ಬದಿಯಡ್ಕ: ಮುಂಡಿತ್ತಡ್ಕದ ಎಸ್ ಎಂ ಎಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವೈದ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಉಕ್ಕಿನಡ್ಕದ ಡಾ.ಪಿ.ನಾರಾಯಣ ಭಟ್ ಮೆಮೋರಿಯಲ್ ಆಯುರ್ವೇದಿಕ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಡಾ.ಸ್ವಪ್ನ ಜೆ. ಅವರು ಮನುಷ್ಯನ ಸುಖಮಯ ಜೀವನ ವ್ಯವಸ್ಥೆಗೆ ಪೂರಕವಾಗಿ ಬೆಳೆದುಬಂದ ವೈದ್ಯಕೀಯ ವಿಭಾಗ ಇಂದು ವಿಸ್ತಾರವಾಗಿ ಬಹುಮುಖಗಳ ವೈದ್ಯಸೇವೆ, ಸಂಶೋಧನೆಗಳಿಂದ ಬೆಳೆದುನಿಂತಿದೆ. ಚಿಕಿತ್ಸೆ ನೀಡುವ ವೈದ್ಯನ ಅರಿವು-ಅನುಭವಗಳ ಜ್ಞಾನ ರೋಗಮುಕ್ತತೆಗೆ ಕಾರಣವಾಗುವ ಪ್ರಧಾನ ಅಂಶವಾಗಿದ್ದು, ಭಾರತೀಯ ಪರಂಪರೆಯಲ್ಲಿ ವೈದ್ಯನಿಗೆ ವಿಶೇಷ ಮಾನ ನೀಡಲಾಗಿದೆ ಎಂದು ತಿಳಿಸಿದರು. ವೈದ್ಯರ ನಗುಮೊಗದ ಸೇವೆಗೆ ರೋಗಿಯು ಪೂರಕ ಸ್ಪಂದನ, ವ್ಯಾಯಾಮ, ನಿಗದಿತ ಆಹಾರ ಸೇವನೆ, ಪಿಡುಗುಗಳಿಂದ ದೂರ ಇರುವಿಕೆ ಮೊದಲಾದ ಅಂಶಗಳ ಮೂಲಕ ರೋಗಮುಕ್ತತೆಗೆ ಸಹಸ್ಪಂದಿಸಬೇಕಿದ್ದು, ವ್ಯಾದಿಮುಕ್ತ ಸಮಾಜ ವೈದ್ಯನ ಪರಮ ಲಕ್ಷ್ಯವಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ದತಪಡಿಸಿದರು.
ಶಾಲಾ ವ್ಯವಸ್ಥಾಪಕ, ನಿವೃತ್ತ ಮುಖ್ಯೋಪಾಧ್ಯಾಯ ಜನಾರ್ದನ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ಟೀಚರ್ ಹಾಗೂ ಶಾಲಾ ನೌಕರ ಸಂಘದ ಕಾರ್ಯದರ್ಶಿ ಪದ್ಮನಾಭ ನಾಯಕ್ ಉಪಸ್ಥಿತರಿದ್ದು ಶುಭಹಾರೈಸಿದರು. ಶಿಕ್ಷಕ ವಿಜಯ ಮಾಸ್ತರ್ ಸ್ವಾಗತಿಸಿ, ಸುಮತಿ ಟೀಚರ್ ವಂದಿಸಿದರು. ದಾಮೋದರ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಡಾ.ಸ್ವಪ್ನ ಜೆ.ಅವರನ್ನು ಗೌರವಿಸಿ, ವೈದ್ಯ ದಿನಾಚರಣೆಯ ಶುಭಾಶಯ ವ್ಯಕ್ತಪಡಿಸಲಾಯಿತು.


