ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಕನ್ನಡ ಪತ್ರಿಕಾ ದಿನಾಚರಣೆ ಜುಲೈ 1 ರಂದು ಕಾಸರಗೋಡು ಟ್ಯುಟೋರಿಯಲ್ ಕಾಲೇಜಿನ ಎಂ.ಗಂಗಾಧರ ಬಟ್ ವೇದಿಕೆಯಲ್ಲಿ ನಡೆಯಲಿದೆ.
ಸಮಾರಂಭವನ್ನು ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಉದ್ಘಾಟಿಸುವರು. ಪತ್ರಕರ್ತರ ಸಂಘದ ಅಧ್ಯಕ್ಷ ಅಚ್ಚುತ ಚೇವಾರ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಹಾಗೂ ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಟಿ.ಶಂಕರನಾರಾಯಣ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಸಭಾ ಕಾರ್ಯಕ್ರಮದ ಬಳಿಕ ಕನ್ನಡ ಪತ್ರಿಕೋದ್ಯಮ ನಡೆದುಬಂದ ದಾರಿ ಮತ್ತು ವರ್ತಮಾನ ವಿಷಯದ ಬಗ್ಗೆ ವಿಶೇಷೋಪನ್ಯಾಸ ನಡೆಯಲಿದೆ. ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಮತ್ತು ಕಾಸರಗೋಡು ಸರಕಾರಿ ಕಾಲೇಜಿನ ಉಪನ್ಯಾಸಕ ಡಾ.ರತ್ನಾಕರ ಮಲ್ಲಮೂಲೆ ಉಪನ್ಯಾಸ ನಡೆಸುವರು.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾ ಕನ್ನಡ ಮಾದ್ಯಮ ಪತ್ರಕರ್ತರ ಸಭೆ ಬುಧವಾರ ಕಾಸರಗೋಡು ಟ್ಯುಟೋರಿಯಲ್ ಕಾಲೇಜಿನಲ್ಲಿ ಅಧ್ಯಕ್ಷ ಅಚ್ಚುತ ಚೇವಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಟಿ.ಶಂಕರನಾರಾಯಣ ಭಟ್, ರಾಧಾಕೃಷ್ಣ ಕೆ.ಉಳಿಯತ್ತಡ್ಕ ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು. ಪತ್ರಕರ್ತರಾದ ಪ್ರದೀಪ್ ಕುಮಾರ್ ಬೇಕಲ್, ದೇವದಾಸ್ ಪಾರೆಕಟ್ಟೆ, ಸ್ಟೀಪನ್ ಕಯ್ಯಾರ್, ಸಾಯಿಭದ್ರಾ ರೈ ಸಿರಿಯ,ಬಾಲಕೃಷ್ಣ ಅಚ್ಚಾಯಿ ಮೊದಲಾದವರು ಉಪಸ್ಥಿತರಿದ್ದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಯಾದವ್ ತೆಕ್ಕೆಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ವಂದಿಸಿದರು.


