ಉಪ್ಪಳ: ಆರ್ ಎಸ್ ಎಸ್ ಹಿರಿಯ ಮುಖಂಡ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ಸಂಚರಿಸುತ್ತಿದ್ದ ವಾಹನವನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆಯನ್ನು ಖಂಡಿಸಿ, ಸಮಾಜ ಘಾತುಕ ಶಕ್ತಿಗಳ ನಡೆಸುವ ದುಷ್ಕೃತ್ಯಗಳ ವಿರುದ್ಧ ಬಾಯಾರಿನಲ್ಲಿ ಸಂಘಪರಿವಾರ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಬಾಯಾರು ಪದವಿನಿಂದ-ಬಾಯಾರು ಸೊಸೈಟಿಯ ವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಸಂಘಪರಿವಾರದ ಪ್ರಮುಖರು ಭಾಗವಹಿಸಿದ್ದರು. ಪ್ರತಿಭಟನಾ ಮೆರವಣಿಗೆಯ ಕೊನೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಾರ್ಯವಾಹ್ ಲೋಕೇಶ್ ಜೋಡುಕಲ್ಲು ಮಾತನಾಡಿ, ಯಾವುದೇ ಕಾರಣ ಇಲ್ಲದೆ ಪ್ರಯಾಣಿಸುತ್ತಿದ್ದ ಸಂಘದ ಹಿರಿಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರ ವಾಹನದ ಮೇಲೆ ನಡೆದ ಹಲ್ಲೆ ಖಂಡನೀಯ. ಇಂತಹ ಅನೇಕ ಘಟನೆಗಳು ಕಾಸರಗೋಡಿನಾದ್ಯಂತ ನಡೆಯುವುದು ಇತ್ತೀಚೆಗೆ ಸಾಮಾನ್ಯ ಆಗುತ್ತಿದೆ. ಹಿರಿಯರು ಕಲಿಸಿದ ಜೀವನ ಪದ್ಧತಿಯಲ್ಲಿ ನಡೆಯುವ, ಎಂದಿಗೂ ಕಾನೂನು ಮೀರಿ ಉಪಕ್ರಮಗಳಲ್ಲಿ ತೊಡಗಿಕೊಳ್ಳದ ಸಜ್ಜನರನ್ನು ವಾಹನವನ್ನು ತಡೆದು ಹಲ್ಲೆಗೆ ಯತ್ನಿಸಿದವರ ಮೇಲೆ ಸಂಬಂಧಪಟ್ಟ ಇಲಾಖೆ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇವೆ. ಕ್ರಮ ಕೈಗೊಳ್ಳಲು ಅವರಿಗೆ ಸಾಧ್ಯವಿಲ್ಲ ಎಂದಾದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂಬುದು ತಿಳಿದಿದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ. ಕೆ.ಶ್ರೀಕಾಂತ್ ಮಾತನಾಡಿ ಶಬರಿಮಲೆ ಹೋರಾಟದ ಸಂದರ್ಭದಲ್ಲಿ ಅಯ್ಯಪ್ಪ ನಾಮ ಸಂಕೀರ್ತನೆಯನ್ನು ಜಪಿಸುತ್ತಿದ್ದ ಭಕ್ತರನ್ನು ಬಂಧಿಸಿದ ಪೋಲೀಸರು, ವಿನಾಕಾರಣ ಕಾರನ್ನು ತಡೆದು ಹಲ್ಲೆಗೆ ಯತ್ನಿಸಿದವರ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳುತ್ತೀರಿ ಎಂದು ಪೋಲೀಸ್ ಇಲಾಖೆಯನ್ನು ಪ್ರಶ್ನಿಸಿದರು. ಮದುವೆಯ ನೆಪದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಿದ್ದು ಮಾತ್ರವಲ್ಲದೆ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಪಡಿಸಿದ ಘಟನೆಯನ್ನು ಖಂಡಿಸಿದರಲ್ಲದೆ ಅಂತಹ ವ್ಯಕ್ತಿಗಳ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಈ ಕೃತ್ಯಕ್ಕೆ ಮದುವೆ ಮನೆಯವರು ಒಪ್ಪಿಗೆ ಇಲ್ಲದಿದ್ದಲ್ಲಿ ಅವರೇ ಸ್ವತಃ ಅಪರಾಧಿಗಳ ಪತ್ತೆಗೆ ಸಹಕರಿಸಲಿ. ಇಲ್ಲದಿದ್ದರೆ ಅವರೂ ಈ ಘಟನೆಗೆ ಕಾರಣ ಎಂದು ಭಾವಿಸಬೇಕಾಗುತ್ತದೆ.ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಯವರಾಗಿದ್ದರೂ ಹಲ್ಲೆಮಾಡಿದವರ ವಿರುದ್ದ ಪೋಲಿಸ್ ಇಲಾಖೆ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ಕ್ರಮವನ್ನು ನಮ್ಮ ಕಾರ್ಯಕರ್ತರೇ ಕೈಗೆತ್ತಿಕೊಳ್ಳಬೇಕಾದೀತು. ಅಂತಹ ಅವಕಾಶ ನೀಡಬೇಡಿ ಎಂದು ಪೋಲೀಸ್ ಇಲಾಖೆಗೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸಂಚಾಲಕ ಗೋಪಾಲ ಚೆಟ್ಟಿಯಾರ್ ಹಾಗೂ ವಿ ಹಿಂ ಪ, ಭಾಜಪ, ಸಹಕಾರಭಾರತಿಯ ಹಲವು ಪ್ರಮುಖರು ಉಪಸ್ಥಿತರಿದ್ದರು.
ಏನಾಗಿತ್ತು: ಹಿನ್ನೆಲೆ: ಏ.24 ರಂದು ಬುಧವಾರ ರಾತ್ರಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸ್ತರ ಜವಾಬ್ದಾರಿಯನ್ನು ಹೊಂದಿರುವ ಕಜಂಪಾಡಿ ಸುಬ್ರಮಣ್ಯ ಭಟ್ ಅವರು ಖಾಸಗಿ ಕಾರ್ಯಕ್ರಮವೊಂದಕ್ಕೆ ತಮ್ಮ ಮನೆಯವರ ಜೊತೆ ಬಾಯಾರಿನಿಂದ ವಾಹನವೊಂದರಲ್ಲಿ ಹೊರಟಿದ್ದರು. ಈ ಸಂದರ್ಭ ಬಾಯಾರು ಸೊಸೈಟಿ ಬಳಿ ಅನ್ಯ ಸಮುದಾಯದ ಖಾಸಗೀ ಕಾರ್ಯಕ್ರಮವೊಂದರ ಕಾರಣ, ವಾಹನಗಳು ರಸ್ತೆಯಲ್ಲಿ ನಿಲ್ಲಿಸಲಾಗಿತ್ತು. ಜೊತೆಗೆ ಸಿಡಿಮದ್ದುಗಳನ್ನು ರಸ್ತೆ ಬದಿಯಲ್ಲಿ ಸುಡಲಾಗುತ್ತಿತ್ತು.ಸುಡುಮದ್ದು ಮುಗಿಯುವ ತನಕ ತಮ್ಮ ವಾಹನವನ್ನು ನಿಲ್ಲಿಸಿ, ಬಳಿಕ ತೆರಳಲು ಅನುವಾದರು. ಆಗ ಅಲ್ಲಿಗೆ ಬಂದ ಯುವಕರ ತಂಡ ವಾಹನವನ್ನು ತಡೆದುದು ಮಾತ್ರವಲ್ಲದೆ ಎಲ್ಲರನ್ನು ಕೆಟ್ಟದಾಗಿ ನಿಂದಿಸಿ ವಾಹನದ ಮೇಲೆ ಆಕ್ರಮಣ ನಡೆಸಿದ್ದರು.



