HEALTH TIPS

ಸಮರಸ ಶಬ್ದಾಂತರಂಗ ಸೌರಭ-ಸಂಚಿಕೆ 07-ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.

 
        ಇಂದಿನ ಟಿಪ್ಪಣಿ:
     1.  ಅಧ್ಯಾತ್ಮ ಮತ್ತು ಆಧ್ಯಾತ್ಮಿಕ...
   ಅಧಿ + ಆತ್ಮ ಎಂಬ ಪದಗಳು ಯಣ್ ಸಂಧಿಯಲ್ಲಿ ಸೇರಿ ಆಗಿರುವುದು ಅಧ್ಯಾತ್ಮ. ಅದನ್ನು ಬರೆಯುವಾಗ ಕನ್ನಡ ವರ್ಣಮಾಲೆಯ ಮೊದಲ ಅಕ್ಷರ ‘ಅ’  ಬಳಸಬೇಕು. ಅಧ್ಯಾತ್ಮಕ್ಕೆ ಸಂಬಂಧಪಟ್ಟದ್ದು ಎಂಬರ್ಥದಲ್ಲಿ ‘ಆಧ್ಯಾತ್ಮಿಕ’ ಎಂಬ ಪದ ಹುಟ್ಟಿದೆ. ಅದನ್ನು ಬರೆಯುವಾಗ ಕನ್ನಡ ವರ್ಣಮಾಲೆಯ ಎರಡನೆಯ ಅಕ್ಷರ ‘ಆ’ ಬಳಸಬೇಕು. ಸಾಮಾನ್ಯವಾಗಿ ‘ಇಕ’ ಪ್ರತ್ಯಯ ಸೇರಿದಾಗ ಪದದ ಮೊದಲಕ್ಷರ ಹ್ರಸ್ವ ಇದ್ದದ್ದು ದೀರ್ಘವಾಗುವುದೇ ಇದಕ್ಕೆ ಕಾರಣ. ಇನ್ನೊಂದಿಷ್ಟು ಉದಾಹರಣೆಗಳು:
  ಅರ್ಥ->ಆರ್ಥಿಕ; ಧರ್ಮ-> ಧಾರ್ಮಿಕ; ಸಮಾಜ->ಸಾಮಾಜಿಕ; ಪ್ರಸಂಗ->ಪ್ರಾಸಂಗಿಕ; ಪರಮಾರ್ಥ->ಪಾರಮಾರ್ಥಿಕ; ಪರಂಪರಾ- ಪಾರಂಪರಿಕ; ತತ್ತ್ವ->ತಾತ್ತ್ವಿಕ; ಸತ್ತ್ವ->ಸಾತ್ತ್ವಿಕ
    ಹಾಗಾಗಿ ನೀವು ‘ಆಧ್ಯಾತ್ಮ’ ಮತ್ತು ‘ಅಧ್ಯಾತ್ಮಿಕ’ ಎಂದೆಲ್ಲ ಬರೆಯುತ್ತಿದ್ದಿರಾದರೆ ಈಗಿಂದೀಗಲೇ ಸರಿಪಡಿಸಿಕೊಳ್ಳಿ.

 ====

      2. ದಿನವಿಡೀ ಧಾರಾವಾಹಿಗಳನ್ನು ನೋಡುತ್ತೇವೆ, ಆದರೆ ‘ಧಾರವಾಹಿ’ ಎಂದು ತಪ್ಪಾಗಿ ಉಚ್ಚರಿಸುತ್ತೇವೆ/ಬರೆಯುತ್ತೇವೆ!
     ಧಾರಾ ಎಂದರೆ ನಿರಂತರತೆ, ಸತತವಾಗಿ ಇರುವುದು. ಧಾರಾವಾಹಿ ಎಂದರೆ ನಿರಂತರವಾಗಿ ಪ್ರವಹಿಸುತ್ತಿರುವ ಎಂದು ಅರ್ಥ. ಟಿವಿ ಜನಪ್ರಿಯತೆ ಗಳಿಸುವುದಕ್ಕೂ ಮೊದಲೇ ಸುಧಾ, ತರಂಗ, ಪ್ರಜಾಮತ ಮುಂತಾದ ವಾರಪತ್ರಿಕೆಗಳಲ್ಲಿ, ಚಂದಮಾಮದಂಥ ಮಾಸಪತ್ರಿಕೆಗಳಲ್ಲೂ, ದೊಡ್ಡದೊಡ್ಡ ಕಾದಂಬರಿಗಳು ಕಂತುಗಳ ರೂಪದಲ್ಲಿ ಧಾರಾವಾಹಿಯಾಗಿ ಬರುತ್ತಿದ್ದುವಲ್ಲ? ಆಗೆಲ್ಲ ‘ಧಾರಾವಾಹಿ’ ಎಂದು ಸರಿಯಾಗಿಯೇ ಇದ್ದದ್ದು ಈಗೀಗ ‘ಧಾರವಾಹಿ’ ಎಂಬ ತಪ್ಪು ರೂಪ ಪಡೆಯಿತೇಕೆ? ಭಾಷೆಯ ಮಟ್ಟಿಗೆ ಬೇಜವಾಬ್ದಾರಿ ಅಸಡ್ಡೆ ಉಡಾಫೆಗಳ ಆಗರವೇ ಆಗಿರುವ ಕನ್ನಡದ ಅಸಂಖ್ಯಾತ ಟಿವಿ ವಾಹಿನಿಗಳ ಕೊಡುಗೆ ಬಹುಶಃ ಇದರಲ್ಲಿದೆ.
====
        3. ಶಕಾರ ಎಲ್ಲಿ, ಷಕಾರ ಎಲ್ಲಿ, ಶಕಾರ-ಷಕಾರಗಳ ಸಹಕಾರ ಎಲ್ಲಿ?
     ಶೂದ್ರಕನು ರಚಿಸಿದ ಮೃಚ್ಛಕಟಿಕಾ ನಾಟಕದಲ್ಲಿ ಶಕಾರ ಅಂತೊಂದು ಪಾತ್ರ ಇದೆ. ಅವನು ‘ಸ’ಕಾರವನ್ನು ಉಚ್ಚರಿಸುವಲ್ಲೆಲ್ಲ ‘ಶ’ಕಾರ ಉಚ್ಚರಿಸುತ್ತಿದ್ದನಂತೆ, ಅದಕ್ಕೆಂದೇ ಅವನ ಹೆಸರು ಶಕಾರ. ವಸಂತಸೇನೆಯನ್ನು ವಶಂತಶೇನೆ ಎನ್ನುವನು. ಕನ್ನಡ ಬಲ್ಲವನಾಗಿದ್ದರೆ ಗಸಗಸೆ ಪಾಯಸವನ್ನು ಗಶಗಶೆ ಪಾಯಶ ಎಂದು ತಿಂದುತೇಗಿ ಶೊಗಶಾದ ನಿದ್ದೆ ಮಾಡುತ್ತಿದ್ದನೋ ಏನೋ.
   ಶಕಾರನಂತಲ್ಲದೆ ನಮಗೆ ನಿಜವಾಗಿ ಶ ಮತ್ತು ಷ ಅಕ್ಷರಗಳಿರುವ ಪದಗಳ ಪರಿಚಯ ಇದೆಯಾದರೂ, ಅವುಗಳನ್ನು ಯಥೇಚ್ಛ ಬಳಸುತ್ತೇವಾದರೂ, ಡೊಂಕು ಶ (ಅಥವಾ ಶಂಕರ ಶ, ಶಂಖ ಶ) ಎಲ್ಲಿ ಬಳಸುವುದು, ಪಟ್ಟೆ ಷ (ಷಣ್ಮುಖ ಷ) ಎಲ್ಲಿ ಬಳಸುವುದು ಎಂದು ಆಗಾಗ ಗೊಂದಲ ಉಂಟಾಗುತ್ತದೆ.
            ಈ ಕೆಳಗಿನ ಪದಗಳಲ್ಲಿ ಡೊಂಕು ‘ಶ’ ಮಾತ್ರ ಬರುತ್ತದೆ:
   ಈಶ, ಜಗದೀಶ, ಸರ್ವೇಶ, ಮಲ್ಲೇಶ, ಗೌರೀಶ, ಸುರೇಶ, ರಮೇಶ, ಗಣೇಶ, ವೆಂಕಟೇಶ, ಪ್ರದೇಶ, ಪ್ರವೇಶ, ಶ್ಮಶಾನ, ಶಿಕಾರಿ, ಕರ್ಕಶ, ವಿಮರ್ಶೆ, ಶುಭಾಶಯ, ಶ್ವಾಸೋಚ್ಛ್ವಾಸ
          ಈ ಕೆಳಗಿನ ಪದಗಳಲ್ಲಿ ಪಟ್ಟೆ ’ಷ’ ಮಾತ್ರ ಬರುತ್ತದೆ.
     ಹರ್ಷ, ದೋಷ, ಪುರುಷ, ಪುರುಷೋತ್ತಮ, ಷಷ್ಠೀ, ನಿಷ್ಕರ್ಷ, ಅಂಬರೀಷ (ಮಿಕ್ಕೆಲ್ಲ ‘ಈಶ’ಗಳಂತೆ ಅಲ್ಲ ಈ ಹೆಸರು. ಅಂಬರ+ಈಷ ಎಂದು ಆಗಿರುವುದಲ್ಲ, ಏಕೆಂದರೆ ಸಂಸ್ಕೃತದಲ್ಲಿ ‘ಈಷ’ ಎಂಬ ಪದ ಇಲ್ಲ. ಅಂಬರೀಷ ಎನ್ನುವುದು ಒಂದು ಸಂಪೂರ್ಣ ಅಂಕಿತನಾಮ. ಸಂಧಿಯಿಂದಾದುದಲ್ಲ)
                 ಈ ಕೆಳಗಿನ ಪದಗಳಲ್ಲಿ ಡೊಂಕು ‘ಶ’ ಮತ್ತು ಪಟ್ಟೆ ‘ಷ’ ಎರಡೂ ಬರುತ್ತವೆ.
     ಶ್ಲೇಷ್ಮ, ವಿಶೇಷ, ಷೋಡಶ, ಶುಶ್ರೂಷೆ, ವಿಶ್ಲೇಷಣೆ
                                 ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.
                    ಮುಂದುವರಿಯುವುದು.............
     FEEDBACK: samarasasudhi@gmail.com




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries