HEALTH TIPS

ಧಾರ್ಮಿಕ ಶ್ರದ್ದಾ ಕೇಂದ್ರಗಳು ಬದುಕಿನ ಕೈದೀವಿಗೆ-ಒಡಿಯೂರು ಶ್ರೀಗಳು-ಜಮ್ಮದ ಮನೆ ಬ್ರಹ್ಮಕಲಶೋತ್ಸವ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅಭಿಮತ

ಮಂಜೇಶ್ವರ: ದಿವ್ಯ ದೃಷ್ಟಿಯಿಂದ ಭವ್ಯ ಸೃಷ್ಟಿ ಸಾಧ್ಯವಿದೆ. ಧರ್ಮ ಮಾರ್ಗದಲ್ಲಿ ನಡೆದಾಗ ದಿವ್ಯ ದೃಷ್ಟಿಯ ಒಲಿದು ಭಗವಂತನ ಸಾಕ್ಷಾತ್ಕಾರದ ಸೃಷ್ಟಿ ಸಾಧ್ಯವಾಗುತ್ತದೆ. ಭಕ್ತಿಯ ಶಕ್ತಿಯ ಪರಿಣಾಮ ಆನಂದದ ಸಾಕಾರತೆಯನ್ನು ಪಡೆಯಬಹುದು ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರು ದೇವಾನಂದ ಸ್ವಾಮೀಜಿ ಆಶೀರ್ವಚನದಲ್ಲಿ ತಿಳಿಸಿದರು. ಮಂಜೇಶ್ವರ ಹೊಸಬೆಟ್ಟಿನ ಶ್ರೀದುರ್ಗಾಪರಮೇಶ್ವರಿ ದೇವಾಲಯದ ಬಿಂಬ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಮಂಗಳವಾರ ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮಾಣಿಲ ಶ್ರೀಗಳ ಜೊತೆಗೂಡಿ ಉದ್ಘಾಟಿಸಿ ಅವರು ಮಾತನಾಡಿದರು. ಧಾರ್ಮಿಕ ಶ್ರದ್ದಾ ಕೇಂದ್ರಗಳು ಭೂಮಿಯ ಮೇಲಿನ ಬದುಕಿನ ಸುಧೀರ್ಘ ಯಾತ್ರೆಗಿರುವ ಕೈದೀವಿಗೆಯಾಗಿದೆ. ಬದುಕಿನ ಜಟಿಲ ಸವಾಲುಗಳ ಕತ್ತಲೆಯಲ್ಲಿ ಬೆಳಕು ನೀಡುವ ಅಗೋಚರ ಶಕ್ತಿಯಾಗಿರುವ ದೈವೀಶಕ್ತಿಗೆ ಮಣಿಯದಿದ್ದಲ್ಲಿ ವ್ಯಾಪಕ ನೋವುಗಳು ಜರ್ಜರಿತಗೊಳಿಸುತ್ತದೆ ಎಂದು ತಿಳಿಸಿದ ಅವರು, ತುಳುನಾಡಿನ ನಂಬಿಕೆ-ಆಚರಣೆಗಳನ್ನು ಭಯ-ಭಕ್ತಿಗಳಿಂದ ಮುನ್ನಡೆಸುವ ಹೊಣೆ ನಾಗರಿಕ ಸಮಾಜದ್ದಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ದಿವ್ಯ ಉಪಸ್ಥಿತರಿದ್ದ ಮಾಣಿಲ ಶ್ರೀಧಾಮದ ಯೋಗಿ ಕೌಸ್ತುಭ ಮೋಹನದಾಸ ಪರಮಹಂಸ ಶ್ರೀಗಳು ಮಾತನಾಡಿ, ಜಗತ್ತಿಗೆ ಶಕ್ತಿ ನೀಡಿದ ವಿಶಿಷ್ಟ ಸಂಸ್ಕøತಿ ತುಳುನಾಡಿನ ಗರಿಮೆಯಾಗಿದೆ. ಪ್ರಾಚೀನ ಆಚರಣೆಗಳಿಂದ ಬೆಳೆದುಬಂದ ಇಲ್ಲಿಯ ಸಂಸ್ಕøತಿ ಸಂವರ್ಧನೆ ಹೊಸ ತಲೆಮಾರಿಗೆ ಸವಾಲಾಗುತ್ತಿರುವುದು ಆತಂಕಕಾರಿಯಾಗಿದೆ ಎಂದು ತಿಳಿಸಿದರು. ನಾಡಿನೆಲ್ಲೆಡೆ ದೇವಾಲಯ, ಮಠ-ಮಂದಿರಗಳಲ್ಲಿ ಬ್ರಹ್ಮಕಲಶ ಕಾರ್ಯಚಟುವಟಿಕೆಗಳು ವಿಶೇಷಾಸ್ತೆಯಿಂದ ನೆರವೇರುತ್ತಿದೆ. ಆದರೆ ಆ ಬಳಿಕ ನಿರ್ವಹಣೆಯ ವ್ಯವಸ್ಥೆಯಲ್ಲಿ ತೊಂದರೆಗಳಾಗುತ್ತಿರುವುದು ಕಂಡುಬರುತ್ತಿದ್ದು, ಭಕ್ತರಲ್ಲಿ ಸಮರ್ಪಣಾ ಭಾವ, ಪ್ರೀತಿಯ ಸಹಯೋಗದೊಂದಿಗೆ ವ್ಯವಸ್ಥೆಗಳು ಮುಂದುವರಿಯಬೇಕು ಎಂದು ತಿಳಿಸಿದರು. ಪರಿಶುದ್ದ ಮನಸ್ಸಿನೊಂದಿಗೆ, ದೇವಾಲಯ್ಳ ಆಚಾರ-ಅನುಷ್ಠಾನಗಳಿಗೆ ಚ್ಯುತಿಯೊದಗದಂತೆ ಕಾಪಿಡುವ ಒಮ್ಮನಸ್ಸು ಎಲ್ಲರ ಹೃದಯಂಗಳದಲ್ಲಿ ಮೂಡಿಬರಲಿ ಎಂದು ಹಾರೈಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರವಿರಾಜ ಶೆಟ್ಟಿ ನಿಟ್ಟೆಗುತ್ತು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಸದಾನಂದ ರೈ, ಬಂಟರ ಸಂಘ ಮಂಜೇಶ್ವರ ಘಟಕದಧ್ಯಕ್ಷ ದಾಸಣ್ಣ ಆಳ್ವ ಕುಳೂರು ಬೀಡು, ಐಲ ಶ್ರೀದುರ್ಗಾಪರಮೇಶ್ವರಿ ದೇವಾಲಯದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ ಕೋಡಿಬೈಲು, ಬಂಟರ ಸಂಘದ ಮೀಂಜ ಘಟಕಾಧ್ಯಕ್ಷ ಜಗದೀಶ ಶೆಟ್ಟಿ ಎಲಿಯಾಣ, ಮಂಜೇಶ್ವರ ಕೀರ್ತೇಶ್ವರ ದೇವಾಲಯದ ಅಧ್ಯಕ್ಷ ತುಕರಾಮ ಕುಂಬ್ಳೆ, ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಕನಿಲ ಶ್ರೀಭಗವತೀ ಕ್ಷೇತ್ರದ ಅಧ್ಯಕ್ಷ ಟಿ.ಲಕ್ಷ್ಮಣ ಸಾಲ್ಯಾನ್, ಚಿಗುರುಪಾದೆ ಶ್ರೀಮಹಾಲಿಂಗೇಶ್ವರ ದೇವಾಲಯದ ಅಧ್ಯಕ್ಷಡಾ.ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ ಉಪಸ್ಥಿತರಿದ್ದು ಶುಭಹಾರೈಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ ಶೆಟ್ಟಿ ಮಾಡ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ನ್ಯಾಯವಾದಿ ಗಂಗಾಧರ ಕೊಂಡೆವೂರು ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಲಯನ್ ಕಿಶೋರ್ ಡಿ ಶೆಟ್ಟಿಯವರ ತಂಡದವರಿಂದ ಕಟೀಲ್ದಪ್ಪೆ ಶ್ರೀಉಳ್ಳಾಲ್ತಿ ತುಳು ನಾಟಕ ಪ್ರದರ್ಶನ ನಡೆಯಿತು. ಬುಧವಾರ ಬೆಳಿಗ್ಗೆ ಗಣಪತಿಹೋಮ, ಬಿಂಬ ಶುದ್ದಿ, ಶಾಂತಿಹೋಮ, ಪ್ರಾಯಶ್ಚಿತ ಹೋಮಗಳು ಹಾಗೂ ಸಂಜೆ ಬಿಂಬ ಅಧಿವಾಸ, ದುರ್ಗಾಪೂಜೆ, ಸುದರ್ಶನಹೋಮ,ಶಿರತತ್ವಹೋಮ ವಿಧಿವೀಧಾನಗಳು ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ, ಭಜನಾ ಸಂಕೀರ್ತನೆಗಳು ನಡೆಯಿತು. ಸಂಜೆ ಧಾರ್ಮಿಕ ಸಭೆಯ ಬಳಿಕ ಅರಸು ನೃತ್ಯ ಅಕಾಡೆಮಿ ಮಂಜೇಶ್ವರ ತಂಡದವರಿಂದ ನೃತ್ಯ ಸೌರಭ ಹಾಗೂ ಕುಮಾರಿ ವರಶ್ರೀ ಕೊಂಡೆವೂರು ಅವರಿಂದ ಭರತನಾಟ್ಯ ಪ್ರದರ್ಶನಗಳು ನಡೆದವು. ಇಂದಿನ ಕಾರ್ಯಕ್ರಮ: ಗುರುವಾರ ಬೆಳಿಗ್ಗೆ 8ಕ್ಕೆ ಗಣಪತಿಹೋಮ ಗೃಹಶಾಂತಿ, ದುರ್ಗಾಹೋಮ, 9.16ರ ಶುಭಮುಹೂರ್ತದಲ್ಲಿ ಮಹಾಗಣಪತಿ ದೇವರ ಪ್ರತಿಷ್ಠೆ, 11.7 ರಿಂದ ಶ್ರೀದುರ್ಗಾಪರಮೇಶ್ವರಿ ದೇವರ ಬಿಂಬ ಪ್ರತಿಷ್ಠೆ, ಜೀವ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಅಪರಾಹ್ನ 1.30 ರಿಂದ ಭಜನಾ ಕಾರ್ಯಕ್ರಮ, ಸಂಜೆ ಆಶ್ಲೇಷಾ ಬಲಿ, ಕಲಶಾಧಿವಾಸ, ಅಧಿವಾಸ ಹೋಮ, ದುರ್ಗಾಪೂಜೆ, ಶ್ರೀರಕ್ತೇಶ್ವರಿ ದೈವಗಳ ಶಿಲಾಪೀಠದ ಅಧಿವಾಸಗಳು ನಡೆಯಲಿವೆ. ಅಪರಾಹ್ನ 3 ರಿಂದ ಮಾತೃಸಂಗಮ ನಡೆಯಲಿದೆ. ಸಾದ್ವಿ ಮಾತಾನಂದಮಯೀ ಆಶೀರ್ವಚನ ನೀಡುವರು. ಡಾ.ಆಶಾಜ್ಯೋತಿ ರೈ ಅಧ್ಯಕ್ಷತೆ ವಹಿಸುವರು. ಗಣ್ಯರು ಉಪಸ್ಥಿತರಿರುವರು. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಸಂಜೆ 4.30 ರಿಂದ ಯಕ್ಷದ್ರುವ ಪಟ್ಲ ಸತೀಶ ಶೆಟ್ಟಿ ಸಾರಥ್ಯದಲ್ಲಿ ಯಕ್ಷ ನಾಟ್ಯ ಗಾನ ವೈಭವ ಪ್ರಸ್ತಿತಿಗೊಳ್ಳಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries