ಪೇಟೆಯಲ್ಲಿ ಕ್ಷೀಣಿಸುತ್ತಿರುವ ಅಂಗಡಿ ಹಕ್ಕಿಗಳು!
ಕುಂಬಳೆ: ವಿಶ್ವ ಗುಬ್ಬಚ್ಚಿ ದಿನಾಚರಣೆಯ ಅಂಗವಾಗಿ ಕುಂಬಳೆ ಪೇಟೆಯಲ್ಲಿ ಗುಬ್ಬಚ್ಚಿ ಗಣತಿ ಗುರುವಾರ ನಡೆಯಿತು. ತರಕಾರಿ,ಹಣ್ಣು ಹಾಗೂ ಜೀನಸು ಅಂಗಡಿಗಳನ್ನು ಕೇಂದ್ರೀಕರಿಸಿ ಸಂಜೆ ನಾಲ್ಕ ರಿಂದ ಐದು ಗಂಟೆಯವರೆಗೆ ನಡೆದ ಸರ್ವೇಯಲ್ಲಿ ಒಟ್ಟು 65 ಗುಬ್ಬಚ್ಚಿಗಳನ್ನು ಗುರುತಿಸಲಾಯಿತು. ಇವುಗಳಲ್ಲಿ 27 ಗಂಡು ಹಾಗೂ 38 ಹೆಣ್ಣು ಗುಬ್ಬಚ್ಚಿಗಳಿವೆ. ಮರಿಗಳನ್ನೂ,ಗೂಡುಗಳನ್ನೂ ವೀಕ್ಷಿಸಲಾಗಿದ್ದು ಕಳೆದ ವರುಷಕ್ಕಿಂತ ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಕಾಸರಗೋಡು ಪಕ್ಷಿ ಪ್ರೇಮಿ ತಂಡದ ಸದಸ್ಯರಾದ ಅಧ್ಯಾಪಕ ರಾಜು ಕಿದೂರು ಅಭಿಪ್ರಾಯ ಪಟ್ಟಿರು.
ಇದೇ ಸಂದರ್ಭದಲ್ಲಿ ಅಂಗಡಿಗಳಲ್ಲಿ ಗುಬ್ಬಚ್ಚಿ ಗೂಡುಗಳನ್ನು ಸ್ಥಾಪಿಸಲಾಯಿತು. ಗಣತಿಗೆ ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ನೇತೃತ್ವ ನೀಡಿದರು. ಮಲಬಾರ್ ಅವಾರೈನೆಸ್ ಆಂಡ್ ರೆಸ್ಕ್ಯೂ ಸೆಂಟರ್ ಫಾರ್ ವೈಲ್ಡ್ ಲೈಫ್ ಹಾಗೂ ಕಾಸೆಗೋಡು ಪಕ್ಷಿ ಪ್ರೇಮಿ ತಂಡ ಸಹಕರಿಸಿತು.

ಸರ್ವೇ ನಡೆಸಿದ ತಂಡವು ನಶಿಸುತ್ತಿರುವ ಗುಬ್ಬಚ್ಚಿ ಸಂತತಿಗೆ ಕಾರಣಗಳನ್ನು ಗುರುತಿಸಿದೆ. ತರಕಾರಿ ಹಾಗೂ ಹಣ್ಣು ಹಂಪಲುಗಳಿಗೆ ರಾಸಾಯನಿಕ ಸಿಂಪಡಣೆ, ನವೀನ ಮಾದರಿಯ ಕಟ್ಟಡಗಳಿಂದ ಗೂಡು ಕಟ್ಟಲು ಸ್ಥಳಾವಕಾಶ ಕೊರತೆ, ಧವಸ ಧಾನ್ಯಗಳು ಪ್ಯಾಕೆಟ್ ರೂಪ ತಾಳಿರುವುದರಿಂದ ಆಹಾರದ ಸಮಸ್ಯೆ, ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳಿಂದಾಗಿ ಮಲಿನಗೊಂಡಿರುವ ಪೇಟೆ-ಪರಿಸರ ದ ಬಗ್ಗೆ ಸರ್ವೇ ತಂಡ ಕಳವಳ ವ್ಯಕ್ತಪಡಿಸಿದೆ.
ಹಕ್ಕಿಗಳ ಗಣತಿಗೆ ತೆರಳಿದ ಮಕ್ಕಳು ನಾಶದತ್ತ ಸಾಗುವ ಮನುಷ್ಯ ಸ್ನೇಹಿ ಗುಬ್ಬಚ್ಚಿಗಳಿಗಾಗಿ ಪ್ರಚಾರವಿಲ್ಲದೆ ತಮ್ಮ ಅಳಿಲ ಸೇವೆ ಮಾಡುವ ಇಬ್ಬರು ವ್ಯಾಪಾರಸ್ತರನ್ನು ಅಭಿನಂದಿಸಿದರು. ಮೀನು ಮಾರ್ಕೆಟ್ ರಸ್ತೆಯಲ್ಲಿ ತರಕಾರಿ ವ್ಯಾಪಾರ ಮಾಡುವ ಶಿವಪ್ರಸಾದ್ ರೈಯವರು ದೊಡ್ಡ ಗಾತ್ರದ ಕುಂಬಳಕಾಯಿಯನ್ನು ಕೊರೆದು ಹಕ್ಕಿಗೂಡು ತಯಾರಿಸಿ ತಮ್ಮ ಅಂಗಡಿಯ ಬದಿಯಲ್ಲಿ ಇಟ್ಟಿರುವುದನ್ನು ನೋಡಿ ಮಕ್ಕಳು ಅಚ್ಚರಿಗೊಂಡರು.
ಸ್ಥಳಾವಕಾಶ ಕಡಿಮೆ ಇರುವ ಅಂಗಡಿಗಳ ಒಳಗೆ ಗುಬ್ಬಚ್ಚಿಗಳು ಆಹಾರಕ್ಕಾಗಿ ಬರುತ್ತವೆ. ಆಗ ಅವುಗಳು ಫ್ಯಾನಿನ ರೆಕ್ಕೆ ತಾಗಿ ಸಾಯುತ್ತವೆ. ಇದನ್ನು ತಪ್ಪಿಸಲು ನಾನು ಇನ್ನೂ ಸೀಲಿಂಗ್ ಫ್ಯಾನ್ ಬಳಸಲಿಲ್ಲ ಎಂದ ತರಕಾರಿ ವ್ಯಾಪಾರಿ ಅಬ್ದುಲ್ ರಹಿಮಾನ್ ಅವರ ಪಕ್ಷಿ ಪ್ರೇಮವನ್ನು ಮಕ್ಕಳು ಕೊಂಡಾಡಿ ಅವರನ್ನು ಅಭಿನಂದಿಸಿದರು.