HEALTH TIPS

ತಲಪಾಡಿಯಲ್ಲಿ ಬಸ್ಸು ತಂಗುದಾಣವಿಲ್ಲದೆ ಪರದಾಡುತ್ತಿರುವ ಪ್ರಯಾಣಿಕರು: ಸಿಪಿಎಂ ನೇತಾರ ಕೆ ಆರ್ ಜಯಾನಂದರಿಂದ ಜಿಲ್ಲಾಧಿಕಾರಿಗೆ ಮನವಿ


      ಮಂಜೇಶ್ವರ : ಕರ್ನಾಟಕ ಕೇರಳ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಸುಸಜ್ಜಿತವಾದ ಬಸ್ಸು ನಿಲ್ದಾಣದೊಂದಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದಾಗಿ ಪ್ರತಿಯೊಂದು ಚುನಾವಣೆ ಸಂದರ್ಭದಲ್ಲೂ ಭರವಸೆ ನೀಡುವ ಜನಪ್ರತಿನಿಧಿಗಳು ಬಳಿಕ ತಮ್ಮ ಆಡಳಿತಾವಧಿಯಲ್ಲಿ ಅದನ್ನು ಮರೆತು ಹೋಗುತ್ತಿರುವುದು ಗಡಿ ಪ್ರದೇಶಕ್ಕೊಂದು ಶಾಪವೆಂದು ಹೇಳದೆ ನಿರ್ವಾಹವಿಲ್ಲ.
    ಹಲವು ವರ್ಷಗಳ ಹಿಂದೆ ಮಂಜೇಶ್ವರ ಗ್ರಾ. ಪಂ. ವತಿಯಿಂದ ಈ ಪ್ರದೇಶದಲ್ಲಿ ಒಂದು ಬಸ್ಸು ನಿಲ್ದಾಣ ನಿರ್ಮಾಣವಾಗಿದ್ದರೂ ಅದು ಇದೀಗ ಮದ್ಯ ವ್ಯಸನಿಗಳ ಹಾಗೂ ಜೂಜು ಮಾಫಿಯಾಗಳ ಅಡ್ದೆಯಾಗಿದೆ. ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿಗೂ ಈ ಬಸ್ ನಿಲ್ದಾಣಕ್ಕೂ ಸಂಬಂಧವೇ ಇಲ್ಲದ ರೀತಿಯಲ್ಲಿ ಉಪಯೋಗ ಶೂನ್ಯವಾಗಿದೆ.
     ಪ್ರಯಾಣಿಕರು ಇದೀಗ ರಾಷ್ಟ್ರೀಯ ಹೆದ್ದಾರಿಯಲ್ಲೇ ಮಳೆ ಬಿಸಿಲನ್ನು ಸಹಿಸಿ ಬಸ್ಸಿಗಾಗಿ ಕಾಯಬೇಕಾಗುತ್ತಿದೆ. ಜೊತೆಗೆ ಕೇರಳದ ಖಾಸಗಿ ಬಸ್ಸುಗಳಿಗೆ ಇಲ್ಲಿ ನಿಲುಗಡೆಯಾಗಲು ಕೂಡಾ ಸ್ಥಳವಕಾಶದ ಕೊರತೆಯಿರುವುದಾಗಿ ಚಾಲಕರು ಹೇಳುತಿದ್ದಾರೆ.
      ಕೇರಳ ಕರ್ನಾಟಕ ಗಡಿ ಪ್ರದೇಶ ತಲಪಾಡಿಯಲ್ಲಿ ಖಾಲಿ ಬಿದ್ದಿರುವ ಸರಕಾರದ ಸುಮಾರು 75 ಸೆಂಟ್ಸ್ ಸ್ಥಳದಲ್ಲಿ ಸುಸಜ್ಜಿತವಾದ ಬಸ್ಸು ನಿಲ್ದಾಣವನ್ನು ಸ್ಥಾಪಿಸುವಂತೆ ಸಿಪಿಎಂ ಹಿರಿಯ ನೇತಾರ ಹಾಗೂ ಮಂಜೇಶ್ವರ ಬ್ಲಾಕ್ ಪಂ. ಸದಸ್ಯ ಕೆ ಆರ್ ಜಯಾನಂದ ಅವರು ಇತ್ತೀಚೆಗೆ ಜಿಲ್ಲಾಧಿಕಾರಿಯವರಿಗೆ ಮನವಿಯ ಮೂಲಕ ವಿನಂತಿಸಿಕೊಂಡಿದ್ದಾರೆ. ಜೊತೆಗೆ ಈ ಪ್ರದೇಶದ ಜನತೆ ಹಾಗೂ ಇಲ್ಲಿಗೆ ಆಗಮಿಸುತ್ತಿರುವ ಪ್ರಯಾಣಿಕರು ಎದುರಿಸುವ ಸಮಸ್ಯೆಗಳ ಚಿತ್ರಣವನ್ನು ಉಲ್ಲೇಖಿಸಿ ಸಮಗ್ರವಾದ ವರದಿಯನ್ನು ಸಮರ್ಪಿಸಿರುವುದಾಗಿ ಅವರು ತಿಳಿಸಿರುತ್ತಾರೆ.
     ಇತ್ತೀಚಿಗೆ ಆರಂಭಗೊಂಡ ಮಳೆಯ ಬಳಿಕ ತಲಪಾಡಿಯಲ್ಲಿ ಬಸ್ಸಿಗೆ ಕಾಯುವ ಪ್ರಯಾಣಿಕರ ಸ್ಥಿತಿ ತೀವ್ರ ಕಳವಳಕಾರಿಯಾಗಿರುವುದು ಕಂಡುಬಂದಿದೆ. ಈ ಬಗ್ಗೆಯೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
      ಈ ನಿಟ್ಟಿನಲ್ಲಿ ತಲಪಾಡಿಯಲ್ಲಿ ಎಲ್ಲಾ ಸೌಕರ್ಯಗಳಿರುವ ಸುಸಜ್ಜಿತ ಬಸ್ಸು ನಿಲ್ದಾಣ ನಿರ್ಮಿಸುವಂತೆ ಜಯಾನಂದ ಅವರು ಸಾರ್ವಜನಿಕರ ಪರವಾಗಿ ಮನವಿಯಲ್ಲಿ ವಿನಂತಿಸಿಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries