ಕುಂಬಳೆ: ಬದುಕಿನಲ್ಲಿ ಸಂಗ್ರಹಿಸುವ ಸಮಪತ್ತು ಯಾವುದೂ ನಮ್ಮದಾಗಲು ಸಾಧ್ಯವಿಲ್ಲ. ದೈವ ಕಾರ್ಯ ಸಹಿತ ಸತ್ಕರ್ಮಗಳಿಗೆ ನಾವು ವಿನಿಯೋಗಿಸುವ ಸಂಪತ್ತು, ಅಂತರಂಗದಿಂದ ಸಲ್ಲಿಸುವ ಪ್ರಾರ್ಥನೆಗಳಿಗೆ ಭಗವಂತ ಅನುಗ್ರಹಿಸುತ್ತಾನೆ. ಶ್ರದ್ದಾ ಭಕ್ತಿಗಳಿಂದ ದೇವರ ಪ್ರಸಾದವೆಂದು ಪರಿಗ್ರಹಿಸುವುದರಿಂದ ಸಂತೃಪ್ತಿ ನೆಲೆಗೊಳ್ಳುತ್ತದೆ ಎಂದು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಕುಂಬಳೆ ಆರಿಕ್ಕಾಡಿ ಶ್ರೀಮಲ್ಲಿಕಾರ್ಜುನ ಮತ್ತು ಕೋಟೆ ವೀರಾಂಜನೇಯ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಇತ್ತೀಚೆಗೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನಗೈದು ಮಾತನಾಡಿದರು.
ಮಂಗಳೂರು ಶ್ರೀರಾಧಾಕೃಷ್ಣ ದೇವಸ್ಥಾನದ ವಿದ್ವಾನ್.ಡಾ.ಸತ್ಯಕೃಷ್ಣ ಭಟ್ ಎಂ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರ ಇಂದು ಜಗದಗಲ ಮಾನ್ಯತೆ ಹೊಂದಲು ಈ ದೇಶದ ಸಂಸ್ಕøತಿ ಮತ್ತು ಸಂಸ್ಕøತ ಭಾಷೆಯೇ ಮುಖ್ಯ ಕಾರಣ. ಈ ನಿಟ್ಟಿನಲ್ಲಿ ಇವೆರಡನ್ನೂ ಉಳಿಸಿ ಬೆಳೆಸುವ ಚಟುವಟಿಕೆಗಳಾಗಬೇಕು ಎಂದು ತಿಳಿಸಿದರು.
ಕುಂಬಳೆ ಶ್ರೀಅಯ್ಯಪ್ಪ ಸ್ವಾಮಿ ದೇವಸ್ಥಾನದ ಗೌರವಾಧ್ಯಕ್ಷ ವಿಶ್ವನಾಥ ನಾಯಕ್ ಕುಂಬಳೆ, ಮಂಜುನಾಥ ಆಳ್ವ ಕುಂಬಳೆ, ಪದ್ಮನಾಭ ಶೆಟ್ಟಿ ಮಡ್ವ, ರಾಮಚಂದ್ರ ಗಟ್ಟಿ ಕುಂಬಳೆ, ಚಂದ್ರಶೇಖರ ಶಿಲ್ಪಿ ಬಂಬ್ರಾಣ, ರಾಮ ಕಾರ್ಲೆ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎ.ಲಿಂಗಪ್ಪಯ್ಯ ಜಾಲುಮನೆ, ಗೌರವಾಧ್ಯಕ್ಷ ಲಕ್ಷ್ಮೀಪತಿ ರಾವ್, ಅಧ್ಯಕ್ಷ ಸುಧಾಕರ ಕುಂಬಳೆ, ಬಾಲಕೃಷ್ಣ ಕುಂಬಳೆ ಉಪಸ್ಥಿತರಿದ್ದರು. ಕೆ.ಜಗದೀಶ್ ಕೂಡ್ಲು ಸ್ವಾಗತಿಸಿ, ಮೌನೇಶ್ ಪುಜೂರು ವಂದಿಸಿದರು. ಶಿವರಾಮ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುದರ್ಶನ ಕೆ.ಬಿ.ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಂಚಿತಾ ಎಂ.ಕೆ. ಅವರಿಂದ ಯೋಗಪ್ರದರ್ಶನ, ನಾಟ್ಯನಿಲಯಂ ಮಂಜೇಶ್ವರದ ಬಾಲಕೃಷ್ಣ ಮಾಸ್ತರ್ ಅವರ ಶಿಷ್ಯವೃಂದದವರಿಂದ ನೃತ್ಯ ಹೊಂಗಿರಣ ಹಾಗೂ ನೃತ್ಯ ಸಂಗಮ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು.


