ಬಂಬ್ರಾಣಕ್ಕೆ ರಾಜ್ಯ ಮಕ್ಕಳ ಹಕ್ಕು ಆಯೋಗದ ಅಧಿಕಾರಿಗಳ ಭೇಟಿ-ಶಾಲಾಭಿವೃದ್ದಿಗೆ ನಿರ್ದೇಶನ
0
ಮಾರ್ಚ್ 21, 2019
ಕುಂಬಳೆ: ಕುಂಬಳೆ ಗ್ರಾ.ಪಂ. ವ್ಯಾಪ್ತಿಯ ಬಂಬ್ರಾಣ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ರಕ್ಷಕ-ಶಿಕ್ಷಕ ಸಂಘದ ಮನವಿಯ ಮೇರೆಗೆ ರಾಜ್ಯ ಮಕ್ಕಳ ಹಕ್ಕು ಆಯೋಗದ ಅಧಿಕೃತರು ಸೋಮವಾರ ಶಾಲೆಗೆ ಭೇಟಿ ನೀಡಿದ್ದು, ಈ ಸಂದರ್ಭ ಸಮಸ್ಯೆಗಳನ್ನು ಕಣ್ಣಾರೆ ಕಂಡು ಹೌಹಾರಿ ಕೂಡಲೇ ವಿವಿಧ ಇಲಾಖೆಗಳ ಪ್ರಮುಖರನ್ನು ಕರೆಸಿ ಶಾಲೆಯ ಭೌತಿಕ ಸೌಕರ್ಯಗಳನ್ನು ತಕ್ಷಣದಿಂದ ಒದಗಿಸಿಕೊಡುವಂತೆ ಕಠಿಣ ಆದೇಶ ನೀಡಿದೆ.
1926ರಲ್ಲಿ ಸ್ಥಾಪನೆಗೊಂಡ ಬಂಬ್ರಾಣ ಶಾಲೆಯು 2.89 ಎಕ್ರೆ ಸ್ಥಳವನ್ನು ದಾಖಲಾತಿಯಲ್ಲಿ ಹೊಂದಿದ್ದರೂ ಸ್ಥಳೀಯ ಖಾಸಗೀ ವ್ಯಕ್ತಿಗಳು ಶಾಲಾ ನಿವೇಶನಕ್ಕೆ ಸೇರಿದ ಕೆಲವು ಸ್ಥಳಗಳನ್ನು ವಶದಲ್ಲಿಟ್ಟಿರುವುದನ್ನು ಆಯೋಗದ ಅಧಿಕೃತರು ಗುರುತಿಸಿಕೊಂಡಿದ್ದಾರೆ. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆಯೋಗ ಕೂಡಲೇ ಸೂಕ್ತ ಕ್ರಮಗಳ ಮೂಲಕ ಪರಬಾರೆಯಾದ ಶಾಲಾ ಆಸ್ತಿಗಳನ್ನು ಮರಳಿ ಪಡೆಯಲು ಆದೇಶಿಸಿದೆ. ಶಾಲೆಗೆ ಆವರಣ ಗೋಡೆ ಇಲ್ಲದಿರುವುದರಿಂದ ಮಕ್ಕಳ ಕಲಿಕೆಗೆ-ಸುರಕ್ಷಿತತೆಗೆ ಸವಾಲುಗಳು ಎದುರಾಗುತ್ತಿದ್ದು, ಶಾಲೆಯ ಭೂ ದಾಖಲಾತಿಗೊಳಪಡುವ ಪ್ರದೇಶಗಳಿಗೆ ಆವರಣ ಗೋಡೆ ನಿರ್ಮಿಸಿಕೊಡಲು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಆಯೋಗ ಆದೇಶ ನೀಡಿದೆ. ಶಾಲೆಗೆ ನೂತನ ಕಟ್ಟಡ, ಶೌಚಾಲಯ, ಕಂಪ್ಯೂಟರ್ ಲ್ಯಾಬ್ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಕೂಡಲೇ ಒದಗಿಸಿಕೊಡುವಂತೆ ವಿದ್ಯಾಭ್ಯಾಸ ಇಲಾಖೆಯ ಅಧಿಕಾರಿಗಳಿಗೆ ಆಯೋಗ ಆದೇಶ ನೀಡಿದೆ.
ಭೇಟಿ ನೀಡಿದ ಸಂದರ್ಭ ರಾಜ್ಯ ಮಕ್ಕಳ ಹಕ್ಕು ಆಯೋಗದ ಶೀಲಾ ಮೆನನ್, ಜಿಲ್ಲಾ ವಿದ್ಯಾಭ್ಯಾಸ ಉಪನಿರ್ದೇಶಕ ಡಾ.ಗಿರೀಶ್ ಬೊಲಾಯಿಲ್, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ, ಹಿರಿಯ ಸೂಪರಿಟೆಂಡೆಂಟ್ ಮಹಮ್ಮದ್ ಕುಂಞÂ, ಬ್ಲಾಕ್ ನಿರೂಪಣಾಧಿಕಾರಿ ವಿಜಯಕುಮಾರ್, ಕುಂಬಳೆ ಠಾಣಾ ಸಹಾಯಕ ಅಧಿಕಾರಿ ಬಿಜು, ಕುಂಬಳೆ ಗ್ರಾಮ ಪಂಚಾಯತಿ ಕಿರಿಯ ಸೂಪರಿಟೆಂಡೆಂಟ್ ಜೋಸ್, ಮಂಜೇಶ್ವರ ತಾಲೂಕು ಸರ್ವೇಯರ್ ಸುನಿಲ್ ಕುಮಾರ್ ಸಹಿತ ವಿವಿಧ ಇಲಾಖೆಗಳ ಪ್ರಮುಖರು ಉಪಸ್ಥಿತರಿದ್ದರು.
ಶಾಲೆಯ ಬಗ್ಗೆ:
ಬಂಬ್ರಾಣ ಶಾಲೆಯು 1926ರಲ್ಲಿ ಸ್ಥಾಪನೆಗೊಂಡಿದ್ದು ಒಂದನೇ ತರಗತಿಯಿಂದ ನಾಲ್ಕನೇ ತರಗತಿ ವರೆಗೆ ಕನ್ನಡ ಹಾಗೂ ಮಲೆಯಾಳ ಮಾಧ್ಯಮಗಳೆರಡರಲ್ಲೂ ಇಲ್ಲಿ ಬೋಧನೆ ನೀಡಲಾಗುತ್ತಿದೆ. ಹಿಂದೆ 400ಕ್ಕಿಂತಲೂ ಮಿಕ್ಕಿದ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಸೌಕರ್ಯ ಪಡೆಯುತ್ತಿದ್ದರೆ ಪ್ರಸ್ತುತ ನೂರರಷ್ಟು ಸ್ಥಳೀಯ ಬಡ-ಮಧ್ಯಮ ವರ್ಗದ ಮಕ್ಕಳು ಇಲ್ಲಿ ವ್ಯಾಸಂಗ ನಿರ್ವಹಿಸುತ್ತಿದ್ದಾರೆ. ಹತ್ತು ಶಿಕ್ಷಕರನ್ನೊಳಗೊಂಡ ಈ ಶಾಲೆಯಲ್ಲಿ ಕಳೆದೊಂದು ವರ್ಷದಿಂದ ಖಾಯಂ ಮುಖ್ಯೋಪಾಧ್ಯಾಯರ ನೇಮಕಾತಿ ನಡೆದಿಲ್ಲ.
ಸಮಸ್ಯೆಗಳ ಆಗರ:
ಶಾಲೆ ಸ್ಥಾಪನೆಗೊಂಡು ಶತಮಾನಗಳ ಹತ್ತಿರ ತಲಪುವ ಈ ಹೊತ್ತಿನಲ್ಲಿ ಈ ಶಾಲೆ ಸಮಸ್ಯೆಗಳ ಸಂಕೋಲೆಯಲ್ಲಿ ಬಂಧಿಯಾಗಿದೆ. ಶಾಲಾ ನಿವೇಶನದ ಬಹುಭಾಗ ಪರಭಾರೆಯಾಗುವುದರ ಜೊತೆಗೆ ಮೂಲ ಸೌಕರ್ಯದಿಂದ ವಂಚಿತವಾಗಿದೆ. ದಶಕಗಳಿಂದ ಹಲವು ಬಾರಿ ಶಾಲಾಭಿವೃದ್ದಿಗೆ ಮನಿ ನೀಡಿದ್ದರೂ ಫಲಿತಾಂಶ ಶೂನ್ಯ. ಈ ಕಾರಣದಿಂದ ಶಾಲಾ ರಕ್ಷಕ ಶಿಕ್ಷಕ ಸಂಘ ವಿವಿಧ ಇಲಾಖೆ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಗಳಿಗೆ ಮನವಿ ನೀಡಿತ್ತು. ಇದೀಗ ಈ ಮನವಿಗೆ ಸ್ಪಂದಿಸಿದ ಮಕ್ಕಳ ಹಕ್ಕು ಆಯೋಗ ಸೋಮವಾರ ನೇರವಾಗಿ ಶಾಲಾ ಸಂದರ್ಶನಗೈದು ಗ್ರಾಮೀಣ ಭಾಗದ ಶಾಲೆಯ ದುಸ್ಥಿತಿಗೆ ಮರುಕಪಡುವುದರ ಜೊತೆಗೆ ಸಂಬಂಧಿಸಿದ ಇಲಾಖೆಗಳ ಅಧಿಕೃತರ ಅಸಡ್ಡೆಗೆ ಖಾರವಾಗಿ ಪ್ರತಿಕ್ರೀಯಿಸಿ ಮುಂದಿನ ಚಟುವಟಿಕೆಗಳ ತುರ್ತು ಕ್ರಮಕ್ಕೆ ಆದೇಶ ನೀಡಿದೆ.
ಏನಾಗಿತ್ತು ಗೊತ್ತಾ?
ಈ ಶಾಲೆಯಲ್ಲಿ ಕಳೆದ ಒಂದು ವರ್ಷದ ಹಿಂದೆ ಮುಖ್ಯೋಪಾಧ್ಯಾಯಿನಿಯಾಗಿದ್ದವರು ಶಾಲೆ ಮತ್ತು ಶಾಲಾ ರಕ್ಷಕ ಶಿಕ್ಷಕ ಸಂಘದ ಜಂಟಿ ಖಾತೆಯಿಂದ ರಕ್ಷಕ ಶಿಕ್ಷಕ ಸಂಘದ ಅನುಮತಿ ಇಲ್ಲದೆ ಸಾವಿರಾರು ರೂ.ಗಳನ್ನು ವಾಪಸ್ ಪಡೆದಿರುವುದು ಗಮನಕ್ಕೆ ಬಂದಿದೆ. ಜಂಟಿ ಖಾತೆಯನ್ನು ಮುಖ್ಯೋಪಾಧ್ಯಾಯರ ಖಾಸಗೀ ಖಾತೆಯಾಗಿ ಬದಲಾಯಿಸಿ ಈ ವಂಚನೆ ನಡೆಸಲಾಗಿದ್ದು, ಬ್ಯಾಂಕ್ ಅಧಿಕೃತರೂ ಶಾಮೀಲಾಗಿರುವುದಾಗಿ ಸಂಶಯಿಸಲಾಗಿದೆ. ಈ ಬಗ್ಗೆ ರಕ್ಷಕ ಶಿಕ್ಷಕ ಸಂಘ ಈಗಾಗಲೇ ಜಿಲ್ಲಾ ಶಿಕ್ಷಣ ನಿರ್ದೇಶಕರಿಗೆ ದೂರು ನೀಡಿದ್ದು, ಮುಂದಿನ ಹೆಜ್ಜೆಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.ಈ ಮಧ್ಯೆ ಆ ಮುಖ್ಯೋಪಾಧ್ಯಾಯಿನಿ ಸ್ವಯಂ ನಿವೃತ್ತಿ ಪಡೆದಿದ್ದು ಸಂಶಯಕ್ಕೆ ಪುಷ್ಠಿ ನೀಡಿದೆ.
ಗಡಿಭಾಗದ ನಿರ್ಲಕ್ಷ್ಯ:
ಗಡಿನಾಡು ಕಾಸರಗೋಡಿನ ಮೂಲೆ-ಮೂಲೆಗಳಲ್ಲಿರುವ ಅನೇಕ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡು ತ್ತರಿಸುತ್ತಿದೆ. ಜೊತೆಗೆ ಖಾಸಗೀ ಶಾಲೆಗಳ ತೀವ್ರ ಪೈಪೋಟಿಯಿಂದ ಮಕ್ಕಳಿಲ್ಲದೆ ಕೆಲವು ಮುಚ್ಚುವ ಸ್ಥಿತಿಯಲ್ಲೂ ಇದೆ. ಇವುಗಳಲ್ಲಿ ಬಹುತೇಕ ಕನ್ನಡ ಶಾಲೆಗಳೇ ಆಗಿದ್ದು, ಬದಲಿ ಮಲೆಯಾಳವನ್ನು ತುರುಕುವ ಯತ್ನಗಳೂ ತೆರೆಮರೆಯಲ್ಲಿ ನಡೆಯುತ್ತಿದೆ.
ಏನಂತಾರೆ:
ಶಾಲೆಯ ಸಮಗ್ರ ಅಭಿವೃದ್ದಿಯ ದೃಷ್ಟಿಯಿಂದ ಉನ್ನತ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಗುತ್ತಿದೆ. ಹಲವು ವರ್ಷಗಳಿಂದ ನಮ್ಮ ಬೇಡಿಕೆಗಳಿಗೆಸ್ಪಂದನೆ ದೊರೆಯದ್ದರಿಂದ ಮಕ್ಕಳ ಹಕ್ಕುಗಳ ಕಮಿಷನ್ ರಿಗೆ ನೀಡಿದ ಮನವಿಯ ಫಲಶ್ರುತಿಯಾಗಿ ಅಧಿಕೃತರು ಈ ಭೇಟಿ ನೀಡಿದ್ದು, ಸಂಚಲನ ಮೂಡಿಸಿದೆ. ಮಕ್ಕಳ ಹಕ್ಕು ಕಮಿಷನ್ ಅವರ ನಿರ್ದೇಶನದಂತೆ ಕೂಡಲೇ ಮೂಲಭೂತ ಸೌಕರ್ಯಗಳನ್ನು ನಿರ್ವಹಿಸಲು ಆದೇಶಿಸಿರುವುದು ಭರವಸೆ ಮೂಡಿಸಿದೆ. ಶಾಲಾಭಿವೃದ್ದಿಗೆ ರಕ್ಷಕ ಶಿಕ್ಷಕ ಸಂಘ ಸದಾ ಮುಂದಿದ್ದು, ಯಾವ ಬೆಲೆ ತೆತ್ತಾದರೂ ಶಾಲೆಯ ಸೌಕರ್ಯವನ್ನು ಬಲಪಡಿಸಿ ಹೆಚ್ಚು ಮಕ್ಕಳ ವಿದ್ಯಾಭ್ಯಾಸ ಸೌಕರ್ಯಕ್ಕೆ ವ್ಯವಸ್ಥೆನ ಮಾಡಲಾಗುವುದು.
ಜಂಟಿ ಖಾತೆಯಿಂದ ಹಣ ವಿಡ್ರೋ ಮಾಡಿರುವುದು ಗಮನಕ್ಕೆ ಬಂದಿದ್ದು ಈ ಬಗ್ಗೆ ಶಿಕ್ಷಣ ಉಪನಿರ್ದೇಶಕರಿಗೆ ದೂರು ನೀಡಲಾಗಿದೆ. ಸೂಕ್ತ ನ್ಯಾಯಕ್ಕಾಗಿ ಅವಿರತ ಶ್ರಮಿಸಲಾಗುತ್ತಿದೆ.
ಸುಕುಮಾರ ಬೆಳ್ಚಪ್ಪಾಡ
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರು ಬಂಬ್ರಾಣ

