.
ಇಂದಿನ ಮೂರು ಟಿಪ್ಪಣಿಗಳು ಇಲ್ಲಿವೆ.
1. ಚಕಾರ ಎತ್ತದೆ ಮತ್ತು ಚಾಚೂ ತಪ್ಪದೆ...
*ಚಕಾರ ಶಬ್ದ ಎತ್ತಲಿಲ್ಲ", ಅಥವಾ, *ಚಕಾರವೆತ್ತಲಿಲ್ಲ" ಎಂಬ ಬಳಕೆ ಇದೆ. ತನ್ನ ಮುಂದೆಯೇ ಚರ್ಚೆ ಎಷ್ಟು ನಡೆದರೂ, ಅದು ತನ್ನನ್ನೇ ಕುರಿತಿದ್ದರೂ, ಏನೊಂದೂ ಮಾತಾಡಲಿಲ್ಲ, ಉತ್ತರ ಕೊಡಲಿಲ್ಲ ಎನ್ನುವುದು ತಾತ್ಪರ್ಯ. ಸಂಸ್ಕೃತದಲ್ಲಿ *ಚ* ಎಂಬೊಂದು ಅವ್ಯಯವಿದೆ. ಅದರ ಸಾಮಾನ್ಯ ಅರ್ಥ *ಮತ್ತು* ಅಥವಾ *ಹಾಗೂ* (ಇಂಗ್ಲಿಷ್‍ನ and). *ಅಹಂ ಚ ತ್ವಂ ಚ" ಅಂದರೆ *ನಾನು ಮತ್ತು ನೀನು" ಎಂದು. ಆದರೆ ಈ ಚ ಅವ್ಯಯವನ್ನು ಸಂಸ್ಕೃತ ಸಾಹಿತ್ಯದಲ್ಲಿ ಬೇರೆಬೇರೆ ಅರ್ಥಗಳಲ್ಲಿ, ಕೆಲವೊಮ್ಮೆ ಏನೂ ಅರ್ಥವಿಲ್ಲದೆ ಶ್ಲೋಕಗಳಲ್ಲಿ ಕಡಿಮೆ ಬಿದ್ದ ಮಾತ್ರೆಗಳನ್ನು ಭರ್ತಿ ಮಾಡುವುದಕ್ಕೂ ಉಪಯೋಗಿಸುವುದಿದೆ. ಚ ಅವ್ಯಯವು ಪಡೆದ ಬೇರೆಬೇರೆ ಅರ್ಥಗಳಲ್ಲಿ *ಯಾರಾದರೊಬ್ಬರ ಹೇಳಿಕೆಯನ್ನು ಆಕ್ಷೇಪಿಸುವುದು, ತಕರಾರು ಎತ್ತುವುದು, ಅಥವಾ ತಿದ್ದುಪಡಿ ಮಾಡುವುದು" ಕೂಡ ಸೇರಿದೆ. *ಅಪಿ ಚ", *ಕಿಂ ಚ" ಎಂದರೆ "ಅದೇನೋ ಹೌದು ಆದರೆ..." ಎಂದು ಕ್ಯಾತೆ ತೆಗೆದಂತೆ. ಹೀಗೆ *ಚಕಾರ* ಎಂದರೆ ಚ ಅಕ್ಷರ ಎಂತಲೂ, ಸೌಮ್ಯವಾದ ವಿರೋಧ ಎಂತಲೂ ಅರ್ಥವಾಗುತ್ತದೆ. ಚಕಾರವೆತ್ತಲಿಲ್ಲ ಎಂದರೆ ಒಂದೇ ಅಕ್ಷರದಲ್ಲಿ ಕೂಡ ಅಲ್ಲಗಳೆಯಲಿಲ್ಲ ಎಂದು ಅರ್ಥ.
ಸಂಸ್ಕೃತದಲ್ಲಿ *ಚ*ದ ಹಾಗೆಯೇ *ತು* ಎಂಬ ಅವ್ಯಯವೂ ಇದೆ. ಅದಕ್ಕೆ ಸಾಮಾನ್ಯ ಅರ್ಥ *ಅಂತೂ* (ಅಹಂ ತು = ನಾನಂತೂ). ಆದರೆ ವಿಶೇಷ ಅರ್ಥವೇನೂ ಇಲ್ಲದೆ, ಶ್ಲೋಕದಲ್ಲಿ ಅಕ್ಷರ ಭರ್ತಿಗಾಗಿ (ಮಾತ್ರೆಗಳ ಟ್ಯಾಲಿ ಆಗುವುದಕ್ಕೆ) ಬಳಸುವುದೂ ಇದೆ. ಹೀಗೆ ಬಳಸುವ ಇತರ ಅವ್ಯಯಗಳೆಂದರೆ *ವೈ* ( = ನಿಜಕ್ಕೂ), ಮತ್ತು *ಹಿ* ( = ಅಂತೆ). ಒಟ್ಟಿನಲ್ಲಿ ಚ, ವೈ, ತು, ಹಿ ಇತ್ಯಾದಿ ಅವ್ಯಯಗಳು ಅರ್ಥವನ್ನು ವ್ಯತ್ಯಾಸಪಡಿಸುವುದಿಲ್ಲ, ಅವುಗಳಿಗೆ ಮಹತ್ತ್ವವಿಲ್ಲ. ಆದ್ದರಿಂದ *ಚ - ತು ತಪ್ಪದೆ ಎಲ್ಲವನ್ನೂ ಹೇಳಿದ" ಎಂದರೆ ಮುಖ್ಯ ಅಮುಖ್ಯ ಎಂದು ಎಣಿಸದೆ ಇದ್ದದ್ದು ಇದ್ದಂತೆ ಎಲ್ಲವನ್ನೂ ಹೇಳಿದನೆಂದು ಅರ್ಥ. ಸಂಸ್ಕೃತದ *ಚ - ತು* ಎಂಬವು ಸಾಮಾನ್ಯರ ಬಾಯಿಯಲ್ಲಿ *ಚ - ಚು* ಆಗಿ ಕಾಲಕ್ರಮೇಣ *ಚಾ-ಚೂ* ಆಯ್ತು.
ಇದಿಷ್ಟನ್ನು ದಿ.ಪಾ.ವೆಂ.ಆಚಾರ್ಯರ ಪದದಂಗಡಿಯಿಂದ ಕಡ ತೆಗೆದುಕೊಂಡಿರುವುದು. *ಚ ವೈ ತು ಹಿ* ಅವ್ಯಯಗಳ ಬಗ್ಗೆ ಪಾವೆಂ ಬರೆದಿರುವುದಕ್ಕೆ ಇನ್ನೂ ಒಂದು ಅಂಶವನ್ನು ಸೇರಿಸುವುದಾದರೆ- ಈ ಅವ್ಯಯಗಳು ಇಸ್ಪೀಟ್ ಎಲೆಗಳ ಪ್ಯಾಕ್‍ನಲ್ಲಿರುವ ಜೋಕರ್‍ಗಳಂತೆ. ಬೆಲೆ ಇದೆಯಂತಾದ್ರೆ ಇದೆ, ಇಲ್ಲ ಅಂತಾದ್ರೆ ಇಲ್ಲ. ಎಲ್ಲಿಯೂ ಸಲ್ಲುತ್ತವೆ.
*ಚಾಚೂ ತಪ್ಪದೆ* ಎಂಬ ಪದಬಳಕೆ ಹೇಗೆ ಬಂತು ಎಂದು ಸ್ವಚ್ಛ ಭಾಷೆ ಕಲಿಕೆ ಸರಣಿಯಲ್ಲಿ ಸಹಪಾಠಿಯಾಗಿರುವವರೊಬ್ಬರು ಪ್ರಶ್ನೆ ಕೇಳಿದ್ದರಿಂದ ಈ ಟಿಪ್ಪಣಿ.
====
2. *ಮರ್ರೆ*ಗಿಂತ *ಮಾರ್ರೆ* ಸ್ವಲ್ಪವಾದರೂ ಹೆಚ್ಚು ಸಮಂಜಸ
*ಡಿಸ್ಚಾರ್ಜ್ ಆದೆ ಮರ್ರೆ, ಒಬ್ಬಳೇಒಬ್ಳು ನರ್ಸ್ ಕೂಡ ಇಲ್ಲದ ಆಸ್ಪತ್ರೇಲಿ ಇನ್ನೆಷ್ಟು ದಿನ ಇರೋಕ್ ಸಾಧ್ಯ!" ಎಂಬಂಥ ತಮಾಷೆಯ ಸ್ಟೇಟಸ್‍ಗಳಲ್ಲಿ, *ಪೇಂಟಿಂಗ್ ಅಲ್ಲ ಮರ್ರೆ, ನಾನೇ ನನ್ನ ಕೈಯಾರೆ ನನ್ನದೇ ಮೊಬೈಲಿನಿಂದ ತೆಗೆದ ಫೋಟೊ ಇದು!" ಎಂಬಂಥ ಸ್ಪಷ್ಟೀಕರಣ ಕಾಮೆಂಟ್‍ಗಳಲ್ಲಿ, *ಅಬ್ಬಾ! ಎಂತ ಮಳೆ ಮರ್ರೆ!" ಎಂಬ ಆಶ್ಚರ್ಯೋದ್ಗಾರಗಳಲ್ಲಿ, *ನಿಮ್ದು ಎಂಥ ಊರು ಮರ್ರೆ ಸರಿಯಾಗಿ ಮೊಬೈಲ್ ಸಿಗ್ನಲ್ ಸಿಕ್ತಿಲ್ಲ..." ಎಂಬ ಗೊಣಗಾಟಗಳಲ್ಲಿ ಕಂಡುಬರುವ *ಮರ್ರೆ* ಪದವನ್ನು ನೀವು ಗಮನಿಸಿರಬಹುದು. ಫೇಸ್‍ಬುಕ್‍ನಲ್ಲಂತೂ *ಕಣ್ರೀ*ಯಂತೆ ಎಲ್ಲೆಂದರಲ್ಲಿ ಕಾಣಸಿಗುವ ಪದ ಈ *ಮರ್ರೆ*. ಆತ್ಮೀಯತೆಯ ಲೇಪವುಳ್ಳ ಗೌರವಯುಕ್ತ ಸಂಬೋಧನೆ ಅದು. ಏನೂ ತಪ್ಪಿಲ್ಲ.
ಆದರೆ *ಮರ್ರೆ* ಈಗೀಗ ಆಡುಭಾಷೆಯಲ್ಲಿನ ಬಳಕೆಯಿಂದ ಮುನ್ನಡೆದು ಶಿಷ್ಟ ಬರವಣಿಗೆಯಲ್ಲೂ ಕಾಣಿಸಿಕೊಳ್ಳಲಾರಂಭಿಸಿದೆಯಾದ್ದರಿಂದ ಈ ಟಿಪ್ಪಣಿ. *ಮರ್ರೆ*ಯ ಮೂಲವನ್ನು ತಿಳಿಸುವ ಪ್ರಯತ್ನ.
*ರಾಜ* ಎಂಬ ಸಂಸ್ಕೃತ ಪದದ ತದ್ಭವ ರೂಪವೇ *ರಾಯ*. *ಬರುಬರುತ್ತಾ ರಾಯನ ಕುದುರೆ ಕತ್ತೆ ಆಯ್ತು" ಎಂಬಲ್ಲಿನ ರಾಯ, *ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು..." ಎಂಬಲ್ಲಿರುವ ರಾಯ, *ರಾಘವೇಂದ್ರರಾಯರ ಪಾದಾಂಬುಜದಾರಾಧಕರ ಕೊಂಡಾಡಿರೋ..." ಎಂಬಲ್ಲಿರುವ ರಾಯ... ಎಲ್ಲ ಅದೇ- *ರಾಜ*ನ ತದ್ಭವ. ರಾಜನಿಗೆ ಕೊಟ್ಟಷ್ಟು ಗೌರವ ಕೊಡುವ ಸಂದರ್ಭಗಳಲ್ಲೆಲ್ಲ *ರಾಯ* ಬಳಕೆ.
ರಾಜನಿಗೆ ಕೊಡುವ ಗೌರವ ಇನ್ನೂ ಹೆಚ್ಚಾದರೆ *ಮಹಾರಾಜ* ಎನ್ನುತ್ತೇವೆ. ಇಲ್ಲಿ *ರಾಜ*ನ ಬದಲಿಗೆ *ರಾಯ*ನನ್ನು ತಂದರೆ *ಮಹಾರಾಯ* ಆಗುತ್ತದಾದರೂ ಒಂದು ಸಂಸ್ಕೃತ ಪದದೊಂದಿಗೆ ಇನ್ನೊಂದು ತದ್ಭವ ಪದವನ್ನು ಜೋಡಿಸುವ ಕ್ರಮ ಅಷ್ಟು ಒಳ್ಳೆಯದಲ್ಲ (ಅದಕ್ಕೆ *ಅರಿಸಮಾಸ* ಎನ್ನುತ್ತಾರೆ). ಅದಕ್ಕೋಸ್ಕರ, ದೇಸೀ ಸೊಗಡಿನಲ್ಲಿ *ಮಹಾನವಮಿ*ಯು *ಮಾರ್ಣಮಿ* ಆದಂತೆ, *ಮಹಾದೇವ*ನು *ಮಾದೇವ* ಆದಂತೆ *ಮಹಾರಾಜ*ನು *ಮಾರಾಯ* ಆಗುತ್ತಾನೆ.
ದಕ್ಷಿಣಕನ್ನಡ/ಉಡುಪಿ ಜಿಲ್ಲೆಗಳವರು ಪುಷ್ಕಳವಾಗಿ ಬಳಸುವ ಪದ *ಮಾರಾಯ*. ಗೌರವಯುಕ್ತ ಬಹುವಚನದಲ್ಲಾದರೆ *ಮಾರಾಯ್ರೆ*. ಕನ್ನಡದ ಖ್ಯಾತ ಹಾಸ್ಯಲೇಖಕಿ ಭುವನೇಶ್ವರಿ ಹೆಗಡೆಯವರು ಉತ್ತರಕನ್ನಡ ಜಿಲ್ಲೆಯಿಂದ ಮಂಗಳೂರಿಗೆ ಹೊಸದಾಗಿ ಬಂದಾಗ ಅವರನ್ನು ಸೆಳೆದದ್ದು *ಎಂಥದು ಮಾರಾಯ್ರೆ" ಎಂಬ ಬಳಕೆ. ಅದು ಅಲ್ಲಿ ತಿರಸ್ಕಾರ, ಮೆಚ್ಚುಗೆ, ಉದಾಸೀನ, ಆಸಕ್ತಿ, ಜುಗುಪ್ಸೆ, ಸ್ನೆ?ಹ ಮುಂತಾಗಿ ಬೇರೆಬೇರೆ ಭಾವನೆಗಳಿಗೂ ಒಂದೇ ಪದವಾಗಿ ಬಳಕೆಯಾಗುತ್ತದೆ. ಭುವನೇಶ್ವರಿಯವರಿಗೆ ಅದು ಎಷ್ಟು ಇಷ್ಟವಾಯ್ತೆಂದರೆ ತನ್ನದೊಂದು ಹಾಸ್ಯ ಕೃತಿಗೆ *ಎಂಥದು ಮಾರಾಯ್ರೆ" ಎಂದೇ ಹೆಸರಿಟ್ಟರು. ಮಾತ್ರವಲ್ಲ, ಆ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ, ಅತ್ತಿಮಬ್ಬೆ ಪ್ರತಿಷ್ಠಾನ ಬಹುಮಾನವನ್ನೂ ಪಡೆದರು!
*ಮಾರಾಯ್ರೆ* ಮಾತಿನಲ್ಲಿ ಇನ್ನಷ್ಟು ಹ್ರಸ್ವಗೊಂಡು *ಮಾರ್ರೆ* ಆಗುತ್ತದೆ. ಅದು ಅಷ್ಟಕ್ಕೆ ನಿಂತರೇನೇ ಚಂದ. ಮತ್ತಷ್ಟು ಹ್ರಸ್ವಗೊಳಿಸಿ *ಮರ್ರೆ* ಮಾಡಿದರೆ ಚನ್ನಾಗಿರೋದಿಲ್ಲ.
====
3. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು:
ಅ) ಉದಾಸೀನ ಸರಿ. ಉಪೇಕ್ಷೆಯಿಂದ ಕೂಡಿದ, ಯಾವ ಪ್ರಯತ್ನವೂ ಇಲ್ಲದ, ತಟಸ್ಥ ಎಂಬ ಅರ್ಥ. *ಉದಾಸಿನ* ಎಂದು ಬರೆದರೆ ತಪ್ಪು.
ಆ) ಆಧಿಪತ್ಯ ಸರಿ. ಪ್ರಭುತ್ವ, ಪ್ರಜಾಸಂರಕ್ಷಣಾದಿ ರಾಜನ ಕರ್ತವ್ಯ ಎಂಬ ಅರ್ಥ. ಅಧಿಪತಿಯು ಮಾಡುವಂಥದ್ದು -* ಆಧಿಪತ್ಯ. ಅದನ್ನು *ಅಧಿಪತ್ಯ* ಎಂದು ಬರೆಯುವುದು ತಪ್ಪು.
ಇ) ಆಲಂಕಾರಿಕ ಸರಿ. ಅಲಂಕಾರಕ್ಕೋಸ್ಕರ ಮಾಡಿದ್ದು. *ಅಲಂಕಾರ* ಪದಕ್ಕೆ *ಇಕ* ಪ್ರತ್ಯಯ ಸೇರಿದಾಗ ಮೊದಲ ಅಕ್ಷರವು ಹ್ರಸ್ವವಿದ್ದದ್ದು ದೀರ್ಘವಾಗುತ್ತದೆ. ಆದ್ದರಿಂದ *ಅಲಂಕಾರಿಕ* ಎಂದು ಬರೆದರೆ ತಪ್ಪು, ಆಲಂಕಾರಿಕ ಎಂದು ಬರೆಯಬೇಕು. (ಸಮಾಜ -* ಸಾಮಾಜಿಕ; ಸಮೂಹ -* ಸಾಮೂಹಿಕ; ಧರ್ಮ -* ಧಾರ್ಮಿಕ ಇತ್ಯಾದಿಯಂತೆ ಅಲಂಕಾರ -* ಆಲಂಕಾರಿಕ).
ಈ) ನಿಷ್ಠುರ ಸರಿ. ಕಠಿಣವಾದ, ಒರಟಾದ, ದಯೆಯಿಲ್ಲದ, ತಿರಸ್ಕರಿಸುವ ಮುಂತಾದ ಅರ್ಥಗಳಲ್ಲಿ ಬಳಕೆ. ಅದನ್ನು ಅಲ್ಪಪ್ರಾಣ ಟ ಒತ್ತಕ್ಷರ ಬಳಸಿ *ನಿಷ್ಟುರ* ಎಂದು ಬರೆದರೆ ತಪ್ಪು.
ಉ) ಪುರಂದರ ಸರಿ. ವಿಷ್ಣು ಎಂಬ ಅರ್ಥ. ಈ ಪದಕ್ಕೆ ಇಂದ್ರ, ಪರಮೇಶ್ವರ ಮುಂತಾದ ಅರ್ಥಗಳೂ, ಕಳ್ಳ ಎಂಬ ಇನ್ನೊಂದು ಅರ್ಥವೂ ಇದೆ! ಅದೇನಿದ್ದರೂ *ಪುರಂಧರ* ಎಂದು ಬಾಲ ಕೊಟ್ಟು ಬರೆಯುವುದು ತಪ್ಪು. ಪುರಂದರದಾಸರಿಗೂ ಇಷ್ಟವಾಗುವುದಿಲ್ಲ.
ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.
FEEDBACK: samarasasudhi@gmail.com