ಬದಿಯಡ್ಕ: ಹಲಸಿನ ಮೌಲ್ಯ ವರ್ಧಿತ ಉತ್ಪನ್ನಗಳು ಒಂದೇ ವೇದಿಕೆಯಡಿಯಲ್ಲಿ ಪ್ರದರ್ಶನ ಹಾಗೂ ಮಾರಾಟಗೊಳ್ಳುವುದರಿಂದ ಹಲಸಿಗೊಂದು ಹೊಸ ಆಯಾಮವನ್ನು ಕಲ್ಪಿಸಿದಂತಾಗುತ್ತದೆ. ಹಿಂದೆ ಬಡವರ ಫಲವಾಗಿದ್ದ ಹಲಸು ಇಂದು ಶ್ರೀಮಂತಿಕೆಯಿಂದ ಅಪಾರ ಬೇಡಿಕೆಯನ್ನು ಪಡೆದುಕೊಂಡಿದೆ ಎಂದು ಬದಿಯಡ್ಕ ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹೇಳಿದರು.
ಗುರುವಾರ ಬದಿಯಡ್ಕ ಗ್ರಾಮಪಂಚಾಯತಿ, ಕುಟುಂಬಶ್ರೀ ಸಿ.ಡಿ.ಎಸ್. ವತಿಯಿಂದ ಬದಿಯಡ್ಕ ಶ್ರೀ ಗುರುಸದನದಲ್ಲಿ ನಡೆದ ಹಲಸುಮೇಳಕ್ಕೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು.
ಇಂದು ಹಲಸಿನ ಉತ್ಪನ್ನಗಳನ್ನು ತಯಾರಿಸಿ ಮಾರಾಟಮಾಡುವ ಮೂಲಕ ಅನೇಕ ಮಹಿಳೆಯರು ತಮ್ಮ ಆರ್ಥಿಕ ಸಂಕಷ್ಟಕ್ಕೆ ಪರಿಹಾರವನ್ನು ಕಂಡುಕೊಳ್ಳುತ್ತಿದ್ದಾರೆ. ಹಲಸಿನ ಯಾವ ಭಾಗಗಳೂ ಬಳಕೆ ರಹಿತವಾಗುವುದಿಲ್ಲ. ಅದರ ಎಲ್ಲಾ ವಸ್ತಗಳಿಗೂ ಇಂದು ಉತ್ತಮ ಬೇಡಿಕೆಯಿದ್ದು, ಬದುಕು ಕಟ್ಟಿಕೊಳ್ಳಲು, ಜೀವನಕ್ಕೆ ಆಧಾರವಾಗಬಲ್ಲುದು ಎಂದರು.
ಈ ಸಂದರ್ಭದಲ್ಲಿ ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷ ಸುಧಾಜಯರಾಂ, ಗ್ರಾ.ಪಂ.ಉಪಾಧ್ಯಕ್ಷೆ ಸೈಬುನ್ನೀಸ ಮೊಯ್ದೀನ್, ಸ್ಥಾಯಿಸಮಿತಿ ಅಧ್ಯಕ್ಷರುಗಳಾದ ಅನ್ವರ್ ಓಸೋನ್, ಶ್ಯಾಮಪ್ರಸಾದ ಮಾನ್ಯ, ಶಬಾನಾ, ಸದಸ್ಯರುಗಳಾದ ಮುನೀರ್, ಜಯಶ್ರೀ, ಜಯಂತಿ, ಪ್ರಸನ್ನ, ಲಕ್ಷ್ಮೀನಾರಾಯಣ ಪೈ, ವಿಶ್ವನಾಥ ಪ್ರಭು, ಮುಹಮ್ಮದ್, ಬಾಲಕೃಷ್ಣ ಶೆಟ್ಟಿ ಕಡಾರು, ಪ್ರೇಮ ಕುಮಾರಿ, ಅನಿತಾ ಕ್ರಾಸ್ತಾ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
ಹಲಸುಮೇಳದಲ್ಲಿ ಅನೇಕ ಸ್ಟಾಲ್‍ಗಳಲ್ಲಿ ಹಲಸಿನ ಐಸ್ ಕ್ರೀಂ, ಕೊಟ್ಟಿಗೆ, ಗೆಣಸಲೆ, ಅಪ್ಪ (ಸುಟ್ಟವು), ಚಿಪ್ಸ್, ಹಲ್ವ, ಉಂಡಲಕಾಳು ಹಾಗೂ ಇನ್ನಿತರ ಹಲಸಿನ ಉತ್ಪನ್ನಗಳಿದ್ದವು. ವಿವಿಧ ಜಾತಿಯ ತರಕಾರಿ ಬೀಜಗಳು, ಬಟ್ಟೆ ಮಳಿಗೆಗಳು ಹಲಸಿನ ಮೇಳದ ಉತ್ಪನ್ನಗಳ ಜೊತೆಗೆ ಮಾರಾಟಗೊಂಡವು. ಮಂಗಳೂರು, ಮೂಲ್ಕಿ, ಹೊಸನಗರ, ಪುತ್ತೂರು ಕಾಸರಗೋಡು, ಮಂಜೇಶ್ವರ, ಬದಿಯಡ್ಕ ಸಹಿತ ಅನೇಕ ಕಡೆಗಳಿಂದ ವ್ಯಾಪಾರಿಗಳು ತಮ್ಮ ಮಳಿಗೆಯನ್ನು ಜೋಡಿಸಿದ್ದರು.



