ಕುಂಬಳೆ: ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಕುಂಬಳೆ ರೈಲ್ವೇ ನಿಲ್ದಾಣ ಬಳಿಯಲ್ಲಿ ಇತ್ತೀಚೆಗೆ ನೂತನವಾಗಿ ನಿರ್ಮಿಸಿದ ಕೆಳ ಸೇತುವೆಯಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಸೇತುವೆಯ ಕೆಳಭಾಗದಲ್ಲಿ ನೀರು ಹೋಗದೆ ವಾಹನ ಸಂಚಾರಕ್ಕೆ ಹಾಗು ಪಾದಚಾರಿಗಳಿಗೆ ಹೋಗಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು.
ಈ ಬಗ್ಗೆ ನಾಗರಿಕರು ಗ್ರಾ.ಪಂ. ಸದಸ್ಯ ಕೆ.ಸುಧಾಕರ ಕಾಮತ್ ಅವರ ಗಮನಕ್ಕೆ ತಂದಿದ್ದು, ಕೂಡಲೇ ಸ್ಪಂದಿಸಿದ ಸದಸ್ಯರು ನಾಗರಿಕರನ್ನು ಸೇರಿಸಿಕೊಂಡು ಸಮಸ್ಯೆಯನ್ನು ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಜೆಸಿಬಿ ಮುಖಾಂತರ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವುಮಾಡಿದರು. ಜೊತೆಗೆ ಸೇತುವೆಯ ಕೆಳಭಾಗದಲ್ಲಿ ನಿಂತ ನೀರನ್ನು ಗ್ರಾಮ ಪಂಚಾಯತಿ ಸದಸ್ಯರ ನೇತೃತ್ವದಲ್ಲಿ ರಿಕ್ಷಾ ಚಾಲಕರು ಹಾಗು ನಾಗರಿಕರು ಸ್ವಚ್ಛಗೊಳಿಸಿದರು. ಚರಂಡಿಯನ್ನು ಶುಚಿಗೊಳಿಸಿ ಸಮಸ್ಯೆಯನ್ನು ಸರಿಪಡಿಸಲಾಯಿತು.ಸ್ಥಳೀಯರ ಸಮಸ್ಯೆಗೆ ಕೊಡಲೇ ಸ್ಪಂದಿಸಿದ ಗ್ರಾಮ ಪಂಚಾಯತಿ ಸದಸ್ಯ ಕೆ.ಸುಧಾಕರ ಕಾಮತ್ ಅವರು ಸ್ಥಳೀಯರ ಪ್ರಶಂಸೆಗೆ ಪಾತ್ರರಾದರು.


