ಭರತನಾಟ್ಯದಿಂದ ಮನಸ್ಸು ಹಾಗೂ ದೇಹಕ್ಕೆ ನೆಮ್ಮದಿ : ಗಣೇಶ್ ಪೈ ಬದಿಯಡ್ಕ
ಬದಿಯಡ್ಕ: ನಮ್ಮ ದೇಶದ ಪ್ರಾಚೀನ ಕಲೆಗಳಲ್ಲಿ ಒಂದಾದ ಭರತನಾಟ್ಯ ನೃತ್ಯ ಹಾಗೂ ಸಂಗೀತವನ್ನೊಳ್ಳಗೊಂಡು ಅದ್ಬುತ ಪ್ರಕಾರವಾಗಿ ಜಗತ್ತನ್ನೇ ಸೆಳೆದಿದೆ. ದೇಹಕ್ಕೆ ವ್ಯಾಯಾಮ ಹಾಗೂ ಮನಸ್ಸಿಗೆ ನೆಮ್ಮದಿಯನ್ನು ನೀಡುವಲ್ಲಿ ಭರತನಾಟ್ಯ ಕಲೆಯು ಪೂರಕವಾಗಿದೆ. ಶಿಕ್ಷಣಕ್ಕಾಗಿ ನೃತ್ಯವೆಂಬ ಉದ್ದೇಶದೊಂದಿಗೆ ರಂಗಚಿನ್ನಾರಿ ತಂಡ ಹಮ್ಮಿಕೊಂಡ ತಕಜಣುತಾ ಕಾರ್ಯಕ್ರಮ ಔಚಿತ್ಯಪೂರ್ಣ ಎಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ್ ಪೈ ಬದಿಯಡ್ಕ ಅಭಿಪ್ರಾಯಪಟ್ಟರು.
ಮಂಗಳವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಸಾಮಾಜಿಕ ಸಾಂಸ್ಕøತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಹಮ್ಮಿಕೊಂಡ ಶಿಕ್ಷಣಕ್ಕಾಗಿ ನೃತ್ಯ `ತಕಜಣುತಾ' ಸರಣಿಯ ಮೊದಲ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ವ್ಯವಸ್ಥಾಪಕ ಜಯಪ್ರಕಾಶ ಪಜಿಲ ಸಭೆಯ ಅಧ್ಯಕ್ಷತೆಯನ್ನು ವಹಿಸಿಮಾತನಾಡಿದರು. ರಂಗಚಿನ್ನಾರಿಯ ನಿರ್ದೇಶಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕವಾಗಿ ಮಾತನಾಡಿ, ಗಡಿಪ್ರದೇಶವಾದ ಕಾಸರಗೋಡಿನಲ್ಲಿ ಹಲವಾರು ಅಭಿಯಾನಗಳನ್ನು ರಂಗಚಿನ್ನಾರಿ ಯಶಸ್ವಿಯಾಗಿ ಕೈಗೊಂಡಿದೆ. ಭಾರತೀಯ ಪರಂಪರೆಯನ್ನು ಎತ್ತಿಹಿಡಿಯುವ ಸಲುವಾಗಿ ಶಿಕ್ಷಣಕ್ಕಾಗಿ ನೃತ್ಯ ಎಂಬ ಹೊಸ ಅಭಿಯಾನದೊಂದಿಗೆ ಹೊಸತೊಂದು ದೃಷ್ಟಿಯಲ್ಲಿ ಕಾರ್ಯಕ್ರಮ ಸಂಯೋಜಿಸಲಾಗಿದೆ. ಭಾರತೀಯ ನೃತ್ಯ ಪ್ರಾಕಾರಗಳಿಗೆ ಬಳಸುವ ಹಸ್ತಮುದ್ರೆಗಳ ಬಗ್ಗೆ ಮುಂದಿನ ಜನಾಂಗಕ್ಕೆ ತಿಳುವಳಿಕೆ ನೀಡುವ ಸಲುವಾಗಿ ಪ್ರಸ್ತುತ ಈ ಅಭಿಯಾನದ ಮೂಲಕ ಭರತನಾಟ್ಯದ ಬಗ್ಗೆ ಮಾಹಿತಿಯನ್ನು ನೀಡುವ ಉದ್ದೇಶವಿದಾಗಿದೆ ಎಂದರು.
ರಂಗಚಿನ್ನಾರಿಯ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ಶುಭಾಶಂಸನೆಗೈದರು. ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದೆ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರು ಮಾತನಾಡಿ, ಭರತನಾಟ್ಯದ ಆಸಕ್ತಿ ಕುದುರಿಸುವ, ಮನೋಧರ್ಮವನ್ನು ಅರಿಯುವ, ಮುದ್ರೆಗಳ ಜೊತೆ ಮಿಡಿಯುವ ಪ್ರಾಥಮಿಕ ತರಬೇತಿಯನ್ನು ಮಕ್ಕಳಿಗೆ ನೀಡುತ್ತಾ ಒಂದು ದೇವಸ್ಥಾನದ ಒಳಗೆ ಹೋಗಿ ಪ್ರಾರ್ಥನೆ ಮಾಡಿ ಸುತ್ತುಹಾಕಿ ಮತ್ತೆ ಹೊರಗೆ ಬಂದಾಗ ಸಿಗುವ ಸಂತೃಪ್ತ ಭಾವ ಭರತನಾಟ್ಯದಿಂದ ಸಿಗುತ್ತದೆ ಎಂದರು. ಒಂದು ಪುಟ್ಟ ಮಗು ಹೇಗೆ ಬೆಳೆಯುತ್ತದೆಯೋ ಅದೇ ರೀತಿ ಭರತನಾಟ್ಯದಲ್ಲಿ ವಿವಿಧ ಘಟ್ಟಗಳಿವೆ ಎಂದು ವಿವರಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಕವಿ ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಅಧ್ಯಾಪಕ ವೃಂದ ಹಾಗೂ ಪಾಲಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಆಶ್ಲೇಷ್ ನಿರೂಪಿಸಿದನು. ಕು. ಸ್ಮøತಿಮಾಲಾ ಸ್ವಾಗತಿಸಿ, ಕೃಪಾ ರೈ ವಂದಿಸಿದರು.



