HEALTH TIPS

ಗಬ್ಬೆದ್ದು ನಾರುತ್ತಿರುವ ಉಪ್ಪಳ-ಇಲ್ಲಿ ನೈರ್ಮಲ್ಯ ಎನ್ನುವುದು ಮರೀಚಿಕೆ-ಪ್ರಜ್ಞಾವಂತ ನಾಗರಿಕರಿಗೆ ಸಂಕಷ್ಟ

     
       ಉಪ್ಪಳ: ಮುಂಗಾರು ನಿಧಾನವಾಗಿ ಆರಂಭಗೊಳ್ಳುತ್ತಿರುವಂತೆ ವ್ಯಾಪಕ ಪ್ರಮಾಣದಲ್ಲಿ ತ್ಯಾಜ್ಯಗಳ ದುಷ್ಪರಿಣಾಮ ಜನಜೀವನವನ್ನು ಬಾಧಿಸತೊಡಗಿದ್ದು, ಪ್ರಜ್ಞಾವಂತ ಜನ ಆಕ್ರೋಶಿತರಾಗುತ್ತಿದ್ದಾರೆ.
    ಜಿಲ್ಲೆಯಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಮಂಗಲ್ಪಾಡಿ ಗ್ರಾ.ಪಂ. ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಉಪ್ಪಳ ಪೇಟೆ ಮುಂಚೂಣಿಯಲ್ಲಿದೆ. ಜನಸಾಂದ್ರತೆಯ ದೃಷ್ಟಿಯಿಂದಲೂ ಉಪ್ಪಳ ಅತೀ ಹೆಚ್ಚು ಜನನಿಬಿಡ ಪ್ರದೇಶವಾಗಿದ್ದು, ವ್ಯಾಪಾರ ವಹಿವಾಟು ಸಹಿತ ಅತಿ ಹೆಚ್ಚಿನ ನಾಗರಿಕರು ಒಟ್ಟು ಸೇರುವ ಪ್ರದೇಶವಾಗಿ ಬೆಳೆಯುತ್ತಿದೆ. ಆದರೆ ಇದರ ಜೊತೆಗೆ ನೈರ್ಮಲ್ಯದಂತಹ ಚಟುವಟಿಕೆಗಳಲ್ಲಿ ಅತೀ ಹಿಂದುಳಿದು ಭಯದ ವಾತಾವರಣಕ್ಕೆ ಕಾರಣವಾಗಿದೆ.
    ಪ್ರಸ್ತುತ ಉಪ್ಪಳ ರೈಲು ನಿಲ್ದಾಣ ಪರಿಸರದಲ್ಲಿರುವ ರೈಲ್ವೇ ವಿದ್ಯುತ್ ಸಬ್ ಸ್ಟೇಶನ್ ಬಳಿ ಬೃಹತ್ ಪ್ರಮಾಣದಲ್ಲಿ ತ್ಯಾಜ್ಯಗಳನ್ನು ತಂದು ಸುರಿದಿರುವುದರ ಪರಿಣಾಮ ಮಳೆ ನೀರಿನಿಂದ ಕೊಳೆತು ಇದೀಗ ದುರ್ವಾಸನೆ ಬೀರತೊಡಗಿದೆ. ನೂರಾರು ಜನರು ಓಡಾಡುವ ಪರಿಸರದಲ್ಲಿ ತ್ಯಾಜ್ಯಗಳ ಕೊಳೆಯುವಿಕೆಯಿಂದ ಉಂಟಾದ ದುರ್ವಾಸನೆಯ ಕಾರಣ ಮೂಗುಮುಚ್ಚಿ ನಡೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಶಾಲಾ ಮಕ್ಕಳು ಓಡಾಡು ಈ ಪರಿಸರದಲ್ಲಿ ತ್ಯಾಜ್ಯಗಳ ರಾಶಿಯಿಂದ ಹೊರಬಿದ್ದ ಕಬ್ಬಿಣದ ಚೂರು, ಗಾಜುಗಳಿಂದ ಘಾಸಿಗೊಂಡು ಈಗಾಗಲೇ ಹತ್ತಕ್ಕಿಂತಲೂ ಹೆಚ್ಚು ಮಕ್ಕಳು ಚಿಕಿತ್ಸೆಪಡೆದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
     ರಾಜ್ಯದ ಮಾಲಿನ್ಯ ಪ್ಲಾಂಟ್ ನಲ್ಲಿ ಎರಡನೆಯದು ಇಲ್ಲಿರುವುದು!:
    ಮಾಲಿನ್ಯ ಸಂಸ್ಕರಣೆಗಾಗಿ ಜಾರಿಗೊಳಿಸಿರುವ ಮಾಲಿನ್ಯ ಸಂಸ್ಕರಣಾ ಪ್ಲಾಂಟ್ ಗಳ ಪೈಕಿ ರಾಜ್ಯದ ಎರಡು ಗ್ರಾ.ಪಂ.ಗಳ ಪೈಕಿ ಮಂಗಲ್ಪಾಡಿ ಗ್ರಾ.ಪಂ. ಕೂಡಾ ಒಂದೆಂಬುದು ವಿಶೇಷ. ಆದರೆ ಮಾಲಿನ್ಯ ಸಂಸ್ಕರಣಾ ಪ್ಲಾಂಟ್ ಇದ್ದರೂ ಉಪ್ಪಳದಲ್ಲಿರುವಷ್ಟು ಮಾಲಿನ್ಯ ರಾಶಿ ಜಿಲ್ಲೆಯ ಇತರೆಡೆಗಳಲ್ಲಿ ಕಾಣಿಸದೆಂಬುದೂ ಆಶ್ಚರ್ಯಕರವಾದ ಸತ್ಯವೂ ಹೌದು.
   ಮಂಗಲ್ಪಾಡಿ  ಗ್ರಾ.ಪಂ.ನ ಮಾಲಿನ್ಯಗಳನ್ನು ಸಂಸ್ಕರಿಸಲು ಬೇಕೂರು ಎಂಬಲ್ಲಿ ಬೃಹತ್ ಸಂಸ್ಕರಣಾ ಘಟಕವನ್ನು ಎರಡು ವರ್ಷಗಳ ಹಿಂದೆ ಆರಂಭಿಸಲಾಗಿದ್ದು, ಇದರ ನಿರ್ವಹಣೆಗೆ 20 ರಷ್ಟು ನೌಕರರೂ ಇದ್ದಾರೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಗ್ರಾ.ಪಂ. ಒದಗಿಸಿರುವ ಟೆಂಪೋ ಲಾರಿಯ ಮೂಲಕ ತ್ಯಾಜ್ಯಗಳನ್ನು ಸಂಗ್ರಹಿಸಿ ದಿನನಿತ್ಯ ಸಂಸ್ಕರಣಾ ಘಟಕಕ್ಕೆ ತಲಪಿಸಲಾಗುತ್ತದೆ.
    ಹಾಗಿದ್ದರೂ ಯಾಕೆ:
   ಉಪ್ಪಳ ಪೇಟೆ ಕೇಂದ್ರೀಕರಿಸಿ ಬೃಹತ್ ವ್ಯಾಪಾರ ಕೇಂದ್ರಗಳು, ಬಹುಮಹಡಿ ಪ್ಲಾಟ್ ಗಳಿವೆ. ವ್ಯಾಪಾರಿಗಳು ಹಾಗೂ ಪ್ಲಾಟ್ ಗಳಲ್ಲಿ ವಾಸಿಸುವವರೊಂದಿಗೆ ಸಂಸ್ಕರಣಾ ಘಟಕ ಸಮರ್ಪಕವಾಗಿ ಸ್ಪಂದಿಸದಿರುವುದರಿಂದ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ವಹಿಸುತ್ತಿರುವ ನಿರ್ಲಕ್ಷ್ಯಗಳಿಂದ ಅಲ್ಲಲ್ಲಿ ತ್ಯಾಜ್ಯಗಳನ್ನು ಸೆಯುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಗ್ರಾ.ಪಂ.ಆಗಲಿ, ಅರೋಗ್ಯ ಇಲಾಖೆಯಾಗಲಿ ಯಾವುದೇ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ ಎಂದು ದೂರುಗಳೂ ಕೇಳಿಬಂದಿದೆ.
    ಹೆದ್ದಾರಿಯೂ ದುರ್ಗಂಧಮಯ:
   ರಾಷ್ಟ್ರೀಯ ಹೆದ್ದಾರಿ ಹಾದುಬವರುವ ಮಂಜೇಶ್ವರ, ಹೊಸಂಗಡಿ, ಉಪ್ಪಳ ಪೇಟೆ, ನಯಾಬಝಾರ್, ಬಂದ್ಯೋಡು, ಕುಂಬಳೆ, ಮೊಗ್ರಾಲ್, ಮೊಗ್ರಾಲ್ ಪುತ್ತೂರು, ಚೌಕಿ, ಕಾಸರಗೋಡಿನವರೆಗೆ ಬೃಹತ್ ಪ್ರಮಾಣದಲ್ಲಿ ತ್ಯಾಜ್ಯಗಳ ರಾಶಿ ಕಂಡುಬರುತ್ತಿದೆ. ಜಿಲ್ಲೆಯ ಶುಚಿತ್ವ ನಿರ್ವಹಣೆಯ ಶುಚಿತ್ವ ಮಿಶನ್ ಸಂಸ್ಥೆ ವಾರ್ಷಕ್ಕೊಂದು ಕಾರ್ಯಕ್ರಮದ ಮೂಲಕ ಪ್ರಚಾರ ಗಿಟ್ಟಿಸಿ ಕೈತೊಳೆದುಕೊಳ್ಳುತ್ತಿರುವುದರ ಹೊರತು ಕ್ರಿಯಾತ್ಮಕತೆಯಲ್ಲಿ ಸೋತಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಉಪ್ಪಳ ಪೇಟೆಯ ಹೆದ್ದಾರಿ ಬದಿ ಕಳೆದ ತಿಂಗಳಿಂದ ಪ್ರದರ್ಶನಗೊಂಡ ಖಾಸಗೀ ಎಕ್ಸ್ ಪೋ ವೊಂದು ಕೊನೆಗೊಳ್ಳುತ್ತಿರುವಂತೆ ಈ ಪರಿಸರದಲ್ಲಿ ಬೃಹತ್ ತ್ಯಾಜ್ಯಗಳನ್ನು ಬಿಟ್ಟು ತೆರಳಿದ್ದು ಇದರ ವಿಲೇವಾರಿಯೂ ನಡೆಯದೆ ಹೆದ್ದಾರಿಗೆ ತ್ಯಾಜ್ಯಗಳು ಬರುತ್ತಿರುವುದೂ ಕಂಡುಬಂದಿದೆ. 
     ಸಾಂಕ್ರಾಮಿಕ ಕಾಯಿಲೆಗಳ ಭೀತಿ:
   ಉಪ್ಪಳ ಪರಿಸರದಲ್ಲಿ ಈಗಾಗಲೇ ಹಲವೆಡೆ ಸಾಂಕ್ರಾಮಿಕ ಖಾಯಿಲೆಗಳು ಕಂಡುಬಂದಿದ್ದು, ಕಳೆದೊಂದು ವಾರದಲ್ಲಿ ಕೆಮ್ಮು, ಜ್ವರ, ತುರಿಕೆಗಳಿಗೆಂದು ಮಂಗಲ್ಪಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 150 ಮಂದಿ ಚಿಕಿತ್ಸೆಗೆ ಆಗಮಿಸಿರುವುದಾಗಿ ತಿಳಿದುಬಂದಿದೆ. ಮಿಕ್ಕುಳಿದಂತೆ ಖಾಸಗೀ ಲೆಕ್ಕಾಚಾರಗಳು ಲಭ್ಯವಾಗದಿರುವುದರಿಂದ ಇದು 500ಕ್ಕಿಂತಲೂ ಹೆಚ್ಚು ಮಂದಿಗಳಲ್ಲಿ ಕಂಡುಬಂದಿರಬಹುದೆಂದು ಅಂದಾಜಿಸಲಾಗಿದೆ. ಜೊತೆಗೆ ಮಲೇರಿಯ, ಡೆಂಗಿ, ಪಿತ್ತಕಾಮಾಲೆ, ಇಲಿಜ್ವರಗಳ ಭೀತಿ ಎದುರಾಗಿದ್ದು, ಕೆಲವರಲ್ಲಿ ಇದರ ಲಕ್ಷಣ ಕಂಡುಬಂದಿದೆ.
   ಹಿಂದಿದೆ ಕಥೆ:
   ಇತ್ತೀಚೆಗೆ ಉಪ್ಪಳ ರೈಲ್ವೇ ನಿಲ್ದಾಣ ಪರಿಸರದಲ್ಲಿನ ತ್ಯಾಜ್ಯಗಳನ್ನು ತಂದೆಸೆಯುವವರ ಬಗ್ಗೆ ಸ್ಥಳೀಯ ಯುವಕರು ಹದ್ದುಗಣ್ಣಿರಿಸಿ ವ್ಯಾಪಕ ಶೋಧದಲ್ಲಿರುವಂತೆ ರಾಶಿಯಲ್ಲಿ ಬ್ಯಾಂಕ್ ಹಣ ಸಂದಾಯದ ರಶೀದಿಯೊಂದು ಲಭ್ಯವಾಗಿದ್ದು ಅದರ ಜಾಡುಹಿಡಿದು ಹೋದಾಗ ಉತ್ತರ ಭಾರತದ ವ್ಯಕ್ತಿಯೊಬ್ಬನದೆಂದು ತಿಳಿದುಬಂತು. ಬಳಿಕ ಆತನನ್ನು ಕಂಡು ವಿಚಾರಿಸಿದಾಗ ಉಪ್ಪಳದಲ್ಲಿ ಕ್ಷೌರವೃತ್ತಿ ನಡೆಸುವವನೆಂದು, ತಾನು ತ್ಯಾಜ್ಯಗಳನ್ನು ವಾರಗಳಿಗೆ ಒಮ್ಮೆ ಖಾಸಗೀ ತ್ಯಾಜ್ಯ ಸಂಗ್ರಹಗಾರರಿಗೆ ರೂ.150ರಂತೆ ನೀಡಿ ವಿಲೇವಾರಿಗೊಳಿಸುವುದಾಗಿ ತಿಳಿಸಿದ್ದನು. ಈ ಬಗ್ಗೆ ಮತ್ತಷ್ಟು ಶೋಧ ನಡೆಸುತ್ತಿರುವಂತೆ ಮಂಗಲ್ಪಾಡಿ ಗ್ರಾ.ಪಂ.ನ ಪ್ರಭಾವೀ ವ್ಯಕ್ತಿಗಳೇ ವ್ಯಾಪಾರ ದಂಧೆಗಳಾಗಿ ಹೆಸರಿಗೆ ತ್ಯಾಜ್ಯಗಳನ್ನು ಸಂಗಗ್ರಹಿಸಿ ಹಣ ಪಡೆದು ಅಲ್ಲಲ್ಲಿ ತಂದೆಸೆಯುತ್ತಿರುವ ಆತಂಕಕಾರಿ ಮಾಹಿತಿ ಲಭ್ಯವಾಯಿತು. ಬಳಿಕ ಈ ಬಗ್ಗೆ ರಾಜಕೀಯ ಒತ್ತಡಗಳೂ ಕೇಳಿಬಂದು ವಿಚಾರ ಮುಚ್ಚಿಹೋಗಿರುವುದಾಗಿ ಬಲ್ಲ ಮೂಲಗಳು ತಿಳಿಸಿವೆ.
    ಕರ್ಮ ಸಮಿತಿಯೆಂಬ ನೀರ ಹೋಮ:
   ಈ ಮಧ್ಯೆ ಸಾರ್ವಜನಿಕ ಆಕ್ರೋಶಗಳು ಕೇಳಿಬಂದಿರುವಂತೆ ಗ್ರಾ.ಪಂ.ಕುಟುಂಬಶ್ರೀ ಘಟಕಗಳನ್ನು ಕ್ರೋಢೀಕರಿಸಿ ನೈರ್ಮಲ್ಯ ಕರ್ಮ ಸಮಿತಿಯೆಂಬ ಘಟಕಕ್ಕೆ ರೂಪು ನೀಡಿದ್ದರೂ ಇದು ಸಂಪೂರ್ಣ ವಿಫಲವಾಗಿದೆ. ಕುಟುಂಬಶ್ರೀಗಳಲ್ಲಿ ಕಾರ್ಯವೆಸಗುತ್ತಿರುವ ಸ್ಥಳೀಯ ಮಹಿಳೆಯರು ಹೆದ್ದಾರಿ ಬದಿ ತ್ಯಾಜ್ಯ ನಿರ್ವಹಣೆಗೆ ಕುಟುಂಬಗಳು ಅಸಂತುಷ್ಠಿ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಯೋಜನೆ ವ್ಯರ್ಥವಾಯಿತೆಂದು ತಿಳಿದುಬಂದಿದೆ.
      ನನ್ನಿಂದ ಆರಂಭ ಯಾವಾಗ:
    ಶುಚಿತ್ವ, ತ್ಯಾಜ್ಯ ನಿರ್ವಹಣೆಯ ಪ್ರಜ್ಞೆ ಮೊದಲು ನನ್ನಿಂದ ಆರಂಭವಾಗಬೇಕೆಂಬ ಪ್ರಧಾನಿ ಮೋದಿಯವರ ಆಶಯ ಮಂಗಲ್ಪಾಡಿ ಗ್ರಾ.ಪಂ.ನ ಜನರಿಗೆ ಇನ್ನೂ ಅರಿವಾದಂತಿಲ್ಲ. ಜನಸಾಮಾನ್ಯರು ಇನ್ನದರೂ ಪ್ರಜ್ಞಾವಂತರಾದರೆ ಬದುಕು ಸುಸ್ಥಿರತೆಯಲ್ಲಿ ಮುಂದುವರಿದೀತೆಂಬುದು ಖಚಿತ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries