ಉಪ್ಪಳ: ಪೈವಳಿಕೆ ಗ್ರಾ.ಪಂ. ವ್ಯಾಪ್ತಿಯ 15ನೇ ವಾರ್ಡ್ ಆಗಿರುವ ಕಲ್ಲಾಪುನಾರ್-ಪೊನ್ನೆತ್ತೋಡು ಗ್ರಾಮೀಣ ರಸ್ತೆಯ ಡಾಮರೀಕರಣ ಕಾಮಗಾರಿ ಆರಂಭಗೊಂಡು ಏಕಾಏಕಿ ಹಲವು ಕಾರಣಗಳಿಂದ ಮೊಟಕುಗೊಂಡು ಇದೀಗ ವ್ಯಾಪಕ ಸಮಸ್ಯೆಗಳಿಗೆ ಕಾರಣವಾದ ಘಟನೆ ಬೆಳಕಿಗೆ ಬಂದಿದೆ.
ಪೈವಳಿಕೆ ಗ್ರಾ.ಪಂ. ವ್ಯಾಪ್ತಿಯ ಇಲ್ಲಿಯ ಸುಮಾರು ಮೂರು ಕಿಲೋಮೀಟರ್ ರಸ್ತೆಯ ಡಾಮರೀಕರಣಕ್ಕೆ 4 ಲಕ್ಷ ರೂ.ಗಳ ಮೊತ್ತ ಮೀಸಲಿರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ತಿಂಗಳಾಂತ್ಯದಲ್ಲಿ ಡಾಮರೀಕರಣ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗಿತ್ತು. ಮೊದಲ ಹಂತದಲ್ಲಿ ರಸ್ತೆಯನ್ನು ಅಗೆದು ಜಲ್ಲಿಕಲ್ಲುಗಳನ್ನು ಹಾಕಲಾಗಿದ್ದು, ಈ ಸಂದರ್ಭ ಗ್ರಾ.ಪಂ. ಅಧಿಕಾರಿಗಳೇ ಆಗಮಿಸಿ ತಡೆಯೊಡ್ಡಿದ ಘಟನೆ ನಡೆಯಿತು. ಆ ಬಳಿಕ ಕಾಮಗಾರಿ ಮುಂದುವರಿಯದೆ ಬಾಕಿ ಉಳಿದಿದ್ದು, ರಸ್ತೆಗಳಲ್ಲಿ ಹಾಕಲಾದ ಜಲ್ಲಿಕಲ್ಲುಗಳಿಂದ ಕಾಲ್ನಡಿಗೆಯ ಪ್ರಯಾಣ ಸಹಿತ ವಾಹನಗಳ ಮೂಲಕ ತೆರಳಲು ಅಸಾಧ್ಯವಾಗಿ ಇದೀಗ ಜನರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. 25 ವರ್ಷಗಳಿಗಿಂತಲೂ ಹಳೆಯದಾದ ಈ ರಸ್ತೆಯನ್ನು ಆಶ್ರಯಿಸಿ 20ಕ್ಕಿಂತಲೂ ಮಿಕ್ಕಿದ ಕುಟುಂಬಗಳು ಆಶ್ರಯಿಸಿವೆ. ವೃದ್ದರು, ಮಹಿಳೆಯರು, ಮಕ್ಕಳು ಇದೀಗ ರಸ್ತೆ ಪ್ರಯಾಣ ಅಸಾಧ್ಯವಾಗಿರುವುದರಿಂದ ದಿಕ್ಕು ತೋಚದವರಾಗಿದ್ದಾರೆ. ಪರ್ಯಾಯ ರಸ್ತೆ ವ್ಯವಸ್ಥೆಯೂ ಇಲ್ಲದೆ ತೀವ್ರ ಸಂಕಷ್ಟದಲ್ಲಿದ್ದಾರೆ.
ಏನಾಗಿತ್ತು-
ಈ ರಸ್ತೆ ಡಾಮರೀಕರಣ ಕಾಮಗಾರಿ ಮೊಟಕುಗೊಳ್ಳಲು ಸ್ಥಳೀಯ ನಿವಾಸಿಯೋರ್ವ ಕಾರಣ ಎಂದು ತಿಳಿದುಬಂದಿದೆ. ಡಾಮರೀಕರಣಕ್ಕಾಗಿ ಜಲ್ಲಿಕಲ್ಲುಗಳನ್ನು ರಸ್ತೆಗೆ ಹರಡಿದ ಬಳಿಕ ಇಲ್ಲಿಯ ಸ್ಥಳೀಯ ಪ.ವಿಭಾಗ ವಿಭಾಗಕ್ಕೆ ಸೇರಿದ ವ್ಯಕ್ತಿಯೋರ್ವ ರಸ್ತೆ ಡಾಮರೀಕರಣಕ್ಕೆ ಗ್ರಾ.ಪಂ. ಅಧಿಕೃತರಿಗೆ, ಪ.ವಿಭಾಗದ ಮೇಲಧಿಕಾರಿಗಳಿಗೆ ದೂರು ನೀಡಿ ತಡೆಯೊಡ್ಡಿದ. ತನ್ನ ಖಾಸಗೀ ಭೂಮಿಯಲ್ಲಿ ರಸ್ತೆ ಡಾಮರೀಕರಣಕ್ಕೆ ಆಸ್ಪದ ನೀಡೆನು ಎಂದು ವ್ಯಕ್ತಿ ದೂರಿದ್ದು, ಈ ಕಾರಣದಿಂದ ಗ್ರಾ.ಪಂ. ಅಧಿಕೃತರು, ಪ.ವರ್ಗದ ಜಿಲ್ಲಾ ಕಾರ್ಯಾಲಯದ ಸೂಚನೆಯಂತೆ ತಾತ್ಕಾಲಿಕವಾಗಿ ಕಾಮಗಾರಿ ನಿಲ್ಲಿಸಲು ಆದೇಶಿಸಿರುವುದಾಗಿ ತಿಳಿದುಬಂದಿದೆ. ಆದರೆ ಆ ಬಳಿಕ ಗ್ರಾ.ಪಂ. ಅಧಿಕೃತರು ಈ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದು ಕಳೆದ ಮೂರು ತಿಂಗಳಿಂದ ಸ್ಥಳೀಯ ಜನಸಾಮಾನ್ಯರ ಸಂಕಷ್ಟಕ್ಕೆ ಕಾರಣವಾಗಿದೆ.
ಇನ್ನಾದರೂ ಗ್ರಾ.ಪಂ.ಅಧಿಕೃತರು ಈ ರಸ್ತೆಯ ಡಾಮರೀಕರಣ ಕಾಮಗಾರಿಯನ್ನು ಪೂರ್ಣಗೊಳಿಸುವಲ್ಲಿ ಈಗ ಎದುರಾಗಿರುವ ದೂರುಗಳನ್ನು ನಿವಾಳಿಸಿ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯರು ವಿನಂತಿಸಿದ್ದಾರೆ.
ಅಭಿಮತ:ಏನಂತಾರೆ:
ಗ್ರಾಮೀಣ ಪ್ರದೇಶದ ಈ ರಸ್ತೆಯ ಡಾಮರೀಕರಣವನ್ನು ವ್ಯಕ್ತಿಯೋರ್ವನ ದೂರಿನ ಮೇರೆಗೆ ಗ್ರಾ.ಪಂ.ಅಧಿಕೃತರು ತಡೆಹಿಡಿದಿರುವರು. ಆದರೆ ಆ ಬಳಿಕ ತಾನು ಈ ಬಗ್ಗೆ ಹಲವು ಬಾರಿ ಗ್ರಾ.ಪಂ.ಅಧಿಕಾರಿಗಳಲ್ಲಿ ಆಡಳಿತ ಮಂಡಳಿಯಲ್ಲಿ ಸಮಸ್ಯೆ ಪರಿಹಾರಕ್ಕೆ ವಿನಂತಿಸಿದ್ದರೂ ಈವರೆಗೆ ಪರಿಹಾರ ಕಾಣಲಾಗಿಲ್ಲ. ಶೀಘ್ರ ಪರಿಹಾರದ ನಿರೀಕ್ಷೆ ಇರಿಸಲಾಗಿದೆ.
ರಾಜೀವಿ.ಪಿ.ರೈ.
ಪೈವಳಿಕೆ ಗ್ರಾಮ ಪಂಚಾಯತಿ ಸದಸ್ಯೆ.
......................................................................................................................................
ಅಭಿಮತ:ಏನಂತಾರೆ:
ಸ್ಥಳೀಯ ಪ.ವರ್ಗದ ವ್ಯಕ್ತಿಯೋರ್ವ ಕಾಮಗಾರಿ ಆರಂಭವಾದ ಬಳಿಕ ತಮ್ಮ ವಿಭಾಗದ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಈ ಕಾಮಗಾರಿಗೆ ತಡೆ ನೀಡಲಾಯಿತು. ಪ್ರಸ್ತುತ ದೂರು ದಾಖಲಾಗಿರುವುದರಿಂದ ಕಾಮಗಾರಿ ಪುನರ್ ಆರಂಭಿಸುವಂತಿಲ್ಲ. ದೂರು ಹಿಂಪಡೆಯದಿದ್ದರೆ ಬೇರೆ ಸ್ಥಳದಲ್ಲಾಗಿ ರಸ್ತೆ ನಿರ್ಮಿಸಲಾಗುವುದು. ಆದರೆ ಈ ಪ್ರಕ್ರಿಯೆಗೆ ಒಂದಷ್ಟು ಕಾಲಾವಕಾಶದ ಅಗತ್ಯ ಇದೆ.
ಭಾರತಿ.ಜೆ.ಶೆಟ್ಟಿ.
ಅಧ್ಯಕ್ಷೆ.ಪೈವಳಿಕೆ ಗ್ರಾ.ಪಂ.


