ಕುಂಬಳೆ: ಶುಕ್ರವಾರ ಮುಂಜಾನೆ ವ್ಯಾಪಕಗೊಂಡ ಮಳೆಯ ಪರಿಣಾಮ ಅಲ್ಲಲ್ಲಿ ಮಳೆ ನೀರು ಹರಿಯಲು ಸಮರ್ಪಕ ವ್ಯವಸ್ಥೆಗಳಿಲ್ಲದೆ ಕೃತಕ ನೆರೆ ಕಂಡುಬಂದಿದೆ.
ಶುಕ್ರವಾರ ಸಂಜೆಯ ವೇಳೆ ಕುಂಬಳೆ ರೈಲು ನಿಲ್ದಾಣದ ಒಳಗೆ ಮಳೆನೀರು ನುಗ್ಗಿ ವ್ಯಾಪಕ ಸಮಸ್ಯೆಗೆ ಕಾರಣವಾಯಿತು. ಸಂಜೆ ವೇಳೆ ಮಂಗಳೂರು ಭಾಗದಿಂದ ಆಗಮಿಸುವ ನೂರಾರು ಪ್ರಯಾಣಿಕರು ಮಳೆ ನೀರಲ್ಲಿ ಭಯದಿಂದ ಸಂಚರಿಸಬೇಕಾಯಿತು. ಮಳೆ ನೀರು ನಿಲ್ದಾಣದ ಒಳಗೆ ನುಗ್ಗಿ ಸುಮಾರು 1.5 ಪೀಟ್ ಗಳಷ್ಟು ಎತ್ತರಕ್ಕೆ ಕಟ್ಟಿನಿಂತಿರುವುದು ಸಮಸ್ಯೆಗೆ ಕಾರಣವಾಯಿತು. ರೈಲು ನಿಲ್ದಾಣ ಪರಿಸರದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದು ಮಳೆ ನೀರು ಒಳನುಗ್ಗಲು ಕಾರಣವೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಧೂರು ದೇವಾಲಯದ ಅಂಗಣಕ್ಕೂ ನೀರು!
ಇತಿಹಾಸ ಪ್ರಸಿದ್ದ ಮಧೂರು ಶ್ರೀಸಿದ್ದಿವಿನಾಯಕ ಮಹಾಗಣಪತಿ ದೇವಾಲಯದ ಅಂಗಣಕ್ಕೂ ವಾಡಿಕೆಯಂತೆ ಸಂಜೆ ವೇಳೆ ಮಳೆ ನೀರು ನುಗ್ಗಿದೆ. ವರ್ಷದಲ್ಲಿ ಒಂದೆರಡು ಬಾರಿ ಮಳೆ ನೀರು ದೇವಾಲಯದ ಅಂಗಣಕ್ಕೆ ನುಗ್ಗುವುದು ಸಾಮಾನ್ಯವಾಗಿದೆ. ಆದರೆ ಈಬಾರಿ ತಡವಾದ ಮಳೆಯ ಕಾರಣ ಈವರೆಗೆ ನೀರು ನುಗ್ಗಿರಲಿಲ್ಲ. ಕ್ಷೇತ್ರದ ಪುನರ್ ನವೀಕರಣ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ರಾತ್ರಿ ಪೂಜೆ ಬೇಗನೆ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿರಲಿಲ್ಲ.ಕ್ಷೇತ್ರ ಸಮೀಪದ ಮಧುವಾಹಿನಿ ಹೊಳೆ ತುಂಬಿ ಹರಿದಾಗ ದೇವಾಲಯದ ಅಂಗಣಕ್ಕೆ ನೀರು ಪ್ರವೇಶಿಸುತ್ತದೆ.



