಬೆಳೆಯುತ್ತಿವೆ.ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಅಟೋ ಚಾಲಕರ ಈ ಪ್ರಕೃತಿ ಪ್ರೇಮವನ್ನು ಗುರುತಿಸಿದರಲ್ಲದೆ ಇದಕ್ಕಾಗಿ ನೇತೃತ್ವ ನೀಡಿದ ಅಟೋ ಚಾಲಕರಾದ ರಾಜಣ್ಣ ಅವರನ್ನು ವಿಷೇಶವಾಗಿ ಗೌರವಿಸಿತು.
ಕುಂಬಳೆಯ ಅಟೋ ಚಾಲಕರು ಮರವೊಂದನ್ನು ನೆಟ್ಟು ಬೆಳೆಸುವುದು ಹತ್ತು ಮಕ್ಕಳನ್ನು ಸಾಕಿ ಸಲಹುವುದಕ್ಕೆ ಸಮಾನ ಎಂಬುದನ್ನು ಸಾಧಿಸಿ ತೋರಿಸಿದ್ದಾರೆಂದು ಹೋಲಿ ಫ್ಯಾಮಿಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿ.ಹಿಲ್ಡಾ ಕ್ರಾಸ್ತ ಈ ಸಂದರ್ಭದಲ್ಲಿ ನುಡಿದರು. ಮರ ಗಿಡಗಳ ರಕ್ಷಣೆಯಿಂದ ನಮ್ಮನ್ನು ನಾವೇ ರಕ್ಷಿಸಿದಂತಾಗುವುದು ಎಂದು ಗೈಡ್ ನಾಯಕಿ ಕಾರ್ಮೆಲಿ ತಿಳಿಸಿದರು.ಪುಟಾಣಿ ಪಕ್ಷಿ ನಿರೀಕ್ಷಕ ಪ್ರಣವ್ ಸ್ವಾಗತಿಸಿ, ಅಧ್ಯಾಪಕ ರಾಜು ಕಿದೂರು ವಂದಿಸಿದರು.

