ಕಾಸರಗೋಡು: ಮಳೆಗಾಲದಲ್ಲಿ ಹರಡುವ ಅಂಟುರೋಗಗಳ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಮತ್ತು ಜಲಸಂರಕ್ಷಣೆಯ ಭಾಗವಾಗಿ ಕಳೆದ ಎರಡು ತಿಂಗಳ ಅವಧಿಯಲ್ಲಿ ನೀಲೇಶ್ವರ ಬ್ಲಾಕ್ ಪಂಚಾಯತಿ ವ್ಯಾಪ್ತಿಯಲ್ಲಿ 78 ಕೆರೆಗಳ ನವೀಕರಣ ನಡೆದಿದೆ.
ತ್ರಿಕರಿಪುರ, ಚೆರುವತ್ತೂರು, ಪಿಲಿಕೋಡ್,ವಲಿಯಪರಂಬ, ಪಡನ್ನ, ಕಯ್ಯೂರು-ಚೀಮೇನಿ ಎಂಬ ಆರು ಗ್ರಾಮ ಪಂಚಾಯತಿ ಗಳ ಸಾರ್ವಜನಿಕ ಕೆರೆಗಳನ್ನು ನವೀಕರಣ ಮಾಡಲಾಗಿದೆ.
ನವೀಕರಣದ ಪೂರ್ಣವೆಚ್ಚ ವಹಿಸಿದ್ದು ಆಯಾ ಗ್ರಾಮಪಂಚಾಯತಿಗಳಾಗಿದ್ದರೂ, ಬೇಕಾದ ಎಲ್ಲ ಸಲಹೆ, ಸೂಚನೆನೀಡಿ ಜತೆಗಿದ್ದು, ನಡೆಸಿಕೊಟ್ಟದ್ದು ಬ್ಲಾಕ್ ಪಂಚಾಯತಿ ಆಗಿತ್ತು. ಮೇ ತಿಂಗಳಲ್ಲಿ 78 ಕರೆಗೆಗಳ ನವೀಕರಣ ಪೂರ್ತಿಗೊಂಡಿದೆ.
ಮಳೆಗಾಲದಲ್ಲಿ ಡೆಂಗೆ, ಚಿಕೂನ್ ಗುನ್ಯಾ ಸಹಿತ ಅಂಟುರೋಗಗಳ ಹೆಚ್ಚಳದ ಭೀತಿಯಿದೆ. ಈ ಹಿನ್ನೆಲೆಯಲ್ಲಿ ಅತೀವ ಜಾಗ್ರತೆಯ ಅಗತ್ಯವಿದೆ. ಬ್ಲೋಕ್ ವ್ಯಾಪ್ತಿಯಬಹುತೇಕ ಕೆರೆಗಳು ತೆಂಗಿನಮಡಲು,ಕಾಡುಸೊಪ್ಪು ಇತ್ಯಾದಿ ಬಿದ್ದು, ಬದಿಗಳಲ್ಲಿ ಪೊದೆ ಬೆಳೆದು ನೀರು ಮಲಿನಗೊಂಡು, ವಿನಾಶದ ಅಂಚಿನಲ್ಲಿದ್ದುವು. ನವೀಕರಣದ ಅಂಗವಾಗಿ ಅವನ್ನೆಲ್ಲ ತೆರವುಗೊಳಿಸಿ, ಶುಚೀಕರಣ ನಡೆಸಲಾಗಿದೆ. ಕೆರೆಯ ನೀರಿನಡಿಯ ಕೆಸರು ಹೂಳೆತ್ತಿ ಶುದ್ಧಗೊಳಿಸಲಾಗಿದೆ. ಅಗತ್ಯವಿದ್ದಲ್ಲಿ ಆವರಣಗೋಡೆ ಇತ್ಯಾದಿ ನಿರ್ಮಿಸಲಾಗಿದೆ.
ಇದೇ ವೇಳೆ ನೀಲೇಶ್ವರ ಬ್ಲಾಕ್ ವ್ಯಾಪ್ತಿಯ ಅನೇಕ ತೋಡು, ಚರಂಡಿಗಳ ಶುಚೀಕರಣವೂ ನಡೆದಿದೆ. ತ್ಯಾಜ್ಯಗಳನ್ನು, ಕೆಸರನ್ನು ತೆರವುಗೊಳಿಸಿ ನೀರಿನ ಹರಿಯುವಿಕೆಯನ್ನು ಸುಗಮಗೊಳಿಸಲಾಗಿದೆ. ಈ ಮೂಲಕ ಸೊಳ್ಳೆ ಸಂತಾನೋತ್ಪತ್ತಿ ತಡೆ ನಡೆಸಲಾಗಿದೆ. ಅಗತ್ಯವಿದ್ದಲ್ಲಿ ಬದಿಗೋಡೆಗಳನ್ನೂ ನಿರ್ಮಿಸಲಾಗಿದೆ.

