ಕಾಸರಗೋಡು: ಕೇಂದ್ರ-ರಾಜ್ಯ ಸರ್ಕಾರಗಳು ಜಂಟಿಯಾಗಿ ಜಾರಿಗೊಳಿಸುತ್ತಿರುವ ಉಚಿತ ಆರೋಗ್ಯ ಚಿಕಿತ್ಸಾ ಯೋಜನೆಯಾಗಿರುವ ಆಯುಷ್ಮಾನ್ ಭಾರತ್-ಕಾರುಣ್ಯ ಆರೋಗ್ಯ ಸುರಕ್ಷಾ ಯೋಜನೆ (ಎ.ಬಿ.ಕೆ.ಎ.ಎಸ್.ಪಿ.)ಯಲ್ಲಿ ಜಿಲ್ಲೆಯಲ್ಲಿ ಈ ವರೆಗೆ 70,518 ಕುಟುಂಬಗಳ 1,09,915 ಮಂದಿ ಸದಸ್ಯತನ ಪಡೆದಿದ್ದಾರೆ.
ಮೊದಲ ಹಂತದ ನೋಂದಣಿ ಮೂಲಕ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ ಮಟ್ಟದಲ್ಲೂ ನಗರಸಭೆಗಳಲ್ಲೂ ಶೇ. 70 ಕುಟುಂಬ ಸದಸ್ಯತನ ವಿತರಣೆ ಪೂರ್ಣಗೊಂಡಿದೆ ಎಂದು ಚಿಯಾಕ್ ಜಿಲ್ಲಾ ಯೋಜನಾ ಪ್ರಬಂಧಕರು ತಿಳಿಸಿರುವರು.ವಿವಿಧ ಗ್ರಾಮ ಪಂಚಾಯತಿ-ನಗರಸಭೆ ಕೇಂದ್ರಗಳಲ್ಲಿ ಕಾರ್ಡ್ ವಿತರಣೆ ಪ್ರಗತಿಯಲ್ಲಿದೆ.
ಈ ವರ್ಷ ಎ. 1ರಿಂದ ರಾಜ್ಯದಲ್ಲಿ ಆಯುಷ್ಮಾನ್ ಭಾರತ್-ಕಾರುಣ್ಯ ಆರೋಗ್ಯ ಸುರಕ್ಷೆ ಯೋಜನೆ ಜಾರಿಗೊಳಿಸಲಾಗಿದೆ. 2019ರ ಮಾ. 31ರ ವರೆಗೆ ರಾಜ್ಯದಲ್ಲಿ ಜಾರಿಯಲ್ಲಿದ್ದ ಆರ್.ಎಸ್. ಬಿ.ವೈ-ಚಿಸ್ ಯೋಜನೆ (ಸಮಗ್ರ ಆರೋಗ್ಯ ವಿಮೆ ಯೋಜನೆ), ಚಿಸ್ ಪ್ಲಸ್ ಯೋಜನೆ, ಇತರ ವಿವಿಧ ಚಿಕಿತ್ಸೆ ಯೋಜನೆಗಳು ಇತ್ಯಾದಿಗಳನ್ನು ವಿಲೀನಗೊಳಿಸಿ ಆಯುಷ್ಮಾನ್ ಭಾರತ್-ಕಾರುಣ್ಯ ಆರೋಗ್ಯ ಸುರಕ್ಷೆ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆ ಮುಖಾಂತರ ಸದಸ್ಯರಾಗುವ ಕುಟುಂಬಕ್ಕೆ 5 ಲಕ್ಷ ರೂ.ನ ಉಚಿತ ಚಿಕಿತ್ಸೆ ಸೌಲಭ್ಯ ಲಭಿಸಲಿದೆ. ಸದಸ್ಯರಾದವರಿಗೆ ವಿವಿಧ ಸರಕಾರಿ-ಖಾಸಗಿ-ಸಹಕಾರಿ ಆಸ್ಪತ್ರೆಗಳಲ್ಲಿ (ಮೆಡಿಕಲ್ ಕಾಲೇಜುಗಳ ಸಹಿತ) ಚಿಕಿತ್ಸಾ ಸೌಲಭ್ಯಗಳು ಲಭಿಸಲಿವೆ.
2019ರ ಮಾ. 31ವರೆಗೆ ಕಾಲಾವಧಿ ಹೊಂದಿರುವ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್ ಪಡೆದುಕೊಂಡಿರುವ ಕುಟುಂಬಗಳಿಗೆ 2011ರ ಸಾಮಾಜಿಕ-ಆರ್ಥಿಕ ಜಾತಿ ಗಣತಿ ಪ್ರಕಾರ ಆಯ್ದ ಕುಟುಂಬಗಳಿಗೆ (ಪ್ರಧಾನಿ ಅವರ ಪತ್ರ ಲಭಿಸಿರುವ ಕುಟುಂಬಗಳಿಗೆ) ಯೋಜನೆಯಲ್ಲಿ ಸೇರಲು ಅರ್ಹರಾಗಿದ್ದಾರೆ. ಯೋಜನೆಗೆ ನೂತನ ಅರ್ಜಿಗಳನ್ನು ಸ್ವೀಕರಿಸುವ ಸಂಬಂಧ ಮಾಹಿತಿಗಳನ್ನು ಅನಂತರ ತಿಳಿಸಲಾಗುವುದು.
ಪಡಿತರ ಚೀಟಿ ಹೊಂದಿರುವವರು ಅರ್ಹರು:
ಅರ್ಹತಾ ಕುಟುಂಬಗಳ ಪಡಿತರ ಚೀಟಿಯಲ್ಲಿ ಸೇರಿರುವ ಎಲ್ಲ ಸದಸ್ಯರು ಈ ಚಿಕಿತ್ಸಾ ಕಾರ್ಡ್ ಪಡೆದುಕೊಳ್ಳಬಹುದಾಗಿದೆ. ಒಂದು ಕುಟುಂಬದಲ್ಲಿ ಯೋಜನೆಯಲ್ಲಿ ಸೇರಿರುವವರ ಸಂಖ್ಯೆ ಮತ್ತು ಪ್ರಾಯಕ್ಕೆ ಮಿತಿಯಿಲ್ಲ. ಎಲ್ಲ ಸದಸ್ಯರಿಗೂ ಒಂದೊದು ಕಾರ್ಡ್ ಲಭಿಸಲಿದೆ. ಕುಟುಂಬದ ಒಬ್ಬ ಸದಸ್ಯ ಕಾರ್ಡ್ ಪಡೆದರೆ ಉಳಿದ ಸದಸ್ಯರು ಯಾವಾಗಬೇಕಿದ್ದರೂ ಕಾರ್ಡ್ ಪಡೆದುಕೊಳ್ಳುವ ಅವಕಾಶಗಳಿವೆ. ಪ್ರತಿ ಕುಟುಂಬಕ್ಕೆ 50 ರೂ.ನೋಂದಣಿ ಶುಲ್ಕ ಸಲ್ಲಿಸಬೇಕು.
ಕುಟುಂಬದ ಇತರ ಸದಸ್ಯರನ್ನು ಬಳಿಕ ಸೇರ್ಪಡೆಗೊಳಿಸಲು ಬೇರೆ ಮೊಬಲಗು ನೀಡ ಬೇಕಿಲ್ಲ. ಗ್ರಾಮ ಪಂಚಾಯತಿ, ನಗರಸಭೆ ಮಟ್ಟದಲ್ಲಿ ಚಟುವಟಿಕೆ ನಡೆಸುತ್ತಿರುವ ಕಾರ್ಡ್ ವಿತರಣೆ ಕೇಂದ್ರದಲ್ಲಿ 2018-19 ವರ್ಷ ಕಾಲಾವಧಿ ಹೊಂದಿರುವ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್, ಪ್ರಧಾನಮಂತ್ರಿಯ ಪತ್ರ, ಪಡಿತರ ಚೀಟಿ, ಆಧಾರ್ ಕಾರ್ಡ್ ದಾಖಲೆಗಳನ್ನು ನೇರವಾಗಿ ಸಲ್ಲಿಸಬೇಕು.


