ಬದಿಯಡ್ಕ: ಶ್ರೀಲಂಕಾದ ಪ್ರಧಾನಿ ರೆನಿಲ್ ವಿಕ್ರಮ ಸಿಂಘೆ ಅವರು ಜು.27 ರಂದು ಜಿಲ್ಲೆಗೆ ವಿಶೇಷ ಭೇಟಿ ನೀಡುವರು.
ಅವರು ಅಂದು ನೀರ್ಚಾಲು ಸಮೀಪದ ಬೇಳ ಕುಮಾರಮಂಗಲದ ಶ್ರೀಕುಮಾರ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಪ್ರಾರ್ಥನೆ ಸೇವೆ ನಡೆಸುವರೆಂದು ಮೂಲಗಳಿಂದ ತಿಳಿದುಬಂದಿದೆ.
ಜು.26 ರಂದು ಸಂಜೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಕೊಲ್ಲೂರು ಕ್ಷೇತ್ರ ದರ್ಶನಗೈದು, ಹೆಲಿಕಾಪ್ಟರ್ ಮೂಲಕ ಬೇಕಲದ ತಾಜ್ ಹೋಟೆಲಿಗೆ ಆಗಮಿಸಿ ವಿಶ್ರಮಿಸುವರು. 27 ರಂದು ಬೆಳಿಗ್ಗೆ 9ಕ್ಕೆ ಶ್ರೀಕ್ಷೇತ್ರ ಬೇಳ ಕುಮಾರಮಂಗಲಕ್ಕೆ ಭೇಟಿ ನೀಡುವರು. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರನ್ನು ಸ್ವಾಗತಿಸಲಿದ್ದು, ಬಳಿಕ ಕ್ಷೇತ್ರದ ವಿಶೇಷ ಸೇವೆಯಲ್ಲಿ ಭಾಗವಹಿಸಿ ತೆರಳಲಿರುವರು ಎಂದು ಮೂಲಕಗಳಿಂದ ತಿಳಿದು ಬಂದಿದೆ.
ಈ ಸಂಬಂಧ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸೋಮವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೇಂದ್ರ ಸರ್ಕಾರದ ವಿವಿಧ ಅಧಿಕಾರಿಗಳ ಸಭೆ ನಡೆಯಿತು. ಸುರಕ್ಷತೆ, ಸ್ವಾಗತ ನಿರ್ವಹಣೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
......................................................
ಅಭಿಮತ:
ಕುಮಾರಮಂಗಲ ಕ್ಷೇತ್ರದ ಪೂಜಾ ನಿರ್ವಹಣೆಯ ಅಡಿಗರ ಪೈಕಿಯವರಾದ, ಪ್ರಸಿದ್ದ ಜ್ಯೋತಿಷಿ ಪದ್ಮನಾಭ ಶರ್ಮರ ಮೂಲಕ ಶ್ರೀಲಂಕಾದ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದಾರೆ. ಶ್ರೀಕ್ಷೇತ್ರ ವಿಶೇಷ ಸುಬ್ರಹ್ಮಣ್ಯ ಆರಾಧನೆ ಪ್ರಸಿದ್ದವಾಗಿದ್ದು, ಭಜಕರ ಸಂಕಷ್ಟಗಳಿಗೆ ಕ್ಷಿಪ್ರ ಪರಿಹಾರ ಒದಗುತ್ತಿರುವುದು ವಿಶೇಷತೆಯಾಗಿದೆ. ಶ್ರೀಲಂಕಾ ಪ್ರಧಾನಿಯ ಆಗಮನದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಅಚ್ಚುಕಟ್ಟಿನ ವ್ಯವಸ್ಥೆ ನಿರ್ವಹಿಸಲಾಗುವುದು.
ರಾಮಕೃಷ್ಣ ಭಟ್.
ಕುಮಾರಮಂಗಲ ಶ್ರೀಕುಮಾರ ಸುಬ್ರಹ್ಮಣ್ಯ ಕ್ಷೇತ್ರದ ಪ್ರಬಂಧಕರು.ಬೇಳ


