ಮಂಜೇಶ್ವರ: ಹಿರಿಯ ರಂಗಕರ್ಮಿ, ಸಾಹಿತಿ ಡಾ.ಡಿ.ಕೆ.ಚೌಟರ ನಿಧನದ ಹಿನ್ನೆಲೆಯಲ್ಲಿ ಕೇರಳ ತುಳು ಅಕಾಡೆಮಿ ಹಾಗೂ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ನೇತೃತ್ವದಲ್ಲಿ ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಗಿಳಿವಿಂಡು ಆವರಣದಲ್ಲಿ ಬುಧವಾರ ಸಂಜೆ ಶ್ರದ್ದಾಂಜಲಿ ಸಭೆ ನಡೆಯಿತು.
ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಅವರ ಅಧ್ಯಕ್ಷತೆಯಲ್ಲಿ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಮಂಜೇಶ್ವರ ಬ್ಲಾ.ಪಂ.ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಅವರು, ದಿ.ಚೌಟರು ತಮ್ಮ ಬಹುಮುಖ ಪ್ರತಿಭೆಯ ಮೂಲಕ ಗಡಿನಾಡಿನ ಕೀರ್ತಿಯನ್ನು ಎತ್ತರಕ್ಕೆ ಒಯ್ದ ವಿಶಿಷ್ಟ ವ್ಯಕ್ತಿತ್ವದವರಾಗಿದ್ದರು ಎಂದು ನೆನಪಿಸಿದರು. ಪೂರ್ವಭಾವೀ ಸಿದ್ದತೆಗಳ ಕಾರ್ಯಸೂಚಿ, ಸರಳ ವ್ಯಕ್ತಿತ್ವಗಳಿಂದ ಜನಮಾನಸದಲ್ಲಿ ಪ್ರಭಾವೀ ವ್ಯಕ್ತಿಯಾಗಿದ್ದ ಚೌಟರ ಅಧ್ಯಯನಶೀಲತೆ ಪ್ರಸಿದ್ದಿಯನ್ನು ಪಡೆಯುವಲ್ಲಿ ಸಹಕಾರಿಯಾಯಿತು. ಗೋವಿಂದ ಪೈಗಳ ನಿವಾಸವನ್ನು ಸಂರಕ್ಷಿಸುವಲ್ಲಿ ಅವರು ಸಲ್ಲಿಸಿದ ಕೊಡುಗೆಗಳಿಂದ ಇಮದು ಭವ್ಯವಾಗಿ ತೆಲೆಯೆತ್ತಿನಿಂತಿದೆ ಎಂದು ಅವರು ನೆನಪಿಸಿದರು.
ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್, ಸಾಮಾಜಿಕ ಕಾರ್ಯಕರ್ತ ಬಿ.ವಿ.ರಾಜನ್, ಹರಿಶ್ಚಂದ್ರ ಮಂಜೇಶ್ವರ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶನ್, ವ್ಯಾಪಾರಿ ವ್ಯವಸಾಯಿ ನೇತಾರ ಬಶೀರ್, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸಂಕಬೈಲು ಸತೀಶ ಅಡಪ ಮೊದಲಾದವರು ನುಡಿ ನಮನಗಳನ್ನು ಸಲ್ಲಿಸಿ ಮಾತನಾಡಿದರು.
ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಕೆ.ಆರ್.ಜಯಾನಂದ ಸ್ವಾಗತಿಸಿ, ಆಡಳಿತಾಧಿಕಾರಿ ಡಾ.ಕೆ.ಕಮಲಾಕ್ಷ ವಂದಿಸಿದರು. ನೂರಾರು ಮಂದಿ ಭಾಗವಹಿಸಿದ್ದರು.


