ಬದಿಯಡ್ಕ: ಬಾಲ್ಯಕಾಲದಲ್ಲಿ ಪರಂಪರೆಯ ಚರಿತ್ರೆಗಳನ್ನು ಅಭ್ಯಸಿಸುವಲ್ಲಿ ವಿದ್ಯಾರ್ಥಿಗಳು ಆಸಕ್ತರಾಗಬೇಕು. ಇದರಿಂದ ವರ್ತಮಾನಕಾಲದ ಬದಲಾವಣೆ ಅರಿತು ಉತ್ತಮ ಚರಿತ್ರೆ ಸೃಷ್ಟಿಸಲು ಸಾಧ್ಯ ಎಂದು ಸಾಹಿತಿ,ಚಿಂತಕ ರಾಜನ್ ಮುನಿಯೂರ್ ನುಡಿದರು.
ಅವರು ಪೆರಡಾಲ ಸರಕಾರಿ ಪ್ರೌಢಶಾಲೆಯ ವಿವಿಧ ಕ್ಲಬ್ ಗಳನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಸುತ್ತಲಿನ ಪರಿಸರದ ವಿಚಾರಗಳು ಕಥಾವಸ್ತು ಆಗುವ ಬಗೆ ವಿವರಿಸಿ ತಾವು ಬರೆದ ಕಥೆ ಮಂಡಿಸಿದರು. ಪರಿಸರ ರಕ್ಷಣೆ ಮಕ್ಕಳ ಕರ್ತವ್ಯವಾಗಬೇಕಾದ ಅಗತ್ಯತೆ ವಿವರಿಸಿದರು. ಈ ಸಂದರ್ಭ ವಾಚನಾವಾರಾಚರಣೆ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮಕ್ಕಳ ಸಾಹಿತ್ಯಸೃಷ್ಟಿಯ "ಕಾಮನಬಿಲ್ಲು" ಹಸ್ತ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ರಾಜನ್ ಅವರು ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆಯಿತ್ತರು. ಚಂದ್ರಹಾಸ ನಂಬಿಯಾರ್, ಪ್ರಮೋದಕುಮಾರ್, ಲಿಬಿಜಾ, ಬಿಂದಿಯಾ ಶುಭಾಶಂಶನೆಗೈದರು. ಲಲಿತಾಂಬಾ,ರಿಶಾದ್, ಚಂದ್ರಶೇಖರ, ದಿವ್ಯಗಂಗಾ, ಬೀನಾ, ಜಯಲತಾ, ಶ್ರೀಧರ ಭಟ್ ಸಹಕರಿಸಿದರು. ಶಾಲಾ ಮುಖ್ಯಶಿಕ್ಷಕ ರಾಜಗೋಪಾಲ ಸ್ವಾಗತಿಸಿ, ಬಿಂದು ವಂದಿಸಿದರು. ಶ್ರೀಧರನ್ ಕಾರ್ಯಕ್ರಮ ನಿರೂಪಿಸಿದರು.


