ಕೋಲ್ಕತ: ಜೈ ಶ್ರೀರಾಮ್ ಘೋಷಣೆಯನ್ನು ದೇಶಾದ್ಯಂತ ಜನರನ್ನು ಹೊಡೆಯಲು ಬಳಸಿಕೊಳ್ಳಲಾಗುತ್ತಿದೆ ಎಂದು ನೊಬೆಲ್ ಪ್ರಶಸ್ತಿ ವಿಜೇತ ಅಮತ್ರ್ಯ ಸೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೋಲ್ಕತದ ಜಾಧವ್‍ಪುರ ವಿಶ್ವವಿದ್ಯಾಲಯದಲ್ಲಿ ಶನಿವಾರ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಇದಕ್ಕೂ ಮೊದಲು ನಾನು ಜೈ ಶ್ರೀರಾಮ್ ಘೋಷಣೆ(ಈ ರೀತಿಯ ಬಳಕೆ)ಯನ್ನು ಕೇಳಿಯೇ ಇರಲಿಲ್ಲ. ಇದೀಗ ಇದನ್ನು ಜನರನ್ನು ಹೊಡೆಯಲು ಬಳಕೆಯಾಗುತ್ತಿದೆ. ನನ್ನ ಪ್ರಕಾರ ಇದಕ್ಕೆ ಬಂಗಾಳಿ ಸಂಸ್ಕೃತಿಯೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಈ ಹಿಂದೆ ರಾಮನವಮಿ ಆಚರಣೆಯನ್ನು ನಾನು ಕಂಡಿರಲಿಲ್ಲ. ಆದರೆ ಇದೀಗ ರಾಮನವಮಿ ಅತಿಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ರಾಮನವಮಿ ಎಂಬುದನ್ನು ನಾನು ಕೇಳಿಯೇ ಇರಲಿಲ್ಲ. ನನ್ನ ನಾಲ್ಕು ವರ್ಷದ ಮೊಮ್ಮಗಳಿಗೆ ನಿನ್ನ ಇಷ್ಟದ ದೇವರು ಯಾವುದು ಎಂದು ಕೇಳಿದೆ. ಅದಕ್ಕವಳು ಮಾ ದುರ್ಗಾ ಎಂದಳು. ಮಾ ದುರ್ಗಾದ ಮಹತ್ವವನ್ನು ರಾಮ ನವಮಿಯೊಂದಿಗೆ ಹೋಲಿಸಲಾಗುವುದಿಲ್ಲ ಎಂದು ತಿಳಿಸಿದರು.
ಒಂದು ನಿರ್ದಿಷ್ಟ ಧರ್ಮದ ಜನರು ಮುಕ್ತವಾಗಿ ಚಲಿಸಲು ಹೆದರುತ್ತಿದ್ದರೆ ಅಥವಾ ಭಯಭೀತರಾಗಿದ್ದರೆ ಅದೊಂದು ಗಂಭೀರ ವಿಷಯವಾಗಿದೆ ಎಂದಿದ್ದಾರೆ.
ಈ ಕುರಿತು ಬೆಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಪ್ರತಿಕ್ರಿಯಿಸಿ, ಅಮತ್ರ್ಯ ಸೇನ್ ಅವರಿಗೆ ಬಹುಶಃ ಬಂಗಾಳದ ಬಗ್ಗೆ ತಿಳಿದಿಲ್ಲ. ಅವರಿಗೆ ಬೆಂಗಾಲಿ ಅಥವಾ ಭಾರತೀಯ ಸಂಸ್ಕೃತಿ ಬಗ್ಗೆ ತಿಳಿದಿದೆಯೇ? ಜೈ ಶ್ರೀರಾಮ್ ಅನ್ನು ಹಲವು ಗ್ರಾಮಗಳಲ್ಲಿ ಹೇಳುತ್ತಿದ್ದರು. ಇದೀಗ ಇಡೀ ಬಂಗಾಳದಲ್ಲಿ ಹೇಳುತ್ತಿದ್ದಾರೆ ಎಂದರು.


