ಕಾಸರಗೋಡು: ರಾಜ್ಯದಲ್ಲಿ ಕಂಗೆಡಿಸಿದ ಮಹಾ ನೆರೆ ಹಾವಳಿಯಲ್ಲಿ ಮನೆ, ಆಸ್ತಿ ಸಹಿತ ಎಲ್ಲವನ್ನೂ ಕಳೆದುಕೊಂಡವರಿಗಾಗಿ ರಾಜ್ಯ ಸರಕಾರ ಜಾರಿಗೊಳಿಸಿದ ಕೇರ್ ಹೋಂ ಯೋಜನೆ ಜಿಲ್ಲೆಯಲ್ಲಿ ಪೂರ್ಣಗೊಂಡಿದೆ.
ಕಳೆದ ವರ್ಷ ಜನತೆಯನ್ನು ತಲ್ಲಣಗೊಳಿಸಿದ್ದ ನೆರೆ ಹಾವಳಿ ಕಾಸರಗೋಡು ಜಿಲ್ಲೆಗೆ ನೇರ ಪರಿಣಾಮಬೀರದೇ ಇದ್ದರೂ, ಬಿರುಸಿನ ಗಾಳಿಮಳೆಗೆ ಅಪಾರ ನಾಶ-ನಷ್ಟ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ 7 ಮಂದಿಗೆ ಕೇರ್ ಹೋಂ ಯೋಜನೆಯ ಪ್ರಕಾರ ಮನೆ ನಿರ್ಮಿಸಿ ನೀಡಲಾಗಿದೆ. ಈ 7 ಮನೆಗಳ ನಿರ್ಮಾಣವೂ ಈಗ ಪೂರ್ತಿಗೊಂಡಿದ್ದು, ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ.
ಕಾಸರಗೋಡು ತಾಲೂಕಿನಲ್ಲಿ ಎರಡು, ವೆಳ್ಳಿರಿಕುಂಡಿನಲ್ಲಿ 4, ಮಂಜೇಶ್ವರದಲ್ಲಿ ಒಂದು ಮನೆ ಈ ನಿಟ್ಟಿನಲ್ಲಿ ನಿರ್ಮಿಸಲಾಗಿದೆ. ಪ್ರತಿ ಮನೆ ತಲಾ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿವೆ. ಎರಡು ಮಲಗುವ ಕೋಣೆ, ಒಂದು ಹಾಲ್, ಅಡುಗೆಮನೆ ಸೇಋಇದಂತೆ 600 ಚದರ ಅಡಿ ವಿಸ್ತೀರ್ಣದ ಮನೆ ನಿರ್ಮಿಸಲಾಗಿದೆ. 4 ಲಕ್ಷ ರೂ. ಕೇರ್ ಹೋಂ ಯೋಜನೆ ಪ್ರಕಾರ, ಒಂದು ಲಕ್ಷ ರೂ. ಮುಖ್ಯಮಂತ್ರಿ ದುರಂತ ಪರಿಹಾರ ನಿಧಿಯಿಂದ ಲಭಿಸಿದೆ. ಆಯಾ ವಲಯಗಳ ಸಹಕಾರಿ ಸಂಘಗಳ ಮೇಲ್ನೋಟದಲ್ಲಿ ಜನಪರ ಸಮಿತಿಗಳು ನಿರ್ಮಾಣದ ಹೊಣೆ ವಹಿಸಿಕೊಂಡಿದ್ದುವು.
ಜಾನಕಿಯಮ್ಮನಿಗೆ ಇದು ಹೊಸ ಬದುಕು:
ಗಾಳಿಮಳೆಯ ರಭಸದಲ್ಲಿ ಎಲ್ಲವನ್ನೂ ಕಳೆದುಕೊಂಡ ಜಾನಕಿಯಮ್ಮನ ಬದುಕಿನಲ್ಲಿ ಕೇರ್ ಹೋಂ ಯೋಜನೆಯ ಮೂಲಕ ಹೊಸ ನಿರೀಕ್ಷೆ ಮೂಡಿದೆ.
ಕಣ್ಣಮುಂದೆಯೇ ಸರ್ವನಾಶವನ್ನು ಕಂಡ ಈ ವಯೋವೃದ್ಧೆ ತದನಂತರದ ದಿನಗಳಲ್ಲಿ ತಾತ್ಕಾಲಿಕ ಶೆಡ್ ನಲ್ಲಿ ಮಕ್ಕಳೊಂದಿಗೆ ದುರಂತಮಯ ಬದುಕನ್ನು ಸವೆಸುತ್ತಿದ್ದರು. ಮುಂದೇನು ಎಂಬುದು ಬಲುದೊಡ್ಡ ಪ್ರಶ್ನೆಯಾಗಿತ್ತು. ಈ ಸಂದರ್ಭ ರಾಜ್ಯ ಸರಕಾರ ಕಂಗೆಟ್ಟ ಇವರ ಕೈಹಿಡಿದು ಬದುಕಿಗೆ ಹೊಸ ದಿಶೆ ತೋರಿದೆ. ಕೇರ್ ಹೋಂ ಯೋಜನೆ ಮೂಲಕ ವೆಳ್ಳರಿಕುಂಡ್ ತಾಲೂಕಿನ ಅಯ್ಯನ್ ಕಾವಿಲ್ ಎಂಬಲ್ಲಿನ ಮಾವುಂಗಾಲ್ ನಲ್ಲಿ ಮನೆ ನಿರ್ಮಾಣವಾಗಿದೆ.
ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಬಿರುಸಿನ ಗಾಳಿಮಳೆಗೆ ಇವರ ಮನೆ ಧರಾಶಾಯಿಯಾಗಿತ್ತು. ಗುಡ್ಡದ ಮೇಲೆ 9 ಸೆಂಟ್ಸ್ ಜಾಗದಲ್ಲಿ ಸರಿಸುಮಾರು 30ವರ್ಷ ಹಿಂದಿನ ಹೆಂಚಿನಮನೆ ಕುಸಿದುಬಿದ್ದಿತ್ತು. ಈ ಮನೆಗೆ ಸರಿಯಾದ ದಾರಿಯೂ ಇರಲಿಲ್ಲ. ರಭಸದಲ್ಲಿ ನೀರು ಹರಿಯುವ ತೊರೆ ದಾಟಿಕೊಂಡು ಈ ಮನೆಗೆ ತೆರಳುವ ದುಸ್ಥಿತಿಯಿತ್ತು.
ಕಳೆದ ಜನವರಿಯಲ್ಲಿ ಆರಂಭಿಸಲಾದ ನೂತನ ಮನೆಯ ನಿರ್ಮಾಣ ನಿರೀಕ್ಷೆಗೂ ಮೀರಿ ತ್ವರಿತಗತಿಯಲ್ಲಿ ನಡೆದಿದೆ. ಸಹಕಾರಿ ಸಂಘಗಳ ಮೇಲ್ನೋಟದಲ್ಲಿ ನಿರ್ಮಾಣ ನಡೆದಿದೆ. ಸುಭದ್ರವಾದ ನಿವಾಸದಲ್ಲಿ, ನೆಮ್ಮದಿಯ ವಾತಾವರಣದಲ್ಲಿ ಜಾನಕಿಯಮ್ಮ ಸರಕಾರಕ್ಕೆ ಮುಕ್ತ ಅಭಿನಂದನೆ ಸಲ್ಲಿಸುತ್ತಿದ್ದಾರೆ.

