ಕಾಸರಗೋಡು: ಪತ್ರಿಕೆ ಹಾಗೂ ಸಮಾಜ ಒಂದೇ ನಾಣ್ಯದ ಎರಡು ಮುಖಗಳು. ಸಮಾಜದ ವಿಕಾರಗಳನ್ನು ತಿದ್ದಿ ಶುದ್ಧಿಕರಿಸುವ ಕೆಲಸವನ್ನು ಪತ್ರಿಕೆ ಮಾಡುತ್ತದೆ. ಸುದ್ದಿ ಪತ್ರಿಕೆಯು ಓದುಗರ ಧ್ವನಿ. ಓದುಗರ ನಿರೀಕ್ಷೆಯನ್ನು ಗೌರವಿಸುತ್ತಾ ಪತ್ರಿಕೆ ಬೆಳೆಯಬೇಕು. ಕರ್ನಾಟಕದ ಮಾಧ್ಯಮ ಕ್ಷೇತ್ರದಲ್ಲಿ ಕಾಸರಗೋಡಿನ ಕನ್ನಡಿಗರು ಬಹಳಷ್ಟು ಮಂದಿ ಕೆಲಸ ಮಾಡುತ್ತಿರುವುದು ಕಾಸರಗೋಡಿನ ಕನ್ನಡಿಗರಿಗೆ ಹೆಮ್ಮೆ ಎಂದು ಸಾಹಿತಿ, ಪತ್ರಕರ್ತ ವಿರಾಜ್ ಅಡೂರು ಹೇಳಿದರು.
ಅವರು ಕೋಟೆಕಣಿಯ ರಾಮನಾಥ ಸಾಂಸ್ಕøತಿಕ ಭವನ ಸಮೀತಿಯ ಆಶ್ರಯದಲ್ಲಿ ಕೋಟೆಕಣಿಯಲ್ಲಿ ಸೋಮವಾರ ಸಂಜೆ ನಡೆದ ಪತ್ರಿಕಾ ದಿನಾಚರಣೆಯಲ್ಲಿ `ಕನ್ನಡ ಪತ್ರಿಕೋದ್ಯಮ ನಡೆದು ಬಂದ ದಾರಿ' ವಿಷಯದಲ್ಲಿ ಅವಲೋಕನ ಉಪನ್ಯಾಸ ನೀಡಿ ಮಾತನಾಡಿದರು.
ಆಧುನಿಕ ಜೀವನದಲ್ಲಿ ದೃಶ್ಯ, ಶ್ರವ್ಯ ಮಾಧ್ಯಮಗಳು ಸಾಕಷ್ಟು ಪ್ರಬಲವಾಗಿದ್ದರೂ, ಅಕ್ಷರ ಮಾಧ್ಯಮ ಕಳೆಗುಂದಿಲ್ಲ. ಪತ್ರಿಕಾ ದಿನಾಚರಣೆಯೂ ಕೂಡಾ ಪತ್ರಿಕಾ ಬಳಗ ಸಲ್ಲಿಸುವ ಸರಸ್ವತಿಯ ಆರಾಧನೆ. ಸುಮಾರು 176 ವರ್ಷಗಳ ಹಿಂದೆ ಕನ್ನಡ ಪತ್ರಿಕೆಗಳು ಪ್ರಕಟವಾದುವು. ಹರ್ಮನ್ ಫೆಡ್ರಿಕ್ ಮೋಗ್ಲಿಂಗ್ ಅವರನ್ನು ಕನ್ನಡ ಪತ್ರಿಕೋದ್ಯಮದ ಪಿತಾಮಹ ಎಂದು ಕರೆಯಲಾಗಿದೆ. ಇಂಡಿಯನ್ ರೀಡರ್ಸ್ ಸರ್ವೇ ನೀಡಿದ ವರದಿಯ ಪ್ರಕಾರ ಗಡಿನಾಡು ಸೇರಿದಂತೆ ಕರ್ನಾಟಕದಲ್ಲಿ ಸುಮಾರು 4211 ಕನ್ನಡ ಪತ್ರಿಕೆಗಳು ನೊಂದಾವಣೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಕಾಸರಗೋಡು ಸರಕಾರಿ ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ ಡಾ.ಯು.ಮಹೇಶ್ವರಿ ಅವರು ಪತ್ರಿಕೆ ಪ್ರಜ್ಞಾವಂತ ಪ್ರಜೆಗಳನ್ನು ರೂಪಿಸುವ ಮಾಧ್ಯಮ. ಪತ್ರಿಕಾ ಧರ್ಮಪಾಲಿಸಬೇಕಾದ ನೈತಿಕ ಹೊಣೆ ಪತ್ರಕರ್ತರದ್ದು. ಪತ್ರಿಕೆ ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವನಾಡಿ. ಕನ್ನಡಿಗರು ಹರಿಹಂಚಿ ಹೋಗಿದ್ದಾಗ ಒಂದುಗೂಡಿಸುವಲ್ಲಿ ಪತ್ರಿಕೆಯ ಕೊಡುಗೆ ಅಪಾರ ಎಂದರು. ಇದೇ ಸಂದರ್ಭದಲ್ಲಿ ಕಾಸರಗೋಡಿ ಹಿರಿಯ ಕನ್ನಡ ಹೋರಾಟಗಾರರಾಗಿದ್ದ ದಿ|ಕಳ್ಳಿಗೆ ಮಹಾಬಲ ಭಂಡಾರಿ ಅವರನ್ನು ನೆನಪಿಸಿ ಕಾಸರಗೋಡಿನ ಕನ್ನಡಿಗರಿಗಾಗಿ ಅವರು ನಡೆಸಿದ ಹೋರಾಟದ ಬಗ್ಗೆ ಮಾಹಿತಿ ನೀಡಿದರು. ಭಾಷೆ, ಸಂಸ್ಕøತಿ, ಸಾಹಿತ್ಯ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವಲ್ಲಿ ಪತ್ರಿಕೆಯ ಜವಾಬ್ದಾರಿ ಹೆಚ್ಚಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಅಚ್ಯುತ ಚೇವಾರ್ ಅವರನ್ನು ಶಾಲು ಹೊದಿಸಿ ಸ್ಮರಣಿಕೆ, ಪ್ರಮಾಣಪತ್ರ ನೀಡಿ ಸಮ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿದ್ದ ಗಣ್ಯರು ವಿವಿಧ ಕನ್ನಡ ಪತ್ರಿಕೆಗಳನ್ನು ಪ್ರದರ್ಶಿಸಿ ಪತ್ರಿಕಾ ದಿನಾಚರಣೆಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಕನ್ನಡ ಪತ್ರಿಕಾ ದಿನಾಚರಣೆಯ ಸಂದೇಶದ ಪ್ರತಿಜ್ಞೆಯನ್ನು ಬೋಧಿಸಿದರು.
ಸಭೆಯಲ್ಲಿ ಹಿರಿಯ ಪತ್ರಕರ್ತರಾದ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಯುವ ಪತ್ರಕರ್ತೆ ಸಾಯಿಭದ್ರಾ ರೈ, ಕೆ.ಸಿ.ಎನ್.ಚಾನೆಲ್ ನಿರ್ದೇಶಕ ಪುರುಷೋತ್ತಮ ನಾೈಕ್ ಮೊದಲಾದವರು ಶುಭಹಾರೈಸಿದರು. ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜಗದೀಶ್ ಕೂಡ್ಲು ವಂದಿಸಿದರು. ಜಯಾನಂದ ಕುಮಾರ್ ಹೊಸದುರ್ಗ ಪ್ರಾರ್ಥಿಸಿದರು. ದಿವಾಕರ ಅಶೋಕನಗರ ಕನ್ನಡ ಗೀತೆಯನ್ನು ಹಾಡಿದರು. ಸತ್ಯನಾರಾಯಣ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರದಲ್ಲಿ ಕಾಸರಗೋಡಿನ ಕನ್ನಡ ಪತ್ರಕರ್ತರು, ಕನ್ನಡ ಭಾಷಾಭಿಮಾನಿಗಳು ಭಾಗವಹಿಸಿದ್ದರು.


