HEALTH TIPS

ವಿಶೇಷ ಚೇತನರಿಂದ ಪರಿಸರ ಸ್ನೇಹೀ ಪೆನ್--ವಿಶೇಷ ಚೇತನರ ಸ್ವಸಹಾಯ ಸಂಘದ ಅಪೂರ್ವ ಸಾಧನೆ-ಇಂದು ಎರಡನೇ ವಾರ್ಷಿಕೋತ್ಸವ-ಕಟ್ಟಡ ಉದ್ಘಾಟನೆ

   
    ಉಪ್ಪಳ: ದೈಹಿಕ ವೈಕಲ್ಯತೆ ಶಾಪವಲ್ಲ. ಬದುಕಲು ಪ್ರೇರಣೆ ನೀಡುವಲ್ಲಿ ವಿಶೇಷ ಚೇತನರು ತಮ್ಮದೇ ಸಾಧನೆಯ ಮೂಲಕ ಇತರರಿಗೆ ಮಾದರಿಯಾಗುವ ಹಲವು ಉದಾಹರಣೆಗಳು ನಮ್ಮೊಡನೆ ಸಾಕಷ್ಟಿವೆ. ಇಂತದೇ ಪ್ರೇರಣದಾಯಿ ಚಟುವಟಿಕೆಯ ಮೂಲಕ ಬಂದ್ಯೋಡು ಸಮೀಪದ ಅಡ್ಕ ಎಂಬಲ್ಲಿ ವಿಶೇಷ ಚೇತನರದ್ದೇ ಆದ ಸ್ವಸಹಾಯ ಸಂಘವೊಂದು ಕಾರ್ಯನಿರ್ವಹಿಸುತ್ತಿದ್ದು, ಎರಡು ವರ್ಷಗಳಿಂದ ಸಕ್ರಿಯ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಿದೆ.
     ಅಡ್ಕದಲ್ಲಿರುವ ಹ್ಯಾಂಡಿಕ್ರೋಫ್ ಸ್ವಸಹಾಯ ಸಂಘ ಇಂದು(ಶನಿವಾರ) ತನ್ನ ಎರಡನೇ ವರ್ಷದ ವಾರ್ಷಿಕ ಉತ್ಸವದ ಸಂಭ್ರಮವನ್ನು ಆಚರಿಸುತ್ತಿದ್ದು, ಜೊತೆಗೆ  ತಮ್ಮದೇ ಸ್ವ ಉದ್ಯೋಗದ ನಿರ್ವಹಣೆಗಾಗಿ ಬ್ಲಾಕ್ ಪಂಚಾಯತಿ ನಿರ್ಮಿಸಿರುವ ನೂತನ ಕಟ್ಟಡವೂ ಇಂದು ಉದ್ಘಾಟನೆಗೊಳ್ಳಲಿದೆ.
     ಇತರ ಸ್ವ ಸಹಾಯ ಸಂಘಗಳ ಕಾರ್ಯಚಟುವಟಿಕೆಯಂತೆಯೇ ಇಲ್ಲಿನ ಸ್ವಸಹಾಯ ಸಂಘ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಬ್ಯಾಂಕ್ ಸಾಲಗಳಿಲ್ಲದೆ ತಮ್ಮದೇ ಆದಾಯದ ಮೊತ್ತ ಬಳಸಿ ವಿವಿಧ ಪರಿಸರ ಸ್ನೇಹೀ ವಸ್ತುಗಳ ತಯಾರಿಯಲ್ಲಿ ಈ ಸಂಘ ಕಾರ್ಯತತ್ಪರವಾಗಿದೆ.
    ಬಣ್ಣಬಣ್ಣದ ಪೆನ್ನುಗಳು, ಪೇಪರ್ ಬ್ಯಾಗ್, ಎಲ್‍ಇಡಿ ಬಲ್ಬ್ ಗಳು, ಕೊಡೆಗಳನ್ನು ತಯಾರಿಸಿ ಈ ಸಂಘ ಈಗಾಗಲೇ ಯಶಸ್ಸು ಗಳಿಸಿದೆ. ಮುಖ್ಯವಾಗಿ ಬಣ್ಣಬಣ್ಣದ ಕಾಗದಗಳಿಂದ ತಯಾರಿಸಿದ ಪೆನ್ನುಗಳ ತಯಾರಿಯಲ್ಲಿ ಈ ಸಂಘದ ಪಾತ್ರ ಅಪೂರ್ವವಾಗಿ ಗಮನ ಸೆಳೆದಿದೆ. ಪರಿಸರ ಸ್ನೇಹಿಯಾದ ಇವುಗಳನ್ನು ಮಣ್ಣಿಗೆಸೆದರೆ ಯಾವುದೇ ದುಷ್ಪರಿಣಾಮಗಳಿಲ್ಲದಿರುವುದರಿಂದ ಜನರ ಮನ ಸೆಳೆದಿದೆ. ವಿಶೇಷ ಚೇತನರ ಸಂಘ ತಯಾರಿಸಿರುವ ಈ ಪೆನ್ನಿಗೆ ರಾಜ್ಯಾದ್ಯಂತ ಬಹುಬೇಡಿಕೆ ಇದೆ.
     ಪೋಲೀಯೀ ಪೋಡಿತರು, ಅಪಘಾತಗಳಲ್ಲಿ ಗುಣಮುಖವಾಗದ ಗಾಯಗಳಾದವರು ಮೊದಲಾದವರು ತಮ್ಮ ಮನೆಗಳಲ್ಲಿ ಈವರೆಗೆ ಈ ಉತ್ಪನ್ನವನ್ನು ತಯಾರಿಸುತ್ತಿದ್ದರು.5ರಿಂದ 8 ರೂ.ಮುಖ ಬೆಲೆಯ ಈ ಪೆನ್ನುಗಳ ರೀಪಿಲ್ ನ ಹಿಂಭಾಗದಲ್ಲಿ ಎರಡು ತರಕಾರಿ ಬೀಜಗಳನ್ನೂ ಇರಿಸಿರುವುದು ಮತ್ತೊಂದು ವಿಶೇಷತೆಯಾಗಿದೆ. ಪೆನ್ ಗಳನ್ನು ಬಳಕೆಯ ಬಳಿಕ ಎಸೆದಾಗ ಕಾಗದ ಪೆನ್ ಮಣ್ಣಿನೊಡನೆ ಬೆರೆತುಕೊಳ್ಳುವುದು. ಆದರೆ ರೀಪಿಲ್ ಗಳ ಹಿಂಬದಿ ಇರಿಸಲಾದ ತರಕಾರಿ ಬೀಜಗಳು ಮೊಳಕೆಯೊಡೆಯುತ್ತದೆ. ವಿವಿದ ಬಣ್ಣಗಳ ಕಾಗದಗಳಿಂದ ನಿರ್ಮಿಸಲಾಗಿರುವ ಈ ಪೆನ್ನುಗಳು ಚಿತ್ತಾರದ ಕಾಗದಗಳ ಬಳಕೆಯಿಂದ ಆಕರ್ಷಣೀಯವಾಗಿದೆ. ಜಿಲ್ಲೆಯಲ್ಲಿ ಇವರು ತಯಾರಿಸಿದ ಪೆನ್ನುಗಳಿಗೆ ವಿಶೇಷ ಮಾರುಕಟ್ಟೆ ಲಭ್ಯವಾಗದಿದ್ದರೂ ರಾಜ್ಯದ ಇತರೆಡೆಗಳಲ್ಲಿ ಹೆಚ್ಚು ಬೇಡಿಕೆಯಿದೆ. ಸರ್ಕಾರಿ ಸಭೆ ಸಮಾರಂಭಗಳ ಸಹಿತ ಸಾರ್ವಜನಿಕ ವಲಯದಲ್ಲಿ ಈ ಪರಿಸರಸ್ನೇಹಿ ಪೆನ್ ಬಳಕೆಯಾಗುತ್ತಿದೆ.
    ಪ್ರಸ್ತುತ ಸಂಘದ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ಉದ್ಯಾವರ, ಕಾರ್ಯದರ್ಶಿಯಾಗಿ ಹನೀಫ್ ಮೌಲವಿ ಬಂದ್ಯೋಡು, ಅಬ್ದುಲ್ ರಹಿಮಾನ್ ಕೋಶಾಧಿಕಾರಿಯಾಗಿ ನಿರ್ವಹಿಸುತ್ತಿರುವ ಸಂಘದಲ್ಲಿ 20 ಮಂದಿ ಸದಸ್ಯರಿದ್ದಾರೆ.
      ಪರಿಸರ ಸ್ನೇಹಿ ಪೆನ್ನುಗಳ ಇತಿಹಾಸ!
    ರಾಜ್ಯದ ಪಾಲಕ್ಕಾಡು ಜಿಲ್ಲೆಯ ಸರ್ಕಾರಿ ಆರಿಯೆಂಟಲ್ ಫ್ರೌಢಶಾಲೆಯ ಕೆಲವು ವಿದ್ಯಾರ್ಥಿಗಳು ಕಳೆದ ಎರಡು ವರ್ಷಗಳ ಹಿಂದೆ ಹೊಸ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದರು. 2500 ವಿದ್ಯಾರ್ಥಿಗಳು ಅಧ್ಯಯನ ನಿರತರಾಗಿರುವ ಈ ಶಾಲೆಯಲ್ಲಿ ಪ್ರತಿವರ್ಷ ಎಷ್ಟೊಂದು ಪೆನ್ನುಗಳು ಬಳಕೆಯಾಗಿ ಪರಿಸರದಲ್ಲಿ ಉಪೇಕ್ಷಿಸಲ್ಪಡುತ್ತದೆ ಎಂದು ಅವರು ಸರ್ವೇ ನಡೆಸಿದರು. ಇಂತಹ ಯತ್ನದಲ್ಲಿ ಎರಡು ತಿಂಗಳೊಳಗೆ ಶಾಯಿ ಮುಗಿದು ಎಸೆಯಲಾದ 9325 ಪೆನ್ ಗಳು ಲಭ್ಯವಾದವು. ಒಬ್ಬ ವಿದ್ಯಾರ್ಥಿ ಒಂದು ಪೆನ್ ನ್ನು ಗರಿಷ್ಠ ಏಳು ದಿನ ಉಪಯೋಗಿಸುತ್ತಾನೆ. 2500 ವಿದ್ಯಾರ್ಥಿಗಳು ಒಂದು ಶೈಕ್ಷಣಿಕ ವರ್ಷ ಪರಿಸರಕ್ಕೆ ಎಸೆಯುವ ಪ್ಲಾಸ್ಟಿಕ್ ಪೆನ್ನುಗಳ ಸಂಖ್ಯೆ ಒಂದು ಲಕ್ಷ. ರಾಜ್ಯಾದ್ಯಂತದ ಎಲ್ಲಾ ವಿದ್ಯಾರ್ಥಿಗಳು ಈರೀತಿ ಎಸೆದ ಪೆನ್ನುಗಳನ್ನು ಲೆಕ್ಕಹಾಕಿದರೆ 8 ರಿಂದ 10 ಕೋಟಿಯನ್ನು ಮೀರಿಸುತ್ತವೆ. ವಿದ್ಯಾರ್ಥಿಗಳದ್ದಷ್ಟೇ ಲೆಕ್ಕಾಚಾರವಿದಿ.ಇನ್ನು ಇತರ ಜನಸಾಮಾನ್ಯರು, ಅಧಿಕಾರಿಗಳು ಬಳಸಿ ಎಸೆಯುವ ಪೆನ್ನುಗಳ ನ್ನು ಗಣಿಸಿದರೆ ಇದರ ಲೆಕ್ಕಾಚಾರ ತಲೆ ತಿರುಗಿಸುತ್ತದೆ. ಪರಿಸರವಾದಿಗಳ ಕಣ್ಣಿಗೂ ಬೀಳದಿರುವ ಪ್ಲಾಸ್ಟಿಕ್ ಪೆನ್ನುಗಳಕರಾಳ ಪರಿಸರ ನಾಶ ಭೂಮಿ, ವಾತಾವರಣವನ್ನು ಎಷ್ಟರ ವರೆಗೆ ಮಾಲಿನ್ಯಗೊಳಿಸುತ್ತದೆ ಎನ್ನುವುದು ತೀವ್ರ ಗಾಬರಿಗೊಳಿಸುವುದಾಗಿದ್ದು, ಈ ನಿಟ್ಟಿನಲ್ಲಿ ಇಂತಹ ಪರಿಸರ ಪರ ಪೆನ್ನುಗಳ ಬಳಕೆ ಆಂದೋಲನದ ರೀತಿಯಲ್ಲಿ ಬೆಳೆಯಬೇಕಿದೆ.
     ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಕಳೆದ ಎರಡು ವಾರಗಳ ಹಿಂದೆ, ಇಂತಹ ಪೆನ್ನುಗಳಿಂದ ಪ್ರೇರಣೆ ಪಡೆದು ವಿದ್ಯಾಲಯಗಳನ್ನು ಕೇಂದ್ರೀಕರಿಸಿ ಪೆನ್ ಫ್ರೆಂಡ್ ಯೋಜನೆಯೊಂದಕ್ಕೆ ಚಾಲನೆ ನೀಡಿರುವುದು ಇಲ್ಲಿ ಉಲ್ಲೇಖಾರ್ಹ.
      ಅಭಿಮತ:
   1)ಕಳೆದ ಎರಡು ವರ್ಷಗಳಿಂದ ಸ್ವಸಹಾಯ ಸಂಘ ರೂಪಿಸುವ ಮೂಲಕ ನಮ್ಮ ವಿಶೇಷ ಚೇತನರ ಬದುಕಿನಲ್ಲಿ ಹೊಸ ಬಾಗಿಲು ತೆರೆಯಲು ಸಾಧ್ಯವಾಗಿದೆ. ಸ್ವಾವಲಂಬಿ ಬದುಕಿನ ಜೊತೆಗೆ ಸಮಾಜದ ಋಣ ತೀರಿಸುವಲ್ಲಿ ನಾವು ತಯಾರಿಸುವ ಪರಿಸರ ಸ್ನೇಹಿ ಪೆನ್ ಸಾರ್ಥಕತೆ ಪಡೆದಿದೆ. ಜೊತೆಗೆ ಪೇಪರ್ ಬ್ಯಾಗ್, ಎಲ್‍ಇಡಿ ಬಲ್ಬ್, ಕೊಡೆಗಳನ್ನೂ ತಯಾರಿಸುತ್ತಿದ್ದು, ಉತ್ತಮ ಆದಾಯ ಲಭ್ಯವಾಗುತ್ತಿದೆ. ಇದೀಗ ಸ್ವಂತ ಕಟ್ಟಡ ನಿರ್ಮಾಣಗೊಂಡಿರುವುದು ಇನ್ನಷ್ಟು ದುಡಿಯಲು ಬಲ ನೀಡಿದೆ.
                                               ಹನೀಫ್ ಮೌಲವಿ.
                                             ಸಂಘದ ಕಾರ್ಯದರ್ಶಿ
...........................................................................................................................................................
    2)ವಿಶೇಷ ಚೇತನರ ಸಂಪೂರ್ಣ ನೆರವಿಗಾಗಿ ಸರ್ಕಾರದ ಅನುದಾನಗಳನ್ನು, ನೆರವನ್ನು ನೀಡಲಾಗುವುದು. ಈಗಾಗಲೇ ವಿಶೇಷ ಚೇತನರನ್ನು ಗುರುತಿಸಿ, ತ್ರಿಚಕ್ರ ವಾಹನಗಳನ್ನು ನೀಡಲಾಗಿದೆ. ಜೊತೆಗೆ ಗುರುತುಪತ್ರಗಳನ್ನು ನೀಡಲಾಗುತ್ತಿದೆ. ಜಿಲ್ಲೆಯಲ್ಲೇ ಏಕೈಕವಾಗಿರುವ ಅಡ್ಕದ ವಿಶೇಷ ಚೇತನರ ಸ್ವಸಹಾಯ ಸಂಘದವರ ಸ್ವ ಉದ್ಯೋಗ, ತರಬೇತಿಗಳಿಗಾಗಿ ಬ್ಲಾಕ್ ಪಂಚಾಯತಿ ನಿಧಿಯಿಂದ ಕಟ್ಟಡ ನಿರ್ಮಿಸಿ ಕೊಡಲಾಗಿದ್ದು, ಮುಂದೆಯೂ ಅಗತ್ಯ ನೆರವು ಸಹಕಾರ ನೀಡಲಾಗುವುದು. ವಿಶೇಷ ಚೇತನರ ಇಂತಹ ಸಾಧನೆ ಎಲ್ಲರಿಗೂ ಮಾದರಿ, ಸ್ತುತ್ಯರ್ಹ
                             ಎ.ಕೆ.ಎಂ.ಅಶ್ರಫ್.
                            ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries