ಬದಿಯಡ್ಕ: ಕುಂಬ್ಡಾಜೆ ಗ್ರಾ.ಪಂ. ಆಡಳಿತ ನಡೆಸುತ್ತಿರುವ ಯುಡಿಎಫ್ ಆಡಳಿತ ಸಮಿತಿ ಸಂಪೂರ್ಣ ನಿಷ್ಕ್ರೀಯವಾಗಿದೆ. ಅಭಿವೃದ್ದಿಗೆ ಸಂಬಂಧಿಸಿ ಬೇಜವಾಬ್ದಾರಿ ನಿಲುವು ಹೊಂದಿರುವುದು ಮತ್ತು ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸದಿರುವುದು ಖಂಡನಾರ್ಹ ಎಂದು ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಎಂ.ಸಂಜೀವ ಶೆಟ್ಟಿ ಆರೋಪಿಸಿದರು.
ಕುಂಬ್ಡಾಜೆ ಗ್ರಾ.ಪಂ.ನ ಆಡಳಿತ ನಿಷ್ಕ್ರೀಯತೆ ಮತ್ತು ಬೇಜವಾಬ್ದಾರಿ ನಿಲುವುಗಳಿಗೆಎದುರಾಗಿ ಬಿಜೆಪಿ ಕುಂಬ್ಡಾಜೆ ಪಂಚಾಯತಿ ಸಮಿತಿ ನೇತೃತ್ವದಲ್ಲಿ ಕುಂಬ್ಡಾಜೆ ಗ್ರಾ.ಪಂ. ಕಚೇರಿಗೆ ಶುಕ್ರವಾರ ನಡೆಸಿದ ಪ್ರತಿಭಟನಾ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಕುಂಬ್ಡಾಜೆ ಪಂಚಾಯತಿ ಘಟಕಾಧ್ಯಕ್ಷ ಬಿ.ರಾಜೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮ ಪಂಚಾಯತಿಯ ಯುಡಿಎಫ್ ಆಡಳಿತ ಜನಸ್ಪಂಧನ ರಹಿತವಾಗಿದೆ. ಹಲವು ವರ್ಷಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಹಾಗೂ ಅದರ ಉಪಕೇಂದ್ರಗಳ ಕಟ್ಟಡಗಳು ಪೊದೆಗಳಿಂದ ಆವೃತ್ತವಾಗಿ ಉಪಯೋಗ ಶೂನ್ಯವಾಗುತ್ತಿದ್ದರೂ, ಸಮರ್ಪಕವಾಗಿ ಉಳಿಸಿ ಜನೋಪಯೋಗಿಯಾಗಿಸುವಲ್ಲಿ ಗ್ರಾ.ಪಂ. ಕುರುಡುತನ ಪ್ರದರ್ಶಿಸುತ್ತಿದ್ದು, ಇದು ಜನಸಾಮಾನ್ಯರ ಬಗೆಗಿರುವ ಆಡಳಿತದ ಕಾಳಜಿಯ ಪ್ರತೀಕವಾಗಿದೆ ಎಂದು ತಿಳಿಸಿದರು.ಎಂಡೋ ಪೀಡಿತರಿಗಿರುವ ಬಡ್ಸ್ ಶಾಲೆ ಈವರೆಗೆ ಕಾರ್ಯಾಚರಿಸುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ಜು.20ರ ಮೊದಲು ಜನರ ಬಳಕೆಗೆ ಬಳಸಲು ಕಾರ್ಯಯೋಜನೆ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಬಿಜೆಪಿ, ವಿವಿಧ ಮೋರ್ಚಾಗಳ ಮುಖಂಡರುಗಳಾದ ಹರೀಶ್ ಗೋಸಾಡ, ಪ್ರಭಾಕರ ರೈ, ಹರೀಶ್ ಕುಣಿಕುಳ್ಳಾಯ, ವಾಸುದೇವ ಭಟ್, ರವೀಂದ್ರ ರೈ ಗೋಸಾಡ, ಶಶಿಧರ ತೆಕ್ಕೆಮೂಲೆ, ಕೊರಗಪ್ಪ, ಯಶೋಧಾ ಎನ್., ಶೈಲಜಾ ಭಟ್, ನಳಿನಿ, ಶಾಂತಕುಮಾರಿ, ನರಸಿಂಹ, ಸುಂದರ ಮವ್ವಾರು, ಸಂತೋಷ ರೈ, ಕೃಷ್ಣ ರೈ, ಚಂದ್ರಶೇಖರ ರೈ ಮೊದಲಾದವರು ಉಪಸ್ಥಿತರಿದ್ದರು.




