ಬದಿಯಡ್ಕ: ಕಾಸರಗೋಡು ಜಿಲ್ಲೆಯಲ್ಲಿ ಬಿಸಿಲಿನ ತಾಪ ದಿನೇ ದಿನೇ ಏರುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ವರ್ಷಕಳೆದಂತೆ ಸುಡುಬಿಸಿಲು ಹೆಚ್ಚಾಗುತ್ತಿದೆ. ಇದು ಜನಜೀವನವನ್ನು ಬಾಧಿಸುತ್ತಿದ್ದು, ವಿವಿಧ ಖಾಯಿಲೆಗಳಿಗೂ ಕಾರಣವಾಗುತ್ತಿದೆ. ಬದಿಯಡ್ಕ ಪೇಟೆಯಲ್ಲಿ ಪ್ರತೀ ಶನಿವಾರ ನಡೆಯುತ್ತಿರುವ ವಾರದ ಸಂತೆಯ ಮೇಲೂ ಬೇಸಿಗೆಯ ಸುಡುಬಿಸಿಲು ಪ್ರಭಾವ ಬೀರಿದೆ. ಬಿಸಲಾಘಾತಕ್ಕೆ ಹೆದರಿ ಮನೆಯಿಂದ ಜನರು ಹೊರಗಿಳಿಯುತ್ತಿಲ್ಲ. ಇದರಿಂದಾಗಿ ಸಂತೆಯು ಜನಜಂಗುಳಿಯಿಲ್ಲದೆ ಬಿಕೋ ಎನ್ನುತ್ತಿದೆ. ಪರಿಣಾಮ ವ್ಯಾಪಾರ ವಹಿವಾಟು ಕುಂಠಿತಗೊಂಡಿದೆ. ಕೃಷಿಕರು ಬೆಳೆದ ಕೃಷಿ ಉತ್ಪನ್ನಗಳು ಗ್ರಾಹಕರ ಕೈಸೇರದೆ ನಷ್ಟಗೊಳ್ಳುತ್ತಿದೆ.
ವಾರದ ಸಂತೆಯಲ್ಲಿ ಸಾವಿರಾರು ರೂಪಾಯಿಗಳ ಆದಾಯ ಲಭಿಸುತ್ತಿದ್ದು, ಕಳೆದ ಎರಡು ಮೂರು ವಾರಗಳಿಂದ ಬಿಸಿಲಿನ ತಾಪಮಾನಕ್ಕೆ ಹೆದರಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿರುವುದರಿಂದ ಆದಾಯದಲ್ಲಿ ಭಾರೀ ಇಳಿಮುಖವಾಗಿದೆ. ಬದನೆಕಾಯಿ, ಹಾಗಲಕಾಯಿ, ಬಾಳೆಕಾಯಿ, ಬಸಳೆ, ಸೊಪ್ಪು ತರಕಾರಿಗಳು, ಹಣ್ಣುಹಂಪಲು, ಮೀನು, ಕೋಳಿ ಮಾರಾಟದಲ್ಲಿ ಭಾರೀ ಕಡಿತಗೊಂಡಿದೆ. ಕತ್ತಿ ಸಹಿತ ಇನ್ನಿತರ ಆಯುಧಗಳ, ಮಕ್ಕಳ ಆಟದ ಸಾಮಾಗ್ರಿಗಳು, ಸ್ಟೀಲ್ ಸಹಿತ ವಿವಿಧ ವಿಭಾಗಕ್ಕೆ ಸೇರಿದ ಪಾತ್ರೆ ಸಾಮಾಗ್ರಿಗಳು, ಬಟ್ಟೆ ಬರೆಗಳು ಸಂತೆಯಲ್ಲಿ ಸದಾ ಲಭ್ಯವಿರುತ್ತದೆ. ಹೆಚ್ಚಿನ ಜನರು ಪೇಟೆಗೆ ಬರಲು ಶನಿವಾರವನ್ನೇ ಆಯ್ಕೆಮಾಡಿಕೊಳ್ಳುತ್ತಾರೆ. ಯಾಕೆಂದರೆ ಆ ದಿನ ಸಂತೆಯಿಂದಲೇ ಅದೆಷ್ಟೋ ಸಾಮಾಗ್ರಿಗಳನ್ನು ಖರೀದಿಸುವವರಿದ್ದಾರೆ. ಸಂತೆ ಆರಂಭವಾದ ಮೇಲೆ ಬದಿಯಡ್ಕ ಪೇಟೆಯ ಇತರ ವ್ಯಾಪಾರಿಗಳು ಇತರ ದಿನಗಳಲ್ಲಿ ಹೆಚ್ಚಿನ ವ್ಯಾಪಾರವಿಲ್ಲದೆ ಕುಳಿತುಕೊಳ್ಳುವಂತಾಗಿದೆ.
.........
ಕಳೆದೊಂದು ತಿಂಗಳಿನಿಂದ ಉಷ್ಣಾಂಶ ಏರಿಕೆಯಾಗುತ್ತಿದ್ದು, ಸಂತೆ ಸಹಿತ ಸಾರ್ವಜನಿಕ ಸ್ಥಳಗಳಿಗೆ ತೆರಳಲು ಭಾರೀ ಸಮಸ್ಯೆಯಾಗುತ್ತಿದೆ. ಅದರಲ್ಲೂ ಪುಟ್ಟಮಕ್ಕಳ ಜತೆ ಮಾರುಕಟ್ಟೆಗೆ ತೆರಳಿ ವ್ಯಾಪಾರ ವಹಿವಾಟು ಮತ್ತು ಇನ್ನಿತರ ಸಾಮಾಗ್ರಿಗಳನ್ನು ಪಡೆಯುವುದೆಂದರೆ ತೀರಾ ಸಂಕಷ್ಟದ ಪರಿಸ್ಥಿತಿ. ಆದ್ದರಿಂದ ಪ್ರತೀವಾರ ಸಂತೆಗೆ ಹೋಗುತ್ತಿದ್ದ ನಾನು ಕಳೆದ ಮೂರು ನಾಲ್ಕು ವಾರದಿಂದ ಹಿಂದೇಟು ಹಾಕುತ್ತಿದ್ದೇನೆ.
- ಶಶಿಧರ ಬದಿಯಡ್ಕ
..........
ಕಳೆದ ಕೆಲವು ವಾರಗಳ ಹಿಂದೆ ಇದ್ದ ವ್ಯಾಪಾರ ಇದೀಗ ಇಲ್ಲವಾಗಿದೆ. ಬಿಸಿಲಿಗೆ ಹೆದರಿ ಜನರು ವಾರದ ಸಂತೆಗೆ ಕಡಿಮೆ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಆದ್ದರಿಂದ ತರಕಾರಿ ಹಣ್ಣುಹಂಪಲು ಸಹಿತ ಇನ್ನಿತರ ವಸ್ತುಗಳ ಕೊಳ್ಳುವಿಕೆ ಮೇಲೆ ಭಾರೀ ಪೆಟ್ಟು ಬಿದ್ದಿದೆ. ಆದರೂ ಸಾಯಂಕಾಲದ ಆಸುಪಾಸಿನಲ್ಲಿ ಒಂದಷ್ಟು ಮಂದಿ ಗ್ರಾಹಕರು ಸಂತೆಗೆ ಬರುವುದರಿಂದ ಹೆಚ್ಚಿನ ನಷ್ಟವುಂಟಾಗುತ್ತಿಲ್ಲ.
- ತರಕಾರಿ ವ್ಯಾಪಾರಿ
........................
ಕಳೆದ ಕೆಲವು ವರ್ಷಗಳಿಂದ ಬದಿಯಡ್ಕ ಪೇಟೆಯಲ್ಲಿ ಶನಿವಾರದಂದು ಸಂತೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ವಿವಿಧೆಡೆಗಳಿಂದ ವ್ಯಾಪಾರಿಗಳು ತರಕಾರಿ, ಹಣ್ಣುಗಳು ಹಾಗೂ ಇನ್ನಿತರ ದಿನಸಿ ಸಾಮಾಗ್ರಿಗಳೊಂದಿಗೆ ಮಾರಾಟಕ್ಕಾಗಿ ಬರುತ್ತಿದ್ದರು. ತಮ್ಮ ಹೊಟ್ಟೆಪಾಡಿಗಾಗಿ ಆಗಮಿಸಿದ ವ್ಯಾಪಾರಿಗಳಿಗೆ ಬಿಸಿಲು ಶಾಕ್ ನೀಡಿದೆ. ಶನಿವಾರ ದಿನ ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಬದಿಯಡ್ಕ ಪೇಟೆಯಲ್ಲಿ ನಿನ್ನೆ ಮಾತ್ರ ಜನಸಂಚಾರ ವಿರಳವಾಗಿತ್ತು. ಬಿಸಿಲಾಘಾತದಿಂದ ಪಾರಾಗಲು ವ್ಯಾಪಾರಿಗಳು ಕೊಡೆ, ಟರ್ಪಾಲುಗಳನ್ನು ಬಳಸಿದ್ದರು. ವಾಹನ ದಟ್ಟಣೆಯಿಂದ ಪೇಟೆಯಲ್ಲಿ ಅತ್ತಿಂದಿತ್ತ ಓಡಾಡಲೂ ಕಷ್ಟಪಡಬೇಕಾಗಿತ್ತು.
ಫೆಬ್ರವರಿ ಮೊದಲ ವಾರದಿಂದ ಕೇರಳದಲ್ಲಿ ಬಿಸಿಲ ಬೇಗೆ ಹೆಚ್ಚುತ್ತಾ ಬಂದಿದೆ. ಕಳೆದ ಒಂದು ವಾರದಲ್ಲಿ 3 ಡಿಗ್ರಿ ಸೆಲ್ಶಿಯಸ್‍ನಷ್ಟು ಹೆಚ್ಚಳವಾಗಿದೆ. ಮಾರ್ಚ್ 17, 18 ಎಂಬೀ ದಿನಗಳಲ್ಲಿ ರಾಜ್ಯದ ವಿವಿಧೆಡೆಗಳಲ್ಲಿ ಬಿಸಿಲಶಾಖ 2ರಿಂದ ಮೂರು ಡಿಗ್ರಿಯಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಏಪ್ರಿಲ್, ಮೇ ತಿಂಗಳುಗಳಲ್ಲಿ 1 ಡಿಗ್ರಿ ಸೆಲ್ಶ್ಯಸ್‍ನಿಂದ 5 ಡಿಗ್ರಿ ತನಕ ಶಾಖ ಹೆಚ್ಚಾಗಲಿದೆ. ಪ್ರಸ್ತುತ ಇರುವಂತಹ ಬಿಸಿಲ ತಾಪಮಾನ ಮೇ ತಿಂಗಳ ತನಕ ಮುಂದುವರಿಯಲಿದೆ. ರಾಜ್ಯದಲ್ಲಿ ಅತೀ ಹೆಚ್ಚು ಉಷ್ಣತೆಯನ್ನನುಭವಿಸುತ್ತಿರುವುದು ಕೋಝಿಕ್ಕೋಡು, ಆಲಪ್ಪುಳ, ತಿರುವನಂತಪುರಂ, ಕೋಟ್ಟಯಂ ಜಿಲ್ಲೆಗಳಲ್ಲಾಗಿವೆ. ಬಿಸಿಲು ಹೆಚ್ಚಾದ ಹಿನ್ನೆಲೆಯಲ್ಲಿ ಹೊರಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಹೆಚ್ಚಿನ ಜಾಗ್ರತೆವಹಿಸಬೇಕೆಂದು ಲೇಬರ್ ಕಮಿಶನ್ ಆದೇಶವನ್ನು ಹೊರಡಿಸಿದೆ. ಮಾರ್ಚ್ ಕೊನೆಯಲ್ಲಿ ಮಳೆ ಬಂದರೆ ಮಾತ್ರವೇ ಬಿಸಿಲ ಶಾಖ ಸ್ಪಲ್ಪಮಟ್ಟಿಗೆ ಕಡಿಮೆಯಾಗಬಹುದಷ್ಟೆ.

ವಿವಿದೆಡೆಗಳಲ್ಲಿ ಹೊಳೆ, ತೋಡುಗಳು ನೀರಿಲ್ಲದೆ ಬತ್ತಿ ಹೋಗಿದ್ದು, ಕೃಷಿಕರು ತಮ್ಮ ಕೃಷಿಭೂಮಿಯನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಕೆಲವೊಂದು ಕಡೆ ಈಗಾಗಲೇ ಕೊಳವೆಬಾವಿಯನ್ನು ತೋಡಲು ಆರಂಭಿಸಲಾಗಿದೆ.
ಸಂತೆ ನಿರ್ವಹಣೆಗೆ ಬೇಕು ಸುಸಜ್ಜಿತ ವ್ಯವಸ್ಥೆ:
ಬದಿಯಡ್ಕದ ಶನಿವಾರ ಸಂಜೆ ಜಿಲ್ಲೆಯಲ್ಲೇ ಅತೀ ದೊಡ್ಡ ಸಂತೆಗಳಲ್ಲಿ ಒಂದೆನಿಸಿದ್ದು, ವಿವಿಧ ಊರುಗಳಿಂದ ರೈತರು ಉತ್ಪನ್ನಗಳ ವಿಕ್ರಯಕ್ಕೆ ಮತ್ತು ಖರೀದಿಗೆ ಇಲ್ಲಿಗೆ ಆಗಮಿಸುತ್ತಾರೆ. ಆದರೆ ಏರುತ್ತಿರುವ ಬಿಸಿಲಿನ ತಾಪಮಾನ ಮತ್ತು ವಾಹನ ದಟ್ಟಣೆಯ ಕಾರಣ ಸಮರ್ಪಕ ರೀತಿಯಲ್ಲಿ ಸಂತೆ ನಿರ್ವಹಿಸುವುದು ಸವಾಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುಸಜ್ಜಿತ ಮಾರುಕಟ್ಟೆ ಸಂಕೀರ್ಣವೊಂದು ಇಲ್ಲಿಗೆ ಅಗತ್ಯವಿದೆ ಎನ್ನುವುದು ದಶಕಗಳ ಬೇಡಿಕೆಯಾಗಿದೆ. ಬಿಸಿಲಿನ ತಾಪದಿಂದ ಪಾರಾಗಲು ಎತ್ತರದ ಮೇಲ್ಚಾವಣಿ, ಕುಡಿಯುವ ನೀರು, ವಾಹನ ನಿಲುಗೆಡೆ ವ್ಯವಸ್ಥೆ ಮೊದಲಾದ ಪ್ರಾಥಮಿಕ ಅಗತ್ಯಗಳನ್ನು ಸಂಬಂದಿಸಿದ ಗ್ರಾ.ಪಂ. ಒದಗಿಸಿಕೊಡಬೇಕಿದೆ.
..................................................
ವಾತಾವರಣದ ಉಷ್ಣಾಂಶ ಹೆಚ್ಚಾದ ಹಿನ್ನೆಲೆಯಲ್ಲಿ ವ್ಯಾಪಾರಿಯೋರ್ವ ಕಲ್ಲಂಗಡಿ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ತಂದರೂ ಜನರಿಲ್ಲದೆ ನಿರಾಸೆ ಅನುಭವಿಸಬೇಕಾಯಿತು. ಕಲ್ಲಂಗಡಿ ಹಣ್ಣನ್ನು ಸವಿಯಲು ಸೂರ್ಯನ ತಾಪಮಾನದಿಂದಾಗಿ ಜನರು ಹಿಂದೇಟು ಹಾಕಿದರು.
ಸಂತೆಯ ವ್ಯಾಪಾರಿ.
..........................................
ಮಾವಿನ ಮಿಡಿ :
ಈಗ ಎಲ್ಲಾ ಕಡೆ ಮಾವಿನ ಮಿಡಿಯದ್ದೇ ಕಾರುಬಾರು. ಶನಿವಾರ ಸಂತೆಯಲ್ಲೂ ಮಾವಿನಮಿಡಿ ವ್ಯಾಪಾರಿಗಳು ಆಗಮಿಸಿದ್ದರು. ಕಿಲೋವೊಂದರ 120 ರೂಪಾಯಿಯಿಂದ 150ರ ತನಕ ವಹಿವಾಟು ನಡೆದಿತ್ತು. ತಂದ ಮಾವಿನಮಿಡಿಗಳು ಖಾಲಿಯಾಗದಿರುವುದು ಕಂಡುಬಂತು.