ಬದಿಯಡ್ಕ: ಶಾಲಾ ಪ್ರಾರಂಭದಿಂದಲೇ ಯೋಗಶಿಕ್ಷಣವನ್ನು ಪಠ್ಯದ ಭಾಗವಾಗಿ ಅಳವಡಿಸಿಕೊಂಡಿರುವ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಯೋಗದಿನಾಚರಣೆಯಂದು 1ನೇ ತರಗತಿಯಿಂದ 10ನೇ ತರಗತಿಯ ತನಕದ ಎಲ್ಲಾ ವಿದ್ಯಾರ್ಥಿಗಳೂ ಸಾಂಘಿಕವಾಗಿ ಹಾಗೂ ವಿಭಾಗಶಃ ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸುವುದರೊಂದಿಗೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಡಾ. ಬೇ.ಸೀ.ಗೋಪಾಲಕೃಷ್ಣ ಭಟ್ ಅವರು ಮುಖ್ಯ ಅತಿಥಿಯಾಗಿ ಯೋಗದ ಕುರಿತು ಮಾತನಾಡಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ್ ಪೈ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಯೋಗ ಅಧ್ಯಾಪಿಕೆ ರಾಜೇಶ್ವರಿ, ಹಿರಿಯ ಪ್ರಾಥಮಿಕ ವಿಭಾಗದ ಅಧ್ಯಾಪಕ ವಿನಯ ಪಾಲ್ ಹಾಗೂ ಪ್ರೌಢ ವಿಭಾಗದ ಅಧ್ಯಾಪಿಕೆ ಮಮತಾ ಸಾವಿತ್ರಿ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದರು. 9ನೇ ತರಗತಿಯ ಅನನ್ಯಾ ಪೆರ್ಮುಖ ಸ್ವಾಗತಿಸಿ, ಅವ್ಯಯ ಸುಧಾ ಸಿ.ಎಚ್. ವಂದಿಸಿದರು.


