ಮುಳ್ಳೇರಿಯ ಸಾಹಿತ್ಯವನ್ನು ಅರಿಯುವುದಕ್ಕೆ ಭಾಷೆ ಎಂದಿಗೂ ತೊಡಕಾಗುವುದಿಲ್ಲ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಹರಿಕೃಷ್ಣ ಭರಣ್ಯ ಹೇಳಿದರು.
ಅವರು ಕುಂಡಂಗುಳಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ವಿವಿಧ ಕ್ಲಬ್‍ಗಳ ಈ ವರ್ಷದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತಾಡಿದರು.
ಬೇರೆ ಬೇರೆ ಭಾಷೆಗಳ ಸಾಹಿತ್ಯವನ್ನೂ ಓದುವುದು, ನಮ್ಮ ಭಾಷೆಗೆ ತರುವುದು ಒಳ್ಳೆಯ ಕಾರ್ಯವಾಗಿದೆ. ಓದು ಮನುಷ್ಯನನ್ನು ಪ್ರಬುದ್ಧನನ್ನಾಗಿಸುತ್ತದೆ ಎಂದು ಅವರು ಹೇಳಿದರು.
ಶುಭಾ ಟೀಚರ್ ಕ್ಲಬ್‍ಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ. ಹರಿಕೃಷ್ಣ ಭರಣ್ಯ ಅವರು ಶಾಲಾ ಗ್ರಂಥಾಲಯಕ್ಕೆ ಸುಮಾರು ನೂರರಷ್ಟು ಮೌಲಿಕ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಶಾಲೆಯಿಂದ ವರ್ಗಾವಣೆಗೊಂಡ ಅಧ್ಯಾಪಕ ಶ್ರೀಶ ಕುಮಾರ ಪಂಜಿತ್ತಡ್ಕ ಅವರು ದಿ.ಪಿ.ಕೆ.ಶ್ರೀಕೃಷ್ಣ ಭಟ್ ಅವರ ಕಾಸರಗೋಡಿನ ಕನ್ನಡಿಗರ ಜನಪದ ನಂಬಿಕೆಗಳು ಪುಸ್ತಕವನ್ನು ಶಾಲಾ ಗ್ರಂಥಾಲಯಕ್ಕೆ ನೀಡಿದರು. ಮುಖ್ಯೋಪಾಧ್ಯಾಯಿನಿ ಲಕ್ಷ್ಮಿ ಎಂ ಪುಸ್ತಕಗಳನ್ನು ಸ್ವೀಕರಿಸಿದರು. ಜಯರಾಜ ಮಾಸ್ತರ್ ಸ್ವಾಗತಿಸಿ, ಅನೂಪ್ ಮಾಸ್ತರ್ ವಂದಿಸಿದರು.


