ಮಂಜೇಶ್ವರ ಗೋವಿಂದ ಪೈಯವರ ಕವಿತೆಗಳಲ್ಲಿ ಪ್ರಾದೇಶಿಕ ಸೊಗಡು ಇದೆ- ಡಾ.ಯು. ಮಹೇಶ್ವರಿ
0
ಮಾರ್ಚ್ 25, 2019
ಕುಂಬಳೆ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರ ಕವಿತೆಗಳು ಕ್ಲಿಷ್ಟ ಎನ್ನುವ ನಂಬಿಕೆ. ಆದರೆ ಅದನ್ನು ಕೂಲಂಕುಷವಾಗಿ ಗಮನಿಸಿದಾಗ ಅದರಲ್ಲಿ ಬಹಳಷ್ಟು ಪ್ರಾದೇಶಿಕ ಸೊಗಡನ್ನು ಅರಿಯಲು ಸಾಧ್ಯ. ಆಗ ಅವರು ಬಳಸಿದ ಪದಗಳ ನಿಜವಾದ ಸತ್ವ ಗೋಚರವಾಗಿ ಕವಿತೆ ರುಚಿಸುತ್ತದೆ. ಬೇಂದ್ರೆಯವರ ಹಾಗೆ ಪೈವರೂ ಕೂಡಾ ತಾನು ಹೇಳ ಬೇಕಾದ ಭಾವನೆಗಳನ್ನು ಪ್ರಕಟಿಸಲು ತಾನೇ ಒಂದಷ್ಟು ಪದಗಳನ್ನು ಸೃಷ್ಟಿಸಿದ್ದಾರೆ. ಇವುಗಳ ಹಿನ್ನೆಲೆ ಅರಿಯದೆ ಪದ ಕ್ಲಿಷ್ಟವಾಗುತ್ತದೆ ಎಂದು ಕಣ್ಣೂರು ವಿವಿ ಕನ್ನಡ ಅಧ್ಯಯನಾಂಗದ ನಿವೃತ್ತ ಮಾರ್ಗದರ್ಶಕಿ ಡಾ.ಯು.ಮಹೇಶ್ವರಿ ತಿಳಿಸಿದರು.
ಅವರು ವಿದ್ಯಾನಗರ ಚಾಲದಲ್ಲಿರುವ ಕಣ್ಣೂರು ವಿವಿ ಭಾರತೀಯ ಭಾಷಾ ಅಧ್ಯಯನಾಂಗದ ಕನ್ನಡ ವಿಭಾಗದಲ್ಲಿ ಶನಿವಾರ ನಡೆದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರ 137 ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಹಾಯಕ ಪ್ರಾಧ್ಯಾಪಕ ಡಾ. ರಾಧಾಕೃಷ್ಣ ಬೆಳ್ಳೂರು, ಕುಂಡಂಕುಳಿ ಹೈಯರ್ ಸೆಕಂಡರಿ ಶಾಲೆಯ ಅಧ್ಯಾಪಕ ಜಯರಾಜನ್, ಬಿ ಎಡ್ ವಿದ್ಯಾರ್ಥಿ ಸಂಘ ಅಧ್ಯಕ್ಷ ರಂಜಿತ್ ಕುಮಾರ್, ಮಂಜೇಶ್ವರ ಗೋವಿಂದ ಪೈ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ್ ಅವರುಗಳು ಗೋವಿಂದ ಪೈಗಳ ಕುರಿತು ಮಾತನಾಡಿದರು. ಡಾ ರಾಜೇಶ್ ಬೆಜ್ಜಂಗಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಫಿಲ್ ವಿದ್ಯಾರ್ಥಿ ಸುಜಿತ್ ಕುಮಾರ್ ಸ್ವಾಗತಿಸಿ, ಪ್ರದೀಪ್ ಕುಮಾರ್ ವಂದಿಸಿದರು. ಸಂಧ್ಯಾ ಹಾಗೂ ಸೌಮ್ಯ ಕೆ ಕಾರ್ಯಕ್ರಮ ನಿರೂಪಿಸಿದರು.

