ಪೆರ್ಲ:ಸುದರ್ಶನ ಗ್ರಾಮಾಭಿವೃದ್ಧಿ ಸಮಿತಿಯ ಮೂರನೇ ವರ್ಷದ ಕುಡಿ ನೀರು ವಿತರಣೆಗೆ ಗುರುವಾರ ಚಾಲನೆ ನೀಡಲಾಯಿತು.
ಸಾಮಾಜಿಕ ಕಾರ್ಯಕರ್ತ ರಾಧಾಕೃಷ್ಣ ಭಟ್ ಪತ್ತಡ್ಕ 7ನೇ ವಾರ್ಡ್ ಬೈಲಮೂಲೆಯ ತೀವ್ರ ಕುಡಿನೀರು ಕ್ಷಾಮ ಎದುರಿಸುತ್ತಿರುವ ಚನಿಯಪ್ಪ ನಾಯ್ಕ್ ಅವರಿಗೆ ವಿತರಿಸುವ ಮೂಲಕ ಚಾಲನೆ ನೀಡಿದರು.
ಕಿನ್ನಿಂಗಾರು ಬೆಳೇರಿ ಎಂ.ಅಬ್ದುಲ್ಲಾ, ಬಾಲಚಂದ್ರ, ವಾಣೀನಗರ ಕಿಳಿಂಗಾರು ಟ್ರೇಡರ್ಸ್ ಮಾಲಕ ಮಹಾಲಿಂಗೇಶ್ವರ ಭಟ್, ಸ್ವರ್ಗದ ನಿವೃತ್ತ ಸೈನಿಕ ಈಶ್ವರ ನಾಯ್ಕ್ ಹಾಗೂ ಸಮಿತಿ ಸದಸ್ಯರ ಮನೆಯಿಂದ ಸಂಗ್ರಹಿಸಿದ ನೀರನ್ನು ಬೈಲಮೂಲೆ, ಇಳಂತೋಡಿ, ನೆಕ್ಕರೆಕಾಡು, 6ನೇ ವಾರ್ಡ್ ಪಡ್ರೆ ಸೂರಂಬೈಲು ಕಟ್ಟೆ, ಕೆದಂಬಾಯಿಮೂಲೆಯ ಒಟ್ಟು 20ರಷ್ಟು ಮನೆಗಳಿಗೆ ಅಗತ್ಯದ ನೀರು ವಿತರಿಸಲಾಯಿತು.
ಸಮಿತಿ ಸದಸ್ಯರಾದ ಉದಯಶಂಕರ ಭಟ್ ನೀರು ಸಂಗ್ರಹದ ಟ್ಯಾಂಕ್ ನೀಡಿದರು.ಜಗದೀಶ್ ಕುತ್ತಾಜೆ, ಅಜಿತ್ ಸ್ವರ್ಗ, ಪ್ರದೀಪ್ ಶಾಂತಿಯಡಿ, ರಾಧಾಕೃಷ್ಣ ಬೈಲಮೂಲೆ, ಕೃಷ್ಣ ಎ.ಜೆ., ನವೀನ್ ಕುಮಾರ್, ಪಿಕ್ ಅಪ್ ಚಾಲಕ ರವಿ ಪಾಲೆಪ್ಪಾಡಿ ಸಹಕರಿಸಿದರು.
ಎಂಡೋಸಲ್ಫಾನ್ ಸಂತ್ರಸ್ತರಿರುವ ಪಿಲಿಂಗಲ್ಲು ನೀರ್ಚಾಲು ಹಾಗೂ ಸ್ವರ್ಗ ಮಲೆತ್ತಡ್ಕದ 20ರಷ್ಟು ಮನೆಗಳನ್ನು ಸಂಪರ್ಕಿಸುವ ನೂತನ ರಸ್ತೆ ನಿರ್ಮಾಣಕ್ಕೆ ನೇತೃತ್ವ ನೀಡಿದ ಸಮಿತಿ ಪತ್ತಡ್ಕ ಪರಂಗಾಜೆ ರಸ್ತೆ ಹಾಗೂ ಲೋಕೋಪಯೋಗಿ ಇಲಾಖೆ ರಸ್ತೆ ದುರಸ್ತಿ, ಓದುಗರಿಗೆ ಪತ್ರಿಕೆ, ಆರೋಗ್ಯ ತಪಾಸಣೆ, ಮಾಹಿತಿ ಶಿಬಿರಗಳಿಗೆ ಸಹಯೋಗ ನೀಡಿತ್ತು.
ಏನಂತಾರೆ:
'ಮೂರನೇ ವರ್ಷದ ಜಲ ಯಜ್ಞ ಯೋಜನೆಯಂತೆ ಸದಸ್ಯರ ಸಹಾಯದೊಂದಿಗೆ ಎಣ್ಮಕಜೆ, ಕುಂಬ್ಡಾಜೆ, ಬೆಳ್ಳೂರು ಪಂಚಾಯಿತಿಗಳ ಗಡಿ ಭಾಗದ ತೀವ್ರ ಕುಡಿ ನೀರು ಕ್ಷಾಮ ಎದುರಿಸುತ್ತಿರುವ ಜನರಿಗೆ ಮುಂದಿನ ದಿನಗಳಲ್ಲೂ ನೀರು ವಿತರಿಸುವ ಯೋಜನೆ ಇರಿಸಲಾಗಿದೆ'
-ಅಜಿತ್ ಸ್ವರ್ಗ,
ಸಂಚಾಲಕ,ಸುದರ್ಶನ ಸಮಿತಿ


