ಸಾಹಿತ್ಯ ಸಾಂಸ್ಕøತಿಕ ಬೆಳವಣಿಗೆಗಳಲ್ಲಿ ಪತ್ರಕರ್ತರ ಕೊಡುಗೆ ಅಪರಿಮಿತ- ಓಮನಾ ರಾಮಚಂದ್ರನ್
ಮುಳ್ಳೇರಿಯ: ಕನ್ನಡ ಪತ್ರಿಕಾ ದಿನಾಚರಣೆಯನ್ನು ಹಿರಿಯ ಪತ್ರಿಕಾ ವಿತರಕರನ್ನು ಅಭಿನಂದಿಸುವ ಹೃದಯಸ್ಪರ್ಶಿ ಕಾರ್ಯಕ್ರಮ ಆಯೋಜನೆಯ ಮೂಲಕ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಗಮನ ಸೆಳೆಯಿತು.
ಸೋಮವಾರ ಮುಳ್ಳೇರಿಯದ ಸರಕಾರಿ ಪೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಮುಳ್ಳೇರಿಯ ಹಿರಿಯ ಪತ್ರಿಕಾ ವಿತರಕ ಕೃಷ್ಣ ಭಟ್ ಅವರನ್ನು ಅಭಿನಂದಿಸಿ ಸುಧೀರ್ಘ ಪತ್ರಿಕೆ ವಿತರಣೆಯ ಸೇವೆಯನ್ನು ಗೌರವಿಸಲಾಯಿತು.
ಅಪರಾಹ್ನ ನಡೆದ ಸಮಾರಂಭವನ್ನು ಕಾರಡ್ಕ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಓಮನಾ ರಾಮಚಂದ್ರನ್ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಸಾಹಿತ್ಯ ಸಾಂಸ್ಕøತಿಕ ಬೆಳವಣಿಗೆಗಳಲ್ಲಿ ಕಾಸರಗೋಡಿನ ಪತ್ರಕರ್ತರ ಕೊಡುಗೆ ಗಮನಾರ್ಹವಾದುದು. ಇಲ್ಲಿನ ಕನ್ನಡ ಶಾಲೆಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ತೋರುವ ಆಸಕ್ತಿ ಹಾಗೂ ಕನ್ನಡ ಪತ್ರಿಕೆಗಳ ಮಾಧ್ಯಮ ಸಹಾಯ ಅನನ್ಯವಾಗಿದೆ. ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ಪತ್ರಕರ್ತರು ಮತ್ತು ಪತ್ರಿಕೆಗಳೇ ಕಾರಣ ಎಂದು ಅಭಿಪ್ರಾಯಪಟ್ಟರು.
ಅಕಾಡೆಮಿಯ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅಧ್ಯಕ್ಷತೆ ವಹಿಸಿದ್ದರು. ರಫೀಕ್ ಕೇಳೋಟ್, ಜಯ ಮಣಿಯಂಪಾರೆ, ಅಕಾಡೆಮಿಯ ಉಪಾಧ್ಯಕ್ಷ ಪ್ರೊ.ಎ.ಶ್ರೀನಾಥ್, ಪತ್ರಕರ್ತ ಪುರುಷೋತ್ತಮ ಭಟ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರೂ,ಬ್ಲಾಕ್ ಪಂಚಾಯತಿ ಸದಸ್ಯ ವಾರಿಜಾಕ್ಷನ್, ಶಾಲಾ ಪ್ರಾಂಶುಪಾಲ ನಾರಾಯಣ, ಪುಸ್ತಕ ಪ್ರಕಾಶಕ ರಾಮಚಂದ್ರ ಬಳ್ಳಾಳ್, ಬಾಲಕೃಷ್ಭ ಅಚ್ಚಾಯಿ, ಸುಭಾಷ್ ಪೆರ್ಲ ಉಪಸ್ಥಿತರಿದ್ದು ಶುಭಾಶಂಸನೆಗೈದರು.
ಕಾರ್ಯಕ್ರಮದಲ್ಲಿ ಮುಳ್ಳೇರಿಯಾದಲ್ಲಿ ಕಳೆದ 55 ವರ್ಷಗಳಿಂದ ಪತ್ರಿಕೆ ಮಾರಾಟಮಾಡುತ್ತಿರುವ ಹಿರಿಯ ಪತ್ರಿಕಾ ವಿತರಕ ಕೃಷ್ಣ ಭಟ್ ದಂಪತಿಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕೃಷ್ಣ ಭಟ್ ತನ್ನ ಅನುಭವಗಳನ್ನು ತೆರೆದಿಟ್ಟರು. ಶಾಲಾ ಶಿಕ್ಷಕ ಚಂದ್ರಶೇಖರ, ಉದಯ ಕುಮಾರ್, ಶಿವಪ್ಪ ಸಹಕರಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಸ್ವಾಗತಿಸಿ, ಸದಸ್ಯೆ ರೇಶ್ಮಾಸುನಿಲ್ ವಂದಿಸಿದರು. ವಿದ್ಯಾಗಣೇಶ್ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು.ಶಾಲಾ ಎನ್ ಎಸ್ ಎಸ್ ಘಟಕ ಸಹಯೋಗ ನೀಡಿತ್ತು.


