HEALTH TIPS

ಮವ್ವಾರು ಶ್ರೀಕೃಷ್ಣ ಭಜನಾ ಮಂದಿರದ ಪ್ರತಿಷ್ಠಾ ದಿನ ಮಹೋತ್ಸವ ಸಂಪನ್ನ

ಬದಿಯಡ್ಕ : ಮವ್ವಾರು ಶ್ರೀಕೃಷ್ಣ ಭಜನ ಮಂದಿರದ ಪ್ರತಿಷ್ಠಾ ದಿನ ಮಹೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ಸಂಪನ್ನಗೊಂಡಿತು. ತಂತ್ರಿವರ್ಯ ವೇದಮೂರ್ತಿ ಡಾ. ಮಾಧವ ಉಪಾಧ್ಯಾಯ ಬಳ್ಳಪದವು ಇವರ ನೇತೃತ್ವದಲ್ಲಿ ದೀಪ ಪ್ರತಿಷ್ಠೆಯ ಬಳಿಕ ಗಣಪತಿ ಹೋಮ, ನಾಗತಂಬಿಲ ಮೊದಲಾದ ವೈದಿಕ ಕಾರ್ಯಕ್ರಮಗಳು ನಡೆಯಿತು. ಸೂರ್ಯೋದಯದಿಂದ ಸೂರ್ಯಸ್ತದ ವರೆಗೆ ನಡೆದ "ಹರಿನಾಮ ಸಂಕೀರ್ತನಾ" ಕಾರ್ಯಕ್ರಮದಲ್ಲಿ ಶ್ರೀ ಮಹಿಷಮರ್ದಿನೀ ಭಜನಾ ಸಂಘ ಗೋಸಾಡ, ಶ್ರೀ ಧರ್ಮಶಾಸ್ತಾ ಭಜನಾ ಸಂಘ ಕುರುಮುಜ್ಜಿಕಟ್ಟೆ, ಶ್ರೀ ಗೋಪಾಲಕೃಷ್ಣ ಭಜನಾ ಸಂಘ ಅಗಲ್ಪಾಡಿ, ಶ್ರೀ ವಿಶ್ವಕರ್ಮ ಭಜನಾ ಸಂಘ ಮವ್ವಾರು ಹಾಗೂ ಶ್ರೀಕೃಷ್ಣ ಭಜನಾ ಸಂಘ ಮವ್ವಾರು ಪಾಲ್ಗೊಂಡರು. ಮವ್ವಾರು ಶ್ರೀಕೃಷ್ಣ ಭಜನಾ ಸಂಘದ "ನೃತ್ಯ ಭಜನೆ"ಯು ವಿಶೇಷ ಮೆರುಗು ನೀಡಿತು. ಸಂಜೆ ನಡೆದ ಸಮಾರೋಪ ಸಭಾ ಕಾರ್ಯಕ್ರಮದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ರತ್ನಾಕರ ಮಲ್ಲಮೂಲೆ ಪ್ರಧಾನ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ ತನ್ನ ಬಾಲ್ಯದ ಮವ್ವಾರಿನ ಅನುಭವಗಳನ್ನು ಹಂಚಿಕೊಳ್ಳುತ್ತಾ 50 ವರ್ಷಗಳ ಹಿರಿಮೆ ಇರುವ ಮವ್ವಾರು ಶ್ರೀಕೃಷ್ಣ ಭಜನಾ ಮಂದಿರವು ಕೇವಲ ಮಂದಿರವಾಗಿರದೆ ಒಂದು ಪ್ರಸಿದ್ಧ ಸಾಂಸ್ಕøತಿಕ ಕೇಂದ್ರವಾಗಿದೆ ಎನ್ನುತ್ತಾ ತಾನು ಬಾಲ್ಯದಲ್ಲಿ ಅನುಭವಿಸಿರುವ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಾಗೂ ಅಂದಿನ ಹಿರಿಯರನ್ನು ಸ್ಮರಿಸಿಕೊಂಡರು. ಮವ್ವಾರಿನ ಪ್ರಸಿದ್ಧ ಷಡಾನನ ಯುವಕ ಸಂಘ ಮತ್ತು ಗ್ರಂಥಾಲಯದ ಖ್ಯಾತಿಯನ್ನೂ ತುಳುಕು ಹಾಕಿಕೊಳ್ಳುತ್ತಾ ಇಂದಿನ ಯುವಕರು ಈ ಸಂಸ್ಕøತಿಯನ್ನು ಸಂರಕ್ಷಿಸಬೇಕಾದ ರಾಯಬಾರಿಗಳು. ನಮ್ಮ ಹಿರಿಯರು ಸಮಾಜದ ಆರೋಗ್ಯಕ್ಕಾಗಿ ಹಲವು ಅಚರಣೆಗಳ ಮೂಲಕ ಸತ್‍ಸಂಪ್ರದಾಯಗಳನ್ನು ಜನರಿಗೆ ಪ್ರತ್ಯಕ್ಷ ಅನುಭವಗಳ ಮೂಲಕ ಮೂಡಿಸಿದರು. ಇದಕ್ಕಾಗಿ ನಮ್ಮ ಮಕ್ಕಳು ಜಾತ್ರೆ, ಪೂಜೆ, ಶ್ರಾದ್ಧ, ಮದುವೆ ಮೊದಲಾದ ಕಾರ್ಯಕ್ರಮಗಳಲ್ಲಿ ಅಗತ್ಯವಾಗಿ ಪಾಲ್ಗೊಳ್ಳಬೇಕು. ದೇವರ ಭಜನೆಯಿಂದ ಮನುಷ್ಯನ ಋಣಾತ್ಮಕ ಚಿಂತನೆಗಳಿಂದ ಮುಕ್ತಿಯನ್ನು ನೀಡುವುದಲ್ಲದೆ ಜೀವನೋನ್ಮುಖರನ್ನಾಗಿಸುತ್ತದೆ ಎಂದರು. ಕಾರಡ್ಕ ಬ್ಲಾಕ್ ಪಂಚಾಯತು ಸದಸ್ಯ ಸುಂದರ ಮವ್ವಾರು ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮವ್ವಾರು ಶ್ರೀಕೃಷ್ಣ ಭಜನಾ ಸಂಘದ ಸದಸ್ಯರನ್ನು ಶಾಲು ಹೊದಿಸಿ ಅಭಿನಂದಿಸಲಾಯಿತು. ಶ್ರೀ ಧರ್ಮಶಾಸ್ತಾ ಭಜನಾ ಮಂದಿರ ಕುರುಮುಜ್ಜಿಕಟ್ಟೆಯ ಪ್ರಮುಖ ಕೆ.ವಿ. ರಮೇಶ ಶರ್ಮಾ ಹಾಗೂ ಮವ್ವಾರು ಮಂದಿರದ ಪ್ರಧಾನ ಅರ್ಚಕ ಸೀತಾರಾಮ ಭಟ್ ಎಂ. ಇವರು ಶುಭಾಶಂಸನೆಗೈದರು. ಶ್ರೀ ಮಂದಿರದ ಕೋಶಾಧಿಕಾರಿ ಯನ್. ಪದ್ಮನಾಭ ಮಣಿಯಾಣಿ ಉಪಸ್ಥಿತರಿದ್ದರು. ಶ್ರೀ ಮಂದಿರದ ಅಧ್ಯಕ್ಷ ಯಂ. ಗಂಗಾಧರ ರೈ ಸ್ವಾಗತಿಸಿದರು. ಭಜನಾ ಮಂದಿರದ ಪುಟಾಣಿ ಸದಸ್ಯರು ಪ್ರಾರ್ಥನೆ ಹಾಡಿದರು. ಕಾರ್ಯದರ್ಶಿ ಜನಾರ್ಧನ ಸಿ.ಎಚ್. ವಂದಿಸಿದರು. ಚಾತುಕುಟ್ಟಿ ಮಾಸ್ತರ್ ಕಾರ್ಯಕ್ರಮ ನಿರೂಪಣೆ ಮಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries